ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ: ಸಂಘಟನೆಗಳ ಸಂಭ್ರಮ

ಪ್ರಸ್ತುತ ವರ್ಷ ಮೂರು ದಿನ ಗಣೇಶೋತ್ಸವಕ್ಕೆ ಅವಕಾಶ: ಮೇಯರ್‌ ಈರೇಶ ಅಂಚಟಗೇರಿ
Last Updated 30 ಆಗಸ್ಟ್ 2022, 5:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾಕಷ್ಟು ಪರ–ವಿರೊಧಗಳ ಚರ್ಚೆ ಹಾಗೂ ವಿವಿಧ ಸಂಘಟನೆಗಳ ಅಪಸ್ವರದ ನಡುವೆಯೇ ನಗರದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ರಚನೆಯಾದ ಸದನ ಸಮಿತಿ ವರದಿಯಾಧರಿಸಿ ಕಾನೂನು ಸಲಹೆ ಪಡೆದ ಮೇಯರ್‌ ಈರೇಶ ಅಂಚಟಗೇರಿ, ಮೂರು ದಿನಗಳ ಗಣೇಶೋತ್ಸವಕ್ಕೆ ಪಾಲಿಕೆ ಅವಕಾಶ ನೀಡುತ್ತಿದೆ ಎಂದು ಘೋಷಣೆ ಮಾಡಿದರು.

ಈ ಐತಿಹಾಸಿಕ ನಿರ್ಣಯದಿಂದ ವಿವಿಧ ಗಣೇಶೋತ್ಸವ ಸಮಿತಿ ಮತ್ತು ಹಿಂದೂ ಸಂಘಟನೆಗಳ ಸದಸ್ಯರು ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪ್ರಮೋದ ಮುತಾಲಿಕ್‌ ನೇತೃತ್ವದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಪರಸ್ಪರ ಸಹಿ ತಿನ್ನಿಸಿ, ಜೈ ಗಣೇಶ ಎಂದು ಘೋಷಣೆ ಕೂಗಿದರು. ಈ ಮೊದಲು ರಮ್‌ಜಾನ್‌, ಬಕ್ರೀದ್‌ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರಿಗೆ ಪ್ರಾರ್ಥನೆ ಸಲ್ಲಿಸಲು ಮಾತ್ರ ಮೈದಾನ ಅವಕಾಶ ನೀಡಲಾಗುತ್ತಿತ್ತು. ಇದೀಗ ಗಣೇಶ ಚೌತಿಗೂ ಅವಕಾಶ ದೊರೆತಂತಾಗಿದೆ.

‘ವರ್ಷದಲ್ಲಿ ಎರಡು ದಿನ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರಿಗೆ ಪ್ರಾರ್ಥನೆ ಮಾಡಲು ಹಾಗೂ ಎರಡು ದಿನ ರಾಷ್ಟ್ರೀಯ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುತ್ತಿದೆ. ಉಳಿದ ದಿನಗಳಲ್ಲಿ ಅಲ್ಲಿ ಕೆಲವು ವ್ಯಾಪಾರಸ್ಥರಿಗೆ ಸಣ್ಣ–ಪುಟ್ಟ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತಿದೆ. ಅಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕೆಂದು ಕೆಲವು ಸಂಘಟನೆಗಳು ಪಾಲಿಕೆಗೆ ಮನವಿ ಸಲ್ಲಿಸುತ್ತ ಬಂದಿವೆ. ಆ ಕುರಿತು ಸಾಮಾನ್ಯ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಸಿ, ಸದನ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ, ಪೊಲೀಸ್‌ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ ಅಭಿಪ್ರಾಯದ ಮೇರೆಗೆ ಮೂರು ದಿನ ಗಣೇಶ ಉತ್ಸವಕ್ಕೆ ಅವಕಾಶ ನಿಡಲಾಗಿದೆ’ ಎಂದು ಮೇಯರ್‌ ಈರೇಶ ಅಂಚಟಗೇರಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಎಲ್ಲ ಸಮುದಾಯದವರು ಸಹಕಾರ ನೀಡುವ ಭರವಸೆಯಿದೆ. ಕಾನೂನು ಸುವ್ಯವಸ್ಥೆಗೂ ಸಮಸ್ಯೆಯಾಗದು. ಯಾವುದೇ ಊಹಾಪೋಹದ ಚರ್ಚೆಗೆ ಅವಕಾಶ ನೀಡದೆ, ನಾಗರಿಕರ ಬೇಡಿಕೆಗೆ ಸ್ಪಂದಿಸಲಾಗಿದೆ. ಪ್ರತಿಷ್ಠಾಪನೆಗೆ ಅವಕಾಶ ದೊರೆತವರು ಸಹ ಶಾಂತಿ ಕಾಪಾಡಬೇಕು’ ಎಂದು ವಿನಂತಿಸಿದರು.

‘ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕರು ಮತ್ತು ಜಿಲ್ಲಾಧ್ಯಕ್ಷರೇ ಸದನ ಸಮಿತಿಗೆ ಹೆಸರನ್ನು ಸೂಚಿಸಿದ್ದರು. ಸಮಿತಿಯು ವರದಿ ಸಲ್ಲಿಸುವ ಕೊನೆ ಗಳಿಗೆಯಲ್ಲಿ ಬಂದ ಸಮಿತಿಯಲ್ಲಿದ್ದ ಕಾಂಗ್ರೆಸ್‌ ಸದಸ್ಯರು, ವರದಿಗೆ ವಿರೋಧವಿದೆ ಎಂದು ಮನವಿ ಸಲ್ಲಿಸುತ್ತಾರೆ. ಸಮಿತಿ ರಚನೆ ಮಾಡುವಾಗ ಇಲ್ಲದ ವಿರೋಧ, ಕೊನೆ ಸಂದರ್ಭದಲ್ಲಿ ಯಾಕೆ?’ ಎಂದು ಪ್ರಶ್ನಿಸಿದರು.

‘ಭಾವೋದ್ವೇಗಕ್ಕೆ ಒಳಗಾಗದಿರಿ’: ‘ಶಾಸಕರಾದ ಜಗದೀಶ ಶೆಟ್ಟರ್‌, ಪ್ರಸಾದ ಅಬ್ಬಯ್ಯ ಮತ್ತು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ನಗರದಲ್ಲಿ ಇಲ್ಲ. ಉಳಿದಂತೆ ಸ್ಥಳೀಯ ಎಲ್ಲ ಜನಪ್ರತಿನಿಧಿಗಳ ಅಭಿಪ್ರಾಯದ ಮೇರೆಗೆ ಪಾಳಿಕೆ ನಿರ್ಣಯ ತೆಗೆದುಕೊಂಡಿದೆ. ಈದ್ಗಾದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸುವುದರಿಂದ ಯಾರಿಗೂ ಸಮಸ್ಯೆ ಆಗದು. ಶಾಂತಿ ಸುವ್ಯವಸ್ಥೆಗೂ ಭಂಗವಾಗದು. ಆ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಯಾರೊಬ್ಬರೂ ಉದ್ವೇಗಕ್ಕೆ ಒಳಗಾಗದೆ, ಭಕ್ತಿ ಭಾವದಿಂದ ಹಬ್ಬ ಆಚರಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘ಬೇರೆಡೆ ಇರುವ ಈದ್ಗಾ ಮೈದಾನಗಳು ವಕ್ಫ್‌ ಮಂಡಳಿ ಹಾಗೂ ಬೇರೆ ಬೇರೆ ಹೆಸರಿನಲ್ಲಿ ಇವೆ. ಹುಬ್ಬಳ್ಳಿಯ ಈದ್ಗಾ ಮೈದಾನ ಪಾಲಿಕೆ ಆಸ್ತಿ. ಇದರಲ್ಲಿ ಗೊಂದಲವಿಲ್ಲ. ಎಲ್ಲ ಹಬ್ಬಗಳನ್ನು ಪಾಲಿಕೆ ಮಾಡಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಮೈದಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಪಾಲಿಕೆಯೇ ನಿರ್ಧರಿಸಲಿದೆ’ ಎಂದು ಹೇಳಿದರು.

ಪೊಲೀಸ್ ಪಥಸಂಚಲನ: ಗಣೇಶ ಚತುರ್ಥಿ ಅಂಗವಾಗಿ ಹುಧಾ ಪೊಲೀಸ್ ಕಮಿಷನರೇಟ್ ಘಟಕದ ಸಿಬ್ಬಂದಿ ಸೋಮವಾರ ನಗರದ ವಿವಿಧೆಡೆ ಪಥಸಂಚಲನ ನಡೆಸಿದರು. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ನಡೆದ ಪಥಸಂಚಲನ ಚನ್ನಮ್ಮ‌ ವೃತ್ತದಿಂದ ಆರಂಭವಾಗಿ, ಈದ್ಗಾ ಮೈದಾನ, ಲ್ಯಾಮಿಂಗ್ಟನ್ ರಸ್ತೆ, ಕೊಪ್ಪಿಕರ್ ರಸ್ತೆ, ದುರ್ಗದ ಬೈಲ್, ಸಿಬಿಟಿ, ಗಣೇಶಪೇಟೆ, ಲ್ಯಾಮಿಂಗ್ಟನ್‌ ರಸ್ತೆ, ದಾಜೀಬಾನ್‌ಪೇಟೆಯಲ್ಲಿ ಸಾಗಿತು. ಹಳೇಹುಬ್ಬಳ್ಳಿ ಭಾಗದಲ್ಲಿಯೂ ಪಥ ಸಂಚಲನ ನಡೆಯಿತು. ಕ್ಷಿಪ್ರ ಕಾರ್ಯಾಚರಣೆ ಪಡೆ, ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಇದ್ದರು.

ಪರ–ವಿರೋಧ ಮನವಿ: ಹುಬ್ಬಳ್ಳಿ ಧಾರವಾಡ ನಾಗರಿಕ ಸಮಿತಿ ಶಂಕರ ಅಜಮಿ, ಕರ್ನಾಟಕ ಸಂಗ್ರಾಮ ಸೇನೆ ಸಂಜೀವ ದುಮ್ಮಕನಾಳ, ಸುವರ್ಣ ಕಲಕುಂಟ್ಲ ಸೇರಿ ಇತರರು ವಿರೋಧಿಸಿ ಮನವಿ ಸಲ್ಲಿಸಿದರೆ, ವೀರಶೈವ ಲಿಂಗಾಯತ ಯುವ ವೇದಿಕೆ, ಧಾರವಾಡ ಸಮಿತಿ ಸಮಾಜ ಹಾಗೂ ಇತರ ಸಂಘಟನೆಗಳು ಪರವಾಗಿ ನವಿ ಸಲ್ಲಿಸಿದವು.

ಒಂದು ಸಮಿತಿಗೆ ಉತ್ಸವದ ಅವಕಾಶ: ‘ಭಗತ್ ಸಿಂಗ್ ಸೇವಾ ಸಮಿತಿ, ಹಿಂದೂ ಜಾಗರಣ ವೇದಿಕೆ, ರಾಣಿ ಚನ್ನಮ್ಮ ಗಣೇಶೊತ್ಸವ ಸಮಿತಿ, ಗಜಾನನ ಮಂಡಳಿ ಹುಬ್ಬಳ್ಳಿ, ಶ್ರೀರಾಮ ಸೇನೆ ಮತ್ತು ರಾಣಿ ಚನ್ನಮ್ಮ ಮೈದಾನ ಗಣೇಶೋತ್ಸವ ಸಮಿತಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ರ್ಜಿ ಸಲ್ಲಿಸಿವೆ. ಯಾರಿಗೇ ನೀಡಿದರೂ ಪರವಾಗಿಲ್ಲ. ಉತ್ಸವಕ್ಕೆ ಅವಕಾಶ ನೀಡಬೇಕು ಎಂದು ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ್‌ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಹೇಳಿದ್ದಾರೆ. ಅದರಂತೆ ಇತರ ಸಮಿತಿಗಳು ಹಾಗೆಯೇ ತಿಳಿಸಿವೆ. ಹೀಗಾಗಿ ಯಾವುದೇ ಉತ್ಸವ ಸಮಿತಿಗೆ ಅವಕಾಶ ನೀಡಿದರೂ ಸಮಸ್ಯೆಯಾಗದು’ ಮೇಯರ್‌ ಈರೇಶ ಅಂಚಟಗೇರಿ ಹೇಳಿದರು.

ಕೊನೆ ಗಳಿಗೆಯ ರಾಜಕೀಯ ವಿದ್ಯಮಾನ: ಸೋಮವಾರ 11ಕ್ಕೆ ವರದಿ ಸಲ್ಲಿಸಬೇಕಿದ್ದ ಪಾಲಿಕೆ ಸದನ ಸಮಿತಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕೆನ್ನುವ ಹಿನ್ನೆಲೆಯಲ್ಲಿ ಮೇಯರ್‌ ಅನುಮತಿ ಪಡೆದು ಸಂಜೆ ವೇಳೆ ವರದಿ ಸಲ್ಲಿಸುವುದಾಗಿ ತಿಳಿಸಿತ್ತು. ಪಾಲಿಕೆ ಸಭಾನಾಯಕರ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಂದು, ಪರ, ವಿರೋಧದ ಕುರಿತು ಮನವಿ ಸಲ್ಲಿಸಿದ್ದರು. ಅದೇ ವೇಳೆ ಸಮಿತಿಯಲ್ಲಿದ್ದ ಕಾಂಗ್ರೆಸ್‌ ಸದಸ್ಯರಾದ ನಿರಂಜನ ಹಿರೇಮಠ ಮತ್ತು ಇಮ್ರಾನ್‌ ಎಲಿಗಾರ ಅವರು ಸಮಿತಿ ರಚನೆಯೇ ಸಂವಿಧಾನ ಬಾಹಿರ. ರದ್ದು ಪಡಿಸಬೇಕು ಎಂದು ಸಮಿತಿ ಅಧ್ಯಕ್ಷರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು. ಮೇಯರ್‌ ಅವರಿಗೆ ವರದಿ ಸಲ್ಲಿಸುವಾಗ ನಿರಂಜನ ಹಿರೇಮಠ ಮಾತ್ರ ಇದ್ದರು. ಇಮ್ರಾನ್‌ ಎಲಿಗಾರ ಅಲ್ಲಿಯೇ ಇದ್ದರೂ, ಪಾಲ್ಗೊಳ್ಳದೆ ಹೊರಗೆ ನಡೆದರು.

ಸರಣಿ ಸಭೆ; ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ: ಗಣೇಶ ಚೌತಿ ಮತ್ತು ಈದ್ಗಾದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ವಿಷಯದ ಹಿನ್ನೆಲೆಯಲ್ಲಿ ಸೋಮವಾರ ನಗರದ ವಿವಿಧೆಡೆ ಅಧಿಕಾರಿಗಳು, ಜನಪ್ರತಿನಿಧಿಗಳು ಸರಣಿ ಸಭೆ ನಡೆಸಿದರು. ಬೆಳಿಗ್ಗೆ ನವನಗರದ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ ಕುಮಾರ್‌, ಧಾರವಾಡ ಜಿಲ್ಲಾ ಮತ್ತು ಕಮಿಷನರೇಟ್‌ ಘಟಕದ ಪೊಲೀಸ್‌ ಅಧಿಕಾರಿಗಳ ಜೊತೆ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಿದರು. ನಂತರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸದಲ್ಲಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ. ಸಿಇಒ ಸುರೇಶ ಇಟ್ನಾಳ್‌, ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ಕಮಿಷನರ್‌ ಲಾಭೂರಾಮ್‌ ಜೊತೆ ಚರ್ಚೆ ನಡೆಯಿತು. ನಂತರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಡಿಜಿಪಿ ಅಲೋಕ್‌ಕುಮಾರ್‌, ಕಮಿಷನರ್‌ ಲಾಭೂರಾಮ್‌ ಅವರು ಉಪನಗರ ಪೊಲೀಸ್‌ ಠಾಣೆಯ ಸಭಾಭವನದಲ್ಲಿ ಪ್ರತ್ಯೇಕ ಸಭೆ ನಡೆಸಿ, ಶಾಂತಿ ಸುವ್ಯವಸ್ಥೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.

ಅರ್ಜಿ: 278 ಪರ, 11 ವಿರೋಧ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಷಯ ಕುರಿತು ಪಾಲಿಕೆ ಸಾಮಾನ್ಯ ಸಭೆಯಲ್ಲಿ ರಚಿಸಿದ್ದ ಸದನ ಸಮಿತಿಗೆ ಒಟ್ಟು 39 ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರತಿಷ್ಠಾಪನೆ ಪರವಾಗಿ 28, ವಿರೋಧಿಸಿ 11 ಅರ್ಜಿಗಳು ಸಲ್ಲಿಕೆಯಾಘಿದ್ದವು. ಆರು ಸಂಘಟನೆಗಳು ಮಾತ್ರ ತಾವೇ ಪ್ರತಿಷ್ಠಾಪಿಸುತ್ತೇವೆ ಎಂದು ಅರ್ಜಿ ಸಲ್ಲಿಸಿವೆ’ ಎಂದು ಸದನ ಸಮಿತಿ ಅಧ್ಯಕ್ಷ ಸಂತೋಷ ಚವ್ಹಾಣ್‌ ಹೇಳಿದರು.

ಮುಂಜಾಗ್ರತ ಕ್ರಮವಾಗಿ ಪೊಲೀಸ್‌ ಇಲಾಖೆ ಈದ್ಗಾ ಮೈದಾನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ, ಪೊಲೀಸ್‌ ಬಂದೋಬಸ್ತ್‌ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT