ಧರಣಿ ನಡೆಸಿದ್ದಕ್ಕೆ ಹಲ್ಲೆ ಆರೋಪ: ವಿಚಾರಣೆ

ಶನಿವಾರ, ಮೇ 25, 2019
32 °C

ಧರಣಿ ನಡೆಸಿದ್ದಕ್ಕೆ ಹಲ್ಲೆ ಆರೋಪ: ವಿಚಾರಣೆ

Published:
Updated:
Prajavani

ಧಾರವಾಡ: ಕಲಘಟಗಿ ತಾಲ್ಲೂಕಿನ ದುಮ್ಮವಾಡ ಗ್ರಾಮ ಪಂಚಾಯ್ತಿ ಅವ್ಯವಹಾರ ಖಂಡಿಸಿ ಧರಣಿ ಕುಳಿತ ವ್ಯಾಪಾರಿ ಮಲ್ಲಿಕಾರ್ಜುನ ರೊಟ್ಟಿಗವಾಡ ಅವರ ಮೇಲೆ ಸ್ಥಳೀಯ ಪುಡಾರಿಗಳು ಹಲ್ಲೆ ಮಾಡಿದ ಪ್ರಕರಣ ದುಮ್ಮವಾಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಕಣವಿಹೊನ್ನಾಪೂರದ ನಿವಾಸಿ ಮಲ್ಲಿಕಾರ್ಜುನ ರೊಟ್ಟಿಗವಾಡ ಹಲ್ಲೆಗೆ ಒಳಗಾದ ವ್ಯಕ್ತಿ.‌ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಂಕವ್ವ ಬೆಟದೂರ ಅವರ ಪತಿ ಧನಪಾಲ್‌ ಬೆಟದೂರ, ಸದಸ್ಯ ಮೈಲಾರಿ ಕಡ್ಡಿಪುಡಿ, ಚಂದ್ರು ಯಡಣ್ಣವರ, ಶಿಕ್ಷಕ ಬಸವರಾಜ ಹೊನ್ನಳ್ಳಿ ಎಂಬುವವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಆರೋಪಿಸಿದ್ದಾರೆ.

ಹಲ್ಲೆಯಿಂದ ತೆಲೆಯಿಂದ ರಕ್ತ ಸುರಿಯುತ್ತಿರುವುದನ್ನೂ ಲೆಕ್ಕಿಸದೆ  ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟಿಸಲು ಮುಂದಾದ ಮಲ್ಲಿಕಾರ್ಜುನ ರೊಟ್ಟಿಗವಾಡ ಪೊಲೀಸರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾದರು.

ದುಮ್ಮವಾಡ ಗ್ರಾಮ ಪಂಚಾಯ್ತಿ 14ನೇ ಹಣಕಾಸಿನ‌ ನಿಧಿ-1 ರಲ್ಲಿ ಅಧಿಕಾರಿಗಳಿಲ್ಲದೇ ಸಭೆ ನಡೆಸಿ, ಠರಾವು ಪಾಸು ಮಾಡದೇ, ಸುಮಾರು ₹40 ಲಕ್ಷ ಅವ್ಯವಹಾರ ಮಾಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಮಲ್ಲಿಕಾರ್ಜುನ ಅವರು ಮಾಹಿತಿ ಪಡೆದು ಅವ್ಯವಹಾರ ಖಂಡಿಸಿ, ಗುರುವಾರ ಪಂಚಾಯ್ತಿ ಪರವಾನಿಗೆ ಪಡೆದು ಧರಣಿ ಕುಳಿತಿದ್ದರು.

ಮಲ್ಲಿಕಾರ್ಜುನ ರೊಟ್ಟಿಗವಾಡ ಅವರ ಪ್ರತಿಭಟನೆ ವಿರೋಧ ವ್ಯಕ್ತಪಡಿಸಿದ ಅಧ್ಯಕ್ಷೆ ಸಂಕವ್ವ ಬೆಟದೂರ ಹಾಗೂ ಅವರ ಪತಿ ಧನಪಾಲ್ ಬೆಟದೂರ, ಸದಸ್ಯ ಮೈಲಾರಿ ಕಡ್ಡಿಪುಡಿ ಸೇರಿ ನಾಲ್ವರು ಹಲ್ಲೆ ಮಾಡಿದ್ದಾರೆ. ಪ್ರತಿಭಟನೆ ಸ್ಥಳದ ಪೆಂಡಾಲ್ ಕಿತ್ತು ಹಾಕಿದ್ದಾರೆ. ತೆಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ. ದೂರು ನೀಡಲು ಕಲಘಟಗಿ ಠಾಣೆಗೆ ಹೋಗಲೂ ಬಿಡಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟಿಸುತ್ತಿರುವುದಾಗಿ ಮಲ್ಲಿಕಾರ್ಜುನ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ‘ಈ ವಿಷಯ ಗಮನಕ್ಕೆ ಬಂದ ಕೂಡಲೇ ವಿಚಾರಣೆ ನಡೆಸುವಂತೆ ಕಲಘಟಗಿ ಇನ್‌ಸ್ಪೆಕ್ಟರ್‌ಗೆ ಸೂಚಿಸಲಾಗಿದೆ. ಪ್ರತಿಭಟನೆ ನಡೆಸಿದ ವ್ಯಕ್ತಿ ತಾನೇ ತಲೆಗೆ ಹೊಡೆದುಕೊಂಡು ಗಲಾಟೆ ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಕುರಿತಂತೆ ಗ್ರಾಮದಲ್ಲಿ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !