ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌ಐ ನಿಷೇಧ: ಸಂಭ್ರಮಾಚರಣೆ

ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಬಿಜೆಪಿ ನಾಯಕರು
Last Updated 28 ಸೆಪ್ಟೆಂಬರ್ 2022, 15:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಮೇಲೆ ನಿಷೇಧ ಹೇರಿರುವುದಕ್ಕೆ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.‌ ಮತ್ತೊಂದೆಡೆ, ಶ್ರೀರಾಮ ಸೇನೆ ಕಾರ್ಯಕರ್ತರು ನಗರದಲ್ಲಿ ಸಂಭ್ರಮಾಚರಿಸಿದ್ದಾರೆ.

ಹಳೇ ಹುಬ್ಬಳ್ಳಿಯ ದುರ್ಗದಬೈಲ್‌ ವೃತ್ತದಲ್ಲಿ ಶ್ರೀರಾಮ ಸೇನೆಯ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ ದೇವಟಿಗಿ ಮತ್ತು ಕಾರ್ಯದರ್ಶಿ ಮಂಜುನಾಥ ಕಾಟಿಗರ ನೇತೃತ್ವದಲ್ಲಿ ಜಮಾಯಿಸಿದ 15ಕ್ಕೂ ಹೆಚ್ಚು ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸಿದರು. ಸರ್ಕಾರದ ನಿರ್ಧಾರಕ್ಕೆ ಜೈಕಾರ ಹಾಕಿದರು.

ಬಿಜೆಪಿ ಸ್ವಾಗತ: ಕೇಂದ್ರ ಸರ್ಕಾರದ ನಿರ್ಧಾರವನ್ನು ಮಹಾನಗರ ಬಿಜೆಪಿ ಘಟಕ ಸ್ವಾಗತಿಸಿದೆ. ‘ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದವು. ಅದರ ಮೇಲೆ ನಿಷೇಧ ಹೇರಲು ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದವು. ಆದರೆ, ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್ ಸಂಘಟನೆಯನ್ನು ನಿಷೇಧಿಸಲು ಹಿಂದೇಟು ಹಾಕಿತ್ತು’ ಎಂದು ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಕಪಟಕರ ಹಾಗೂ ಜಿಲ್ಲಾ ವಕ್ತಾರ ರವಿ ನಾಯಕ ತಿಳಿಸಿದ್ದಾರೆ.

‘ಪಿಎಫ್‌ಐ ನಿಷೇಧವನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ, ದೇಶಭಕ್ತ ಸಂಘಟನೆಯಾದ ಆರ್‌ಎಸ್‌ಎಸ್‌ ಸಹ ನಿಷೇಧಿಸಿ ಎಂದು ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ಅನ್ನು ಪಿಎಫ್‌ಐಗೆ ಹೋಲಿಸಿರುವುದು ಸರಿಯಲ್ಲ’ ಎಂದುಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ದೇಶದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತಂದು ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಪಿಎಫ್‌ಐ ವಿರುದ್ಧ ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ’ ಎಂದು ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ ಚವ್ಹಾಣ ತಿಳಿಸಿದ್ದಾರೆ.

ದೇಶ ವಿರೋಧಿಗಳಿಗೆ ಕಠಿಣ ಸಂದೇಶ: ಜೋಶಿ

‘ಪಿಎಫ್‌ಐ ಮೇಲಿನ ನಿಷೇಧವು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಕಠಿಣ ಸಂದೇಶ. ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ರಾಷ್ಟ್ರೀಯ ಸುರಕ್ಷತೆಯೇ ಸರ್ವೋಚ್ಛ ಆದ್ಯತೆಯಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಅಪಾಯಕಾರಿಯಾಗಿದ್ದ ಚಟುವಟಿಕೆಗಳು ಇನ್ನು ಮುಂದೆ ಸ್ಥಗಿತಗೊಳ್ಳಲಿವೆ. ದೇಶ ಸುರಕ್ಷಿತವಾಗಿರಲಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಐತಿಹಾಸಿಕ ನಿರ್ಧಾರ: ಶೆಟ್ಟರ್

‘ಪಿಎಫ್‌ಐ ಮೇಲಿನ ನಿಷೇಧದ ನಿರ್ಧಾರವು ಐತಿಹಾಸಿಕವಾದುದು. ದೇಶದಲ್ಲಿ ಅಶಾಂತಿಗೆ ಕಾರಣವಾಗಿದ್ದ ಸಂಘಟನೆಯನ್ನು ನಿಷೇಧಿಸಬೇಕೆಂಬ ಮನವಿ ಮೇರೆಗೆ ಕೈಗೊಂಡಿರುವ ಈ ನಿರ್ಧಾರ, ದೇಶದ್ರೋಹಿ ಸಂಘಟನೆಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಇಂತಹ ಸಂಘಟನೆಗಳ ಬಗ್ಗೆ ಮೃದು ಧೋರಣೆ ಹೊಂದಿದ್ದ ಕೆಲ ರಾಜಕೀಯ ಪಕ್ಷಗಳಿಗೆ ನಿಷೇಧದ ನಿರ್ಧಾರ ತೀವ್ರ ಆಘಾತ ತಂದಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT