ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷೆಗಿದೆ ಆದ್ಯತೆ– ಶುರುವಾಗಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ

‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮ
Last Updated 5 ಜೂನ್ 2020, 15:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸುರಕ್ಷಾ ಕ್ರಮಗಳೊಂದಿಗೆ ಎಸ್‌ಎಸ್‌ಎಲ್‌ಸಿ‌ ಪರೀಕ್ಷೆ ನಡೆಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಆತಂಕ ಇಲ್ಲದೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಿದ್ಧರಾಗಬೇಕು.

ಶಿಕ್ಷಣ ಇಲಾಖೆ ಧಾರವಾಡ ಜಿಲ್ಲಾ ಉಪ ನಿರ್ದೇಶಕ ಮೋಹನಕುಮಾರ ಎಲ್‌. ಹಂಚಾಟೆ ಅವರ ಖಚಿತ ನುಡಿಗಳಿವು. ‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ, ಪಾಲಕರ ಕೊರೊನಾ ಭಯ, ಪಠ್ಯ, ಪರೀಕ್ಷೆಗಳ ನಡೆಸುವ ಕುರಿತ ಪ್ರಶ್ನೆಗಳಿಗೆ ಶುಕ್ರವಾರ ಉತ್ತರ ನೀಡಿದರು.

ಸುರಕ್ಷತಾ ಮಾರ್ಗಸೂಚಿ(ಎಸ್ಒಪಿ) ಅಳವಡಿಸಿಕೊಂಡು ಪರೀಕ್ಷೆ ನಡೆಸುವ ಭರವಸೆ ನೀಡಿದರು. ವಿದ್ಯಾರ್ಥಿಗಳಲ್ಲಿದ್ದ ಆತಂಕ ನಿವಾರಿಸಿದರು. ಈ ಹಿಂದೆ ನಿಗದಿಯಾಗಿದ್ದ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ನಡೆಯಲಿದೆ. ಹೊಸದಾಗಿ ಹಾಲ್ ‌ಟಿಕೆಟ್ ನೀಡಲಾಗುವುದು. ಕೇಂದ್ರದಲ್ಲಿ ಬದಲಾವಣೆ ಇದ್ದರೆ ಸ್ಪಷ್ಟವಾಗಿ ತಿಳಿಸಲಾಗುತ್ತದೆ. ಸುರಕ್ಷೆಯ ದೃಷ್ಟಿಯಿಂದ ಕೊಠಡಿಯೊಂದರಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯನ್ನು 24ರಿಂದ ಕನಿಷ್ಠ 18ಕ್ಕೆ ಇಳಿಸಲಾಗಿದೆ. ಸುರಕ್ಷತಾ ಅಂತರ ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ವಿವರಿಸಿದರು.

ಪರೀಕ್ಷಾ ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತದೆ. ಇದಕ್ಕಾಗಿ ಹೆಲ್ತ್‌ ಡೆಸ್ಕ್ ತೆರೆಯಲಾಗುವುದು. ವಿದ್ಯಾರ್ಥಿಗಳಲ್ಲಿ ಸೋಂಕಿನ ಲಕ್ಷಣಗಳಿದ್ದರೆ, ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗುತ್ತದೆ. ಇದಕ್ಕಾಗಿ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚುವರಿ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿಗಳಿಗೂ ವ್ಯವಸ್ಥೆ ಮಾಡಲಾಗಿದೆ. 364 ಮಂದಿ ಹೊರ ಜಿಲ್ಲೆಯಿಂದ ಧಾರವಾಡ ಜಿಲ್ಲೆಗೆ ಬಂದು ಪರೀಕ್ಷೆ ಬರೆಯಲಿದ್ದಾರೆ. ಅವರಿಗೆ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಪರೀಕ್ಷೆಗೂ ನಾಲ್ಕೈದು ದಿನ ಮೊದಲೇ ಇವು ತೆರೆಯಲಿವೆ.

ಪರೀಕ್ಷೆ ನಡೆಯುವಾಗ ಪರೀಕ್ಷಾ ಕೇಂದ್ರ ಇರುವ ಸ್ಥಳ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆಯಾದರೆ, ಅಂತಹ ಸಂದರ್ಭದಲ್ಲಿ ಸಮೀಪದಲ್ಲಿಯೇ ಇನ್ನೊಂದು ಕೇಂದ್ರದಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಸಾರಿಗೆ ಸಮಸ್ಯೆ ಆಗಬಹುದೆಂಬ ಆತಂಕವೂ ಇದೆ. ಆದರೆ ಬಸ್ ವ್ಯವಸ್ಥೆ ಮಾಡುವುದಾಗಿ ಶಿಕ್ಷಣ ಸಚಿವರು ಈಗಾಗಲೇ ಹೇಳಿದ್ದಾರೆ. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ ಎಂದರು.

ವಿಷಯಗಳ ಪುನರ್‌ ಮನನ ಮಾಡಿ

ಪರೀಕ್ಷೆಗೆ ತಯಾರಿ ನಡೆಸಿದ್ದ ವಿದ್ಯಾರ್ಥಿಗಳು, ತಾವು ಓದಿದ ವಿಷಯಗಳನ್ನು ಪುನರ್‌ಮನನ ಮಾಡಿಕೊಳ್ಳಿ. ಹೊಸದಾಗಿ ಪರೀಕ್ಷೆ ಎದುರಿಸುತ್ತಿದ್ದೇವೆ ಎಂದುಕೊಂಡು ಅಧ್ಯಯನ ವೇಳಾಪಟ್ಟಿ ನಿಗದಿ ಮಾಡಿಕೊಳ್ಳಿ. ಒಂದು ವಿಷಯಕ್ಕೆ ಕನಿಷ್ಠ ಎರಡು ಗಂಟೆ ಸಮಯ ನೀಡಿ ಎಂದು ಸಲಹೆ ನೀಡಿದರು.

* ಮಗನಿಗೆ ಪರೀಕ್ಷೆಗೆ ಬರೆಯಲು ಕೊರೊನಾ ಭಯ ಇದೆ

ಸುರಕ್ಷತೆಗೆ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀವು ಕೇವಲ ಓದು, ಪುನರ್‌ಮನನದತ್ತ ಗಮನ ಕೊಡಿ. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಅಂತರ ಕಾಯ್ದುಕೊಂಡು ಎಸ್‌ಎಸ್‌ಎಲ್‌ಸಿ ‌ಪರೀಕ್ಷೆ ನಡೆಸಲಾಗುವುದು.

* ನಾವಿರುವ ಮನೆ ಕಂಟೈನ್ಮೆಂಟ್‌ ಪ್ರದೇಶದಲ್ಲಿದೆ. ಮಗಳಿಗೆ ಪ್ರವೇಶಪತ್ರ ಕೊಟ್ಟು ಪರೀಕ್ಷೆಗೆ ಕರೆದುಕೊಂಡು ಹೋಗುವವರು ಯಾರು?

ಕಂಟೈನ್ಮೆಂಟ್‌ ಪ್ರದೇಶದಲ್ಲಿ ಇರುವವರಿಗೂ ಪರೀಕ್ಷೆಗೆ ಅವಕಾಶ ಇದೆ. ಜ್ವರದ ಲಕ್ಷಣ ಇದ್ದವರಿಗಾಗಿಯೇ ಪ್ರತ್ಯೇಕ ಕೊಠಡಿಗಳು ಇರಲಿವೆ. ಆದರೂ ಪರೀಕ್ಷೆಗೆ ಹಾಜರಾಗಲು, ಬರೆಯಲು ತೊಂದರೆಯಾದರೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು.

* ಮಕ್ಕಳಿಗೆ ‘ಎನ್‌ 95’ ಮಾಸ್ಕ್‌ ನೀಡಿದರೆ ಉಸಿರಾಟದ ತೊಂದರೆ ಆಗುವುದಿಲ್ಲವೇ?

‘ಎನ್‌ 95’ ಮಾಸ್ಕ್‌ ಸೋಂಕಿನ ಲಕ್ಷಣ ಇರುವ ಮಕ್ಕಳಿಗೆ ಮಾತ್ರ ಬಳಸಲು ಹೇಳಲಾಗಿದೆ. ಪರೀಕ್ಷಾರ್ಥಿ ಸಂವಹನ ನಡೆಸುವಾಗ ಮಾತ್ರ ಮಾಸ್ಕ್‌ ಧರಿಸಿರಬೇಕು. ಪರೀಕ್ಷಾ ಕೇಂದ್ರದಲ್ಲಿ ಬಟ್ಟೆಯ ಮಾಸ್ಕ್‌ ನೀಡಲಾಗುತ್ತಿದೆ.

* ನಾವು ಓದಿದ ಶಾಲೆಯಲ್ಲಿಯೇ ಪರೀಕ್ಷೆ ನಡೆಯುತ್ತಾ?

ಇಲ್ಲ. ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ನಡೆಯಲಿದೆ.

* ಹೊಸ ಪ್ರವೇಶಪತ್ರ ಬರುತ್ತಾ? ಪರೀಕ್ಷಾ ಕೇಂದ್ರ ಬದಲಾಗುತ್ತಾ?

ನಿಮಗೆಲ್ಲ ಹೊಸಪ್ರವೇಶ ಪತ್ರ ಬರುತ್ತದೆ. ಆದರೆ, ಪರೀಕ್ಷಾ ಕೇಂದ್ರ ಬದಲಾಗಲ್ಲ. ಒಂದಿಷ್ಟು ಕಡೆ ಪರೀಕ್ಷಾ ಉಪಕೇಂದ್ರಗಳು ಇರಲಿದ್ದು, ಈ ಬಗ್ಗೆ ನಿಮ್ಮ ಪ್ರವೇಶ ಪತ್ರದಲ್ಲಿಯೇ ಮಾಹಿತಿ ಸಿಗಲಿದೆ. ಇನ್ನು ಪರೀಕ್ಷಾ ಅವಧಿಯಲ್ಲೂ ಯಾವುದೇ ಬದಲಾವಣೆ ಇಲ್ಲ. ಆದರೆ, ವಿದ್ಯಾರ್ಥಿಗಳೆಲ್ಲ ಬೆಳಿಗ್ಗೆ 8.30ರ ವೇಳೆಗೆ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಎಲ್ಲರ ಆರೋಗ್ಯ ತಪಾಸಣೆಗೆ ಸಮಯ ಬೇಕಾಗುತ್ತದೆ.

* ಪರೀಕ್ಷೆಗೂ ಮುನ್ನ ತರಗತಿಗಳು ನಡೆಯಲಿವೆಯೇ?

ಇಲ್ಲ. ತರಗತಿಗಳನ್ನು ನಡೆಸುವುದಿಲ್ಲ. ಜೂನ್‌ 8ರಿಂದ ಶಾಲೆಗಳಲ್ಲಿ ಶಿಕ್ಷಕರು ಲಭ್ಯ ಇರುತ್ತಾರೆ. ಪಠ್ಯದ ಬಗ್ಗೆ ಸಂದೇಹಗಳಿದ್ದರೆ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಿ ಅಥವಾ ಶಿಕ್ಷಕರಿಗೆ ದೂರವಾಣಿ ಕರೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದು ಕಡ್ಡಾಯವಲ್ಲ.

* ಇಂಗ್ಲಿಷ್‌ ವಿಷಯದಲ್ಲಿ ನಾಲ್ಕು ಅಂಕದ ಪ್ರಶ್ನೆಗಳಿಗೆ ಉತ್ತರವನ್ನು ಪಾಯಿಂಟ್‌ಗಳಲ್ಲಿ ಬರೆಯಬಹುದೆ?

ವಿವರಣಾತ್ಮಕ ಉತ್ತರಗಳನ್ನು ಪ್ಯಾರಾದಲ್ಲಿ ಬರೆದರೆ ಸೂಕ್ತ. ಆಗ ಒಂದು ಪೀಠಿಕೆ, ವಿವರಣೆ ಹಾಗೂ ಉಪಸಂಹಾರ ಬರೆಯಲು ಸಾಧ್ಯವಾಗುತ್ತದೆ. ಅದು ಸಾಧ್ಯವಾಗದಿದ್ದರೆ ಪಾಯಿಂಟ್‌ಗಳ ರೂಪದಲ್ಲಿ ಉತ್ತರ ಬರೆದರೂ ಅಂಕ ನೀಡುತ್ತಾರೆ.

ಗಮನಿಸಬೇಕಾದ ಅಂಶಗಳು

*27,000 ಮಕ್ಕಳ ಪಾಲಕರಿಗೆ ಎಸ್‌ಎಂಎಸ್‌ ಮೂಲಕ ಪರೀಕ್ಷಾ ಕೇಂದ್ರದ ವಿವರ ರವಾನೆಗೆ ಸಿದ್ಧತೆ

*ವಾಟ್ಸ್‌ ಆ್ಯಪ್‌ ಮೂಲಕ ಕೊರೊನಾ ಆತಂಕ ನಿವಾರಣೆಗೆ ಪ್ರಯತ್ನ

*ಬಾಹ್ಯ ಅಭ್ಯರ್ಥಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆಗೆ ವ್ಯವಸ್ಥೆ. ಈ ಅಭ್ಯರ್ಥಿಗಳು ಸಂಬಂಧಿತ ಪ್ರೌಢಶಾಲೆಗಳ ಮುಖ್ಯಸ್ಥರಿಂದ ಭಾವಚಿತ್ರ ಇರುವ ದೃಢೀಕರಣ ಪತ್ರ ತರಬೇಕು.

*ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರವೇಶಪತ್ರ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು

ಪರೀಕ್ಷೆ ಮುಂದೂಡುವುದಿಲ್ಲ

‘ಒಂದು ಬಾರಿ ಪರೀಕ್ಷೆ ಮುಂದೂಡಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈಗ ಹೊಸದಾಗಿ ದಿನಾಂಕ ನಿಗದಿ ಮಾಡಲಾಗಿದೆ. ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಈ ವಿಷಯದಲ್ಲಿ ಇರುವ ಅನುಮಾನ– ಗೊಂದಲವನ್ನು ತಲೆಯಿಂದ ತೆಗೆದು ಹಾಕಿ’ ಎಂದು ಡಿಡಿಪಿಐ ಹಂಚಾಟೆ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಮುಖ್ಯ ಪರೀಕ್ಷೆ ಎಂದೇ ಪರಿಗಣನೆ

ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಯನ್ನು ತಪಾಸಣೆ ಮಾಡಿದಾಗ ಆತನಲ್ಲಿ ಸೋಂಕಿನ ಲಕ್ಷಣ ಇದ್ದು ಪರೀಕ್ಷೆ ಬರೆಯಲು ಸಾಧ್ಯವಾಗದ ಸ್ಥಿತಿ ಇದ್ದರೆ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ. ಆಗಲೂ ಮುಖ್ಯ ಪರೀಕ್ಷೆ ಎಂದೇ (ಫ್ರೆಶ್) ಪರಿಗಣಿಸಲಾಗುತ್ತದೆ. ಆದರೆ ಇದಕ್ಕೆ ಸಮರ್ಥ ಕಾರಣ ನೀಡಿದರೆ ಮಾತ್ರ ಈ ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಮಾಸ್ಕ್ ರೂಢಿಸಿ

ವಿದ್ಯಾರ್ಥಿಗಳೆಲ್ಲ ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ಧರಿಸಬೇಕಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಮಾಸ್ಕ್ ಧರಿಸಿ ಪರೀಕ್ಷೆ ಬರೆಯುವುದನ್ನು ಮನೆಯಲ್ಲಿಯೇ ಅಭ್ಯಾಸ ಮಾಡಿಸಿದರೆ ಸುಲಭವಾಗುತ್ತದೆ. ಇಲ್ಲವಾದರೆ ವಿದ್ಯಾರ್ಥಿಗಳಿಗೆ ಸ್ವಲ್ಪ ಕಷ್ಟ ಎನಿಸಲಿದೆ. ಮನೆಯಿಂದಲೇ ನೀರಿನ ಬಾಟಲ್‌ ಕೊಟ್ಟು ಕಳುಹಿಸಿ. ಇದರಿಂದ ಅಂತರ ಕಾಯ್ದುಕೊಳ್ಳುವುದು ಸುಲಭ.

ಡೆಮೊ ವಿಡಿಯೊ ಕಳುಹಿಸುತ್ತೇವೆ

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದು ಮನೆಗೆ ಹೋಗುವ ವರೆಗೆ ಅನುಸರಿಸಬೇಕಾದ ವಿಧಾನ, ನಡವಳಿಕೆ ಬಗ್ಗೆ ಸಂಪೂರ್ಣ ಮಾಹಿತಿ ಇರುವ ವಿಡಿಯೊ ತಯಾರಿಸಲಾಗುತ್ತದೆ. ಆ ವಿಡಿಯೊವನ್ನು ಎಲ್ಲ ವಿದ್ಯಾರ್ಥಿಗಳಿಗೆ ಕಳುಹಿಸಲಾಗುತ್ತದೆ.

ಥರ್ಮಲ್ ಸ್ರ್ಕೀನಿಂಗ್ ಕಡ್ಡಾಯ

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಗರಿಷ್ಠ ಮೂರು ಥರ್ಮಲ್ ಸ್ಕ್ರೀನಿಂಗ್‌ ಯಂತ್ರಗಳು ಇರಲಿವೆ. ಶಿಕ್ಷಣ ಇಲಾಖೆಯಿಂದ ಒಂದನ್ನು ಕಡ್ಡಾಯವಾಗಿ ನೀಡಲಾಗುವುದು. ಆರೋಗ್ಯ ಇಲಾಖೆಯಿಂದ ಮತ್ತೊಂದು ಹಾಗೂ ಆಯಾ ಶಾಲೆಯ ಸಂಚಿತ ನಿಧಿಯಿಂದಲೇ ಒಂದು ಯಂತ್ರ ಖರೀದಿಸಲು ಅವಕಾಶವಿದೆ. ಪರೀಕ್ಷಾ ಕೇಂದ್ರದ ಸಿಬ್ಬಂದಿಗೂ ಇದರ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು.

ಮಾಸ್ಕ್, ಸ್ಯಾನಿಟೈಸರ್‌ಗೆ ವ್ಯವಸ್ಥೆ

ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್ ನೀಡುವ ಉದ್ದೇಶವಿದೆ. ಸರ್ಕಾರದಿಂದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೂಲಕ 14 ಸಾವಿರ, ಅಧಮ್ಯ ಚೇತನ ಸಂಸ್ಥೆಯಿಂದ 5 ಸಾವಿರ ಮಾಸ್ಕ್‌ ಬರಲಿವೆ. ಸಂಸದರೂ ಮಾಸ್ಕ್, ಸ್ಯಾನಿಟೈಸರ್ ನೀಡುವ ಭರವಸೆ ನೀಡಿದ್ದಾರೆ. ಅದಾಗ್ಯೂ ಮಾಸ್ಕ್ ಮತ್ತು ಕುಡಿಯುವ ನೀರನ್ನು ಪರೀಕ್ಷಾರ್ಥಿಗಳು ಮನೆಯಿಂದಲೇ ತಂದರೆ ಉತ್ತಮ ಹಾಗೂ ಸುರಕ್ಷಿತ.

ಪರೀಕ್ಷೆ ತಯಾರಿ ಕ್ರಮಗಳು

ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗಳನ್ನು ಎಲ್ಲ ಶಿಕ್ಷಕರು ಪಡೆದುಕೊಂಡು ಅವರು ನಿರಂತರವಾಗಿ ಅಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಮಾರ್ಗದರ್ಶನ ಮಾಡುತ್ತಿದ್ದಾರೆ

ಧಾರವಾಡ ಶಹರ ವಲಯದಲ್ಲಿ ಎಲ್ಲ ಕ್ಲಾಸ್‌– 2 ಅಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಪ್ರತಿಯೊಬ್ಬರಿಗೂ 8ರಿಂದ 10 ಶಾಲೆಗಳನ್ನು ನೀಡಿ, ಆ ಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಮಕ್ಕಳನ್ನು ಸಂಪರ್ಕಿಸಿ ಮಾರ್ಗದರ್ಶನ ಮಾಡಲು ಕ್ರಮ ಕೈಗೊಳ್ಳಲಾಗಿದೆ

ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದ ಎಸ್‌ಎಸ್ಎಲ್‌ಸಿ ಪ್ರಶ್ನೆ ಪತ್ರಿಕೆಗಳನ್ನು ಪಿಡಿಎಫ್‌ ಮೂಲಕ ಎಲ್ಲ ಮಕ್ಕಳಿಗೆ ವಾಟ್ಸ್‌ಆ್ಯಪ್ ಮೂಲಕ ತಲುಪಿಸಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲು ಮಕ್ಕಳಿಗೆ ತಿಳಿಸಲಾಗಿದೆ

ಅನುಭವಿ ಶಿಕ್ಷಕರಿಂದ ತಯಾರಿಸಿದಂತಹ ಯೂಟ್ಯೂಬ್ ಪಾಠಗಳನ್ನು ವೀಕ್ಷಿಸಲು ಮಕ್ಕಳಿಗೆ ಅರಿವು ಮೂಡಿಸಲಾಗಿದೆ

ಶಹರ ವ್ಯಾಪ್ತಿಯ ನುರಿತ ಸಂಪನ್ಮೂಲ ಶಿಕ್ಷಕರ ವಿಷಯವಾರು ತಂಡಗಳನ್ನು ರಚಿಸಿ ಅವರ ಮೊಬೈಲ್ ಸಂಖ್ಯೆಗಳನ್ನು ಎಲ್ಲ ಮಕ್ಕಳಿಗೂ ನೀಡಿ ಮಕ್ಕಳು ಕ್ಲಿಷ್ಟ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗಿದೆ

ಚಂದನ ಟಿವಿಯಲ್ಲಿ ಏಪ್ರಿಲ್ 29ರಿಂದ ಪ್ರಾರಂಭವಾಗಿರುವ ಎಸ್‌ಎಸ್‌ಎಲ್‌ಸಿ ಪಾಠಗಳನ್ನು ನೋಡಲು ಎಲ್ಲ ಮಕ್ಕಳಿಗೆ ಪಾಠ ಪ್ರಸಾರವಾಗುವ ಸಮಯ, ದಿನಾಂಕ, ವಿಷಯ ಇತ್ಯಾದಿಗಳನ್ನು ತಿಳಿಸಲು ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿರಿ ಕನ್ನಡ ಬಳಗದಿಂದ ಯುಟ್ಯೂಬ್‌ನಲ್ಲಿ ಲಭ್ಯವಿರುವ ರಸಪ್ರಶ್ನೆ ಬಿಡಿಸಲು ಲಿಂಕ್‌ಗಳನ್ನು ನೀಡಿ ಮಕ್ಕಳು ಕ್ರಿಯಾಶೀಲರಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗಿದೆ

ಏಪ್ರಿಲ್‌ 2ರಿಂದ ಮರು ಪ್ರಸಾರವಾಗುತ್ತಿರುವ ಜ್ಞಾನತರಂಗ ರೇಡಿಯೊ ಪಾಠಗಳನ್ನು ಮಕ್ಕಳು ಕೇಳುವಂತೆ ಅವಕಾಶ ಕಲ್ಪಿಸಲಾಗಿದೆ. ಅದರ ಜಿಂಗಲ್ ಅನ್ನು ರೆಕಾರ್ಡ್‌ ಮಾಡಿ, ಹುಬ್ಬಳ್ಳಿ–ಧಾರವಾಡ ಕಾರ್ಪೊರೇಷನ್‌ನ 150 ಕಸದ ಗಾಡಿಗಳಲ್ಲಿ ಬೆಳಿಗ್ಗೆ ಎಲ್ಲ ಬಡಾವಣೆಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ

ಪ್ರತಿ ಪ್ರೌಢಶಾಲೆಯಲ್ಲಿ ವಿಷಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ, ಅಧ್ಯಯನದ ವಿಚಾರವಾಗಿ ಶಿಕ್ಷಕರು ಮಕ್ಕಳೊಂದಿಗೆ ನಿರಂತರವಾಗಿ ಸಂವಹನ ಮಾಡುವಂತೆ ಅವಕಾಶ ನೀಡಲಾಗಿದೆ

ಸರ್ಕಾರದ ಯೂಟ್ಯೂಬ್ ಚಾನಲ್‌ ‘ಮಕ್ಕಳ ವಾಣಿ’ಯನ್ನು ಎಲ್ಲ ಮಕ್ಕಳು ವೀಕ್ಷಿಸಿ, ಪ್ರಯೋಜನ ಪಡೆಯುತ್ತಿದ್ದಾರೆ

ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ತೆರಳಿ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಿದ್ದಾರೆ

ಪ್ರತಿದಿನ ವಿಷಯವಾರು ಸಂಪನ್ಮೂಲ ಶಿಕ್ಷಕರು Quizz.com ಆ್ಯಪ್ ಬಳಸಿಕೊಂಡು ಆನ್‌ಲೈನ್ ರಸಪ್ರಶ್ನೆ ಸಿದ್ಧಪಡಿಸಿ, ಅದರ ಲಿಂಕ್ ಅನ್ನು ವಿದ್ಯಾರ್ಥಿಗಳಿಗೆ ಕಳುಹಿಸುತ್ತಿದ್ದಾರೆ

ಪರೀಕ್ಷಾ ಸಹಾಯವಾಣಿಗಳು

ಉಪನಿರ್ದೇಶಕರು–9448999339
ಜಿಲ್ಲಾ ನೋಡಲ್ ಅಧಿಕಾರಿಗಳು –9482708919

ತಾಲ್ಲೂಕು ಸಹಾಯವಾಣಿ

ಹುಬ್ಬಳ್ಳಿ ಶಹರ ಕ್ಷೇತ್ರಶಿಕ್ಷಣಾಧಿಕಾರಿಗಳು–9448641050, ತಾಲ್ಲೂಕು ನೋಡಲ್ ಅಧಿಕಾರಿಗಳು– 9141444161

ಧಾರವಾಡ ಶಹರ ಕ್ಷೇತ್ರಶಿಕ್ಷಣಾಧಿಕಾರಿಗಳು–9480695184, ತಾಲ್ಲೂಕು ನೋಡಲ್ ಅಧಿಕಾರಿಗಳು– 9986960814

ಧಾರವಾಡ ಗ್ರಾಮೀಣ ಕ್ಷೇತ್ರಶಿಕ್ಷಣಾಧಿಕಾರಿಗಳು–9448999445, ತಾಲ್ಲೂಕು ನೋಡಲ್ ಅಧಿಕಾರಿಗಳು– 9008452945, 9900793339

ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರಶಿಕ್ಷಣಾಧಿಕಾರಿಗಳು–7019380363, ತಾಲ್ಲೂಕು ನೋಡಲ್ ಅಧಿಕಾರಿಗಳು– 8618787503

ಕಲಘಟಗಿ ಕ್ಷೇತ್ರಶಿಕ್ಷಣಾಧಿಕಾರಿಗಳು–9480695187, ತಾಲ್ಲೂಕು ನೋಡಲ್ ಅಧಿಕಾರಿಗಳು– 9008661432

ಕುಂದಗೋಳ ಕ್ಷೇತ್ರಶಿಕ್ಷಣಾಧಿಕಾರಿಗಳು–9480695188, ತಾಲ್ಲೂಕು ನೋಡಲ್ ಅಧಿಕಾರಿಗಳು– 9663831450, 8095756650

ನವಲಗುಂದ ಕ್ಷೇತ್ರಶಿಕ್ಷಣಾಧಿಕಾರಿಗಳು–9481126876, ತಾಲ್ಲೂಕು ನೋಡಲ್ ಅಧಿಕಾರಿಗಳು– 9886037008

ಧಾರವಾಡ ಜಿಲ್ಲಾ ಮಾಹಿತಿ

ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು: 25,559

ಪರೀಕ್ಷೆ ಬರೆಯಲಿರುವ ಹಳೆಯ ಅಭ್ಯರ್ಥಿಗಳು: 1,514

ಪರೀಕ್ಷೆ ಬರೆಯಲಿರುವ ಬಾಹ್ಯ ಅಭ್ಯರ್ಥಿಗಳು: 768

ಪರೀಕ್ಷೆ ಬರೆಯಲಿರುವ ಒಟ್ಟು ಅಭ್ಯರ್ಥಿಗಳು: 27,841

ಪರೀಕ್ಷಾ ಕೇಂದ್ರಗಳ ಮಾಹಿತಿ

ಜಿಲ್ಲೆಯಲ್ಲಿರುವ ಒಟ್ಟು ಪ್ರೌಢ ಶಾಲೆಗಳು: 407

ಜಿಲ್ಲೆಯಲ್ಲಿರುವ ಪರೀಕ್ಷಾ ಕೇಂದ್ರಗಳು: 90

ಹೆಚ್ಚುವರಿ ಪರೀಕ್ಷಾ ಕೇಂದ್ರಗಳು 17

ಪ್ರತಿ ಕೇಂದ್ರಕ್ಕೆ ಹೆಚ್ಚುವರಿ ಕೊಠಡಿ: 02

ಪ್ರತಿ ಬಿಇಒ ಮಟ್ಟದಲ್ಲಿ ಹೆಚ್ಚುವರಿ ಕೇಂದ್ರ: 02

ಪ್ರತಿ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ: 18–20

ಪ್ರಶ್ನೆ ಕೇಳಿದವರು:

ಪ್ರಶ್ನೆ ಕೇಳಿದವರು: ಮೋಹನ್‌ಕುಮಾರ್‌(ಸೇಡಂ), ರಾಘವೇಂದ್ರ(ಕೊಪ್ಪಳ), ಡಾ.ಸಿ.ಪಿ.ಮನೋಹರ್‌ (ಫ್ರೊಫೆಸರ್ ಕಿಟಲ್‌ ಕಾಲೇಜು, ಧಾರವಾಡ), ಬಸವರಾಜ್‌ (ಹುಬ್ಬಳ್ಳಿ), ಹರ್ಷ (ಅಮರಗೋಳ), ವಿಶ್ವನಾಥ (ಬೆಳಗಾವಿ), ಅಭಿಷೇಕ (ವಿಜಯಪುರ), ಸಂದೀಪ (ಕೋಟೂರ), ಗೀತಾ (ಧಾರವಾಡ), ದಾವೂದ್ (ಜಮಖಂಡಿ), ರಾಹುಲ್‌ (ವಿಜಯಪುರ), ಸಯ್ಯದ್‌ (ಧಾರವಾಡ), ಲಕ್ಷ್ಮಿ ಬಡಿಗೇರ (ತಾರಿಹಾಳ), ಪೂಜಾ (ಹುಬ್ಬಳ್ಳಿ), ಪ್ರಭು (ವಿಜಯಪುರ), ಸ‌ಯ್ಯದ್ ಕುರಗುಂದ (ತಾರಿಹಾಳ), ದಾನೇಶ್ವರಿ (ಧಾರವಾಡ), ಎಂ.ಕೆ.ನದಾಫ (ಧಾರವಾಡ), ರೋಹಿತ್ (ಹುಬ್ಬಳ್ಳಿ), ಸಿದ್ಧೇಶ್ವರ ಪಾಟೀಲ ( ಧಾರವಾಡ), ಗಣೇಶಗೌಡ(ಯರಿಕೊಪ್ಪ), ಜಗದೀಶ ದೊಡ್ಡಮನಿ(ತಾರಾಪುರ), ಪ್ರಕೃತಿ(ಧಾರವಾಡ), ಮಂಜುನಾಥ ಇಂಗಳಗಿ (ಕುಂದಗೋಳ).

ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು

ಕ್ಷೇತ್ರ ಶಿಕ್ಷಣಾಧಿಕಾರಿಗಳು: ಎಸ್‌.ಸಿ. ಕರಿಕಟ್ಟಿ, ಅಶೋಕ ಸಿಂಧಗಿ, ಉಮಾದೇವಿ ಬಸಾಪುರ, ಎ.ಎ. ಖಾಜಿ, ಗಿರೀಶ ಪದಕಿ, ಉಮೇಶ ಬೊಮ್ಮಕ್ಕನವರ, ಜಿ.ಎನ್. ಮಠಪತಿ.

ಗುರುಪಾಟೀಲ್– ಇಂಗ್ಲಿಷ್ ಶಿಕ್ಷಕ, ಅತ್ತಾರ್– ಸಮಾಜ ವಿಜ್ಞಾನ ಶಿಕ್ಷಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT