ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆ ಕಾಮಗಾರಿ ಕಳಪೆ: ಜೋಶಿ ಗರಂ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌; ಸಚಿವರ ಗಮನ ಸೆಳೆದ ಸಾರ್ವಜನಿಕರು
Last Updated 10 ಜೂನ್ 2019, 15:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ದೇಸಾಯಿ ಸರ್ಕಲ್‌ನಲ್ಲಿ ₹ 5.6 ಕೋಟಿ ಮೊತ್ತದಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗಮನ ಸೆಳೆದದ್ದರಿಂದ, ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಚಿವರು ಸ್ಥಳಕ್ಕೆ ಭೇಟಿ ನೀಡುವ ವಿಷಯ ತಿಳಿದ ಗುತ್ತಿಗೆದಾರರು ರಾತ್ರೋರಾತ್ರಿ ಕಳಪೆ ಕಾಮಗಾರಿಗೆ ತೇಪ ಹಚ್ಚಿ, ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಸಾರ್ವಜನಿಕರು ದೂರಿದರು. ಇದರಿಂದ ಸಿಟ್ಟಿಗೆದ್ದ ಸಚಿವರು, ಗುತ್ತಿಗೆದಾರವಿ.ಎಸ್‌.ವಿ. ಪ್ರಸಾದ್ ಮತ್ತು ಎಂಜಿನಿಯರ್‌ಕೃಷ್ಣಾ ರಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಮೇಲ್ಸೇತುವೆ ಕಾಮಗಾರಿ ಬಗ್ಗೆ ನನಗೂ ತೃಪ್ತಿ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಯಾವುದೇ ಸಂಶಯಕ್ಕೆ ಅವಕಾಶ ಇಲ್ಲದಂತೆ ಗುಣಮಟ್ಟದ ಕಾಮಗಾರಿ ನಡೆಯಬೇಕು ಎಂದು ಸೂಚಿಸಿದರು.

ಮೇಲ್ಸೇತುವೆಗೆ ಅಳವಡಿಸಲಾಗಿರುವ ಮುರಿದಿರುವ ಫ್ಯಾನಲ್‌ಗಳನ್ನು ಬದಲಾಯಿಸಬೇಕು. ಜಾಯಿಂಟ್‌, ಫಿನಿಷಿಂಗ್‌ ಸರಿಯಾಗಬೇಕು. ಧಾರವಾಡ ಕಟ್ಟಡ ದುರಂತದಂತೆ ಏನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಗುತ್ತಿಗೆದಾರರು ಮತ್ತು ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ನೀವು ಮಾಡುವ ಬೇಜವಾಬ್ದಾರಿ ಕೆಲಸದಿಂದಾಗಿ ನಾನು ಜನರಿಂದ ಬೈಯಿಸಿಕೊಳ್ಳುವಂತಾಗಿದೆ. ಕಾಮಗಾರಿಗೂ ನನಗೂ ಸಂಬಂಧವೇ ಇಲ್ಲ. ರಾಜ್ಯ ಸರ್ಕಾರದ ಯೋಜನೆ ಇದಾಗಿದೆ. ಆದರೂ ಸಹ ಜನರಿಗೆ ನಾನು ಉತ್ತರ ಕೊಡಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೇಲ್ಸೇತುವೆ ಕಾಮಗಾರಿ ಗುಣಮಟ್ಟದ ಬಗ್ಗೆ ಖಾಸಗಿ ಸಿವಿಲ್‌ ಎಂಜಿನಿಯರ್‌, ಆರ್ಕಿಟೆಕ್ಟ್‌ ಅವರಿಂದ ಪರಿಶೀಲನೆ ನಡೆಸಿ ವರದಿ ತರಿಸಿಕೊಳ್ಳುತ್ತೇನೆ. ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ. ತಕ್ಷಣ ಅನುದಾನ ಬಿಡುಗಡೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಗುತ್ತಿಗೆದಾರ ವಿ.ಎಸ್.ವಿ.ಪ್ರಸಾದ್‌ ಮಾತನಾಡಿ, ‘ಮೇಲ್ಸೇತುವೆ ಕಾಮಗಾರಿ ಗುಣಮಟ್ಟದಿಂದ ಕೂಡಿದೆ. ಇದರ ಬಗ್ಗೆ ಅನುಮಾನ ಬೇಡ’ ಎಂದು ಸಂಸದರಿಗೆ ಮನವರಿಕೆ ಮಾಡಿದರು.

‘ಮೇಲ್ಸೇತುವೆ ಕಾಮಗಾರಿಯನ್ನು ಮುಗಿಸಲು ಕೇವಲ 45 ದಿನಗಳ ಕಾಲಾವಕಾಶ ನೀಡಲಾಗಿದೆ. ಹೀಗಾಗಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಆಗಿರುವ ಸಣ್ಣಪುಟ್ಟ ಲೋಪವನ್ನು ಸರಿಪಡಿಸಲಾಗುವುದು’ ಎಂದು ಹೇಳಿದರು.

ಆಕ್ಷೇಪ: ಮೇಲ್ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ಸ್ಥಳೀಯರ ಅಭಿಪ್ರಾಯ ಪಡೆದಿಲ್ಲ. ಎರಡೂ ಬದಿಯಲ್ಲಿ ಸರ್ವಿಸ್‌ ರೋಡ್‌, ಪಾದಚಾರಿ ಮಾರ್ಗ, ಗಟಾರ ನಿರ್ಮಿಸಿಲ್ಲ. ಗುತ್ತಿಗೆದಾರರು ಮತ್ತು ಅಧಿಕಾರಿಗಳಿಂದ ಉದ್ಯೋಗ ಖಾತ್ರಿ ಯೋಜನೆ ರೀತಿ ಕಣ್ಣೊರೆಸುವ ಕೆಲಸ ನಡೆದಿದೆ ಎಂದು ಸ್ಥಳೀಯರಾದ ಪ್ರದೀಪ ಶೆಟ್ಟಿ, ಅರುಣಪ್ರಭು ಮತ್ತಿತರರು ಆರೋಪಿಸಿದರು.

ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಕೆಲಸ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ನಡೆದಿದೆ ಎಂದು ದೂರಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಾ ರಡ್ಡಿ, ಮುಖಂಡರಾದ ಮಹೇಶ ಟೆಂಗಿನಕಾಯಿ, ಸುಧೀರ ಸರಾಫ್‌, ತಿಪ್ಪಣ್ಣ ಮಜ್ಜಗಿ, ರವಿ ನಾಯಕ್‌, ಮಲ್ಲಿಕಾರ್ಜುನ ಸಾವಕಾರ, ಉಮೇಶ ದುಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT