ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಗಿಡಗಳಿಗೆ ಆಶ್ರಯದಾತ ‘ತೇವಾಂಶ ರಕ್ಷಕ’

ಮಳೆ ಕೊರೆತೆಯಾದರೂ ಧಾರವಾಡ ಜಿಲ್ಲೆಯಲ್ಲಿ 2 ಲಕ್ಷ ಸಸಿಗಳನ್ನು ಸಂರಕ್ಷಿಸುವ ಯೋಜನೆ
Last Updated 16 ಜೂನ್ 2020, 15:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಕೆಲಸ ಆಗುತ್ತಲೇ ಇರುತ್ತದೆ. ಆದರೆ, ಮಳೆ ಕೈಕೊಟ್ಟರೆ ಅವುಗಳಿಗೆ ಅಗತ್ಯವಾದ ನೀರು ಸಿಗುವುದಿಲ್ಲ. ಹೀಗಾಗಿ, ಸಾವಿರಾರು ಸಸಿಗಳು ಒಣಗಿಹೋಗುತ್ತವೆ. ಇದಕ್ಕೆ ಧಾರವಾಡದ ಅರಣ್ಯ ಇಲಾಖೆ ಉಪಾಯ ಕಂಡುಕೊಂಡಿದೆ. ಅದುವೇ, ‘ತೇವಾಂಶ ರಕ್ಷಕ’.

ಒಂದು ಬಾರಿ ನೀರು ಹಾಕಿದರೆ, ಗಿಡಕ್ಕೆ ಒಂದೂವರೆ ತಿಂಗಳು ತೇವಾಂಶ ನೀಡುತ್ತದೆ ಈ ‘ತೇವಾಂಶ ರಕ್ಷಕ’. ಒಂದು ವರ್ಷದ ಜೀವಿತಾವಧಿ ಹೊಂದಿದ್ದು, ನಂತರ ಮಣ್ಣಿನಲ್ಲಿ ಕರಗಿಹೋಗುತ್ತದೆ. ಧಾರವಾಡದ ಅರಣ್ಯ ಇಲಾಖೆ ವತಿಯಿಂದ ನಗರ ಪ್ರದೇಶಗಳಲ್ಲಿ ಈ ಬಾರಿ ನೆಡಲಾಗುವ ಸಸಿಗಳಿಗೆ ಈ'ತೇವಾಂಶ ರಕ್ಷಕ'ವನ್ನು ಬಳಸಲಾಗುತ್ತಿದೆ.

‘ಪ್ರತಿ ವರ್ಷವೂ ಗಿಡಗಳನ್ನು ನೆಡಲಾಗುತ್ತದೆ. ಒಂದು ಬಾರಿ ಬರಗಾಲ ಬಂದರೆ ಅವುಗಳಿಗೆ ಕಷ್ಟ ಆಗುತ್ತದೆ. ಆದ್ದರಿಂದ ನಗರ ಪ್ರದೇಶಗಳಲ್ಲಿ ನಾವು ಈ ಬಾರಿ ಸುಮಾರು 2 ಲಕ್ಷ ಸಸಿಗಳನ್ನು ನೆಡುವಾಗ ತೇವಾಂಶವನ್ನು ಹಿಡಿದಿಡುವ ಜೆಲ್ ಅನ್ನು ಹಾಕುತ್ತಿದ್ದೇವೆ. ಇದರಿಂದ ಗಿಡಗಳು ಸಾಯುವುದಿಲ್ಲ. ಒಂದು ವರ್ಷ ಈ ಜೆಲ್ ‘ತೇವಾಂಶ ರಕ್ಷಕ’ವಾಗಿ ಕೆಲಸ ಮಾಡುತ್ತದೆ. ಈ ಅವಧಿಯಲ್ಲಿ ಗಿಡಗಳು ಚೆನ್ನಾಗಿ ಬೆಳೆದಿರುತ್ತವೆ’ ಎನ್ನುತ್ತಾರೆ ಧಾರವಾಡದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್.

‘ನಗರ ಪ್ರದೇಶಗಳಲ್ಲಿ ರಸ್ತೆ ಬದಿ, ಉದ್ಯಾನಗಳಲ್ಲಿ ಗಿಡ ನೆಟ್ಟ ಮೇಲೆ ಮಳೆ ಬಂದರೆ ಒಳ್ಳೆಯದು. ಮಳೆ ಕೈಕೊಟ್ಟಾಗ, ಸಸಿಗಳ ಪೋಷಣೆಗೆ ಆಗಾಗ ನೀರು ಹಾಕುವುದು ಕಷ್ಟ. ಆದರೆ, 'ತೇವಾಂಶ ರಕ್ಷಕ' ಬಳಕೆಯಿಂದ ಒಂದು ಬಾರಿ ನೀರು ಹಾಕಿದರೆ, ಒಂದೂವರೆ ತಿಂಗಳು ತೇವಾಂಶ ಇರುವುದರಿಂದ ನಾವೂ ತಿಂಗಳಿಗೊಮ್ಮೆ ನೀರು ಹಾಕಿದರೂ ಸಾಕು. ಇದರಿಂದ ನೆಟ್ಟ ಸಸಿಗಳೆಲ್ಲವೂ ಮರವಾಗುವಂತೆ ಪೋಷಣೆ ನೀಡಲು ಸಾಧ್ಯ’ ಎಂದರು.

‘ನೀರು ಹಿಡಿದಿಟ್ಟು, ಗಿಡಗಳಿಗೆ ತೇವಾಂಶ ಒದಗಿಸಲು ಈ ಮೊದಲು ಪ್ಲಾಸ್ಟಿಕ್ ಬಾಲ್ ಗಳನ್ನು ಬಳಸಲಾಗುತ್ತಿತ್ತು. ಅವುಗಳ ಅವಧಿ 2ರಿಂದ 3 ವರ್ಷ. ಆದರೆ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ. ಒಂದು ವರ್ಷ ತೇವಾಂಶ ಕೊಟ್ಟು, ನಂತರ ಪರಿಸರದಲ್ಲೇ ಕರಗಿಹೋಗುವ ಈ ಜೆಲ್ ಅನ್ನೇ ಇನ್ನು ಮುಂದೆ ಬಳಸಲು ನಿರ್ಧರಿಸಲಾಗಿದೆ’ ಎಂದು ಯಶಪಾಲ್ ಸ್ಪಷ್ಟಪಡಿಸಿದರು.

ಬಳಕೆ ಹೇಗೆ?
‘ಗೋವಿನಜೋಳದ ಸತ್ವದಿಂದ 'ತೇವಾಂಶ ರಕ್ಷಕ'ವನ್ನು ತಯಾರಿಸಲಾಗಿದೆ. ಗೊಬ್ಬರ ಮಾರಾಟ ಮಾಡುವ ಮಳಿಗೆಗಳಲ್ಲಿ ಯುಪಿಡಿಟಿಯ 5 ಕೆ.ಜಿಯ ಪೊಟ್ಟಣ ₹2,500 ಬೆಲೆಯಲ್ಲಿ ಲಭ್ಯ. ಪುಡಿಯಾಗಿರುವ ಇದನ್ನು ಒಂದು ಗಿಡಕ್ಕೆ 15 ಗ್ರಾಂನಷ್ಟು ಬಳಸಬೇಕು. ನೀರಿನಲ್ಲಿ ಇದನ್ನು 10 ನಿಮಿಷ ನೆನೆಸಿದರೆ 50 ಗ್ರಾಂನಷ್ಟಾಗಿ, ಜೆಲ್‌ನಂತಾಗುತ್ತದೆ. ಇದನ್ನು ಹಾಕಿ, ಗಿಡ ನೆಡಲಾಗುತ್ತದೆ. ಒಂದು ಪೊಟ್ಟಣವನ್ನು 300ಕ್ಕೂ ಹೆಚ್ಚು ಗಿಡಗಳಿಗೆ ಬಳಸಬಹುದು’ ಎಂದು ಹುಬ್ಬಳ್ಳಿ ವಲಯ ಅರಣ್ಯ ಅಧಿಕಾರಿ ಶ್ರೀಧರ್ ಎಂ. ತೆಗ್ಗಿನಮನಿ ವಿವರ ನೀಡಿದರು.

ಗಿಡಗಳನ್ನು ನೆಟ್ಟ ಮೇಲೆ ಅವುಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ತೇವಾಂಶ ರಕ್ಷಕವನ್ನು ಬಳಕೆ ಮಾಡಲಾಗುತ್ತಿದೆ– ಯಶಪಾಲ್ ಕ್ಷೀರಸಾಗರ್, ಉಪ ಅರಣ್ಯ ಸಂರಕ್ಷಣಾಧಿಕಾರಿ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT