ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಂದ್ರೆ ಜನ್ಮದಿನದ ನೆಪ; ಒಡನಾಟದ ಜಪ

ವರಕವಿ ಡಾ.ದ.ರಾ. ಬೇಂದ್ರೆ ಜನ್ಮದಿನಾಚರಣೆಯಲ್ಲಿ ನೆನಪು ಮೆಲುಕು ಹಾಕಿದ ಒಡನಾಡಿಗಳು
Last Updated 20 ಫೆಬ್ರುವರಿ 2019, 10:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಮ್ಮ ಮೇಷ್ಟ್ರು ಮನೆಯಲ್ಲಿ ನಡೆಯುತ್ತಿದ್ದ ಕವಿಗೋಷ್ಠಿಗೆ ದ.ರಾ. ಬೇಂದ್ರೆ ಅತಿಥಿಯಾಗಿದ್ದರು. ಶಾಲೆಯಲ್ಲಿ ನಾನು ಬರೆದಿದ್ದ ‘ಗಂಟು ಮೂಟೆ ಕಟ್ಟಿ’ ಎಂಬ ಕವಿತೆ ಗಮನಿಸಿದ್ದ ಮೇಷ್ಟ್ರು, ಅದನ್ನು ಓದುವಂತೆ ಸೂಚಿದರು. ವೇದಿಕೆಯತ್ತ ಹೆಜ್ಜೆ ಹಾಕಿದ ನನ್ನನ್ನು ಸ್ವತಃ ಬೇಂದ್ರೆ ಅವರು ಮೇಲಕ್ಕೆತ್ತಿ ನಿಲ್ಲಿಸಿ, ‘ಇವ ಕಿರಿಯಲ್ಲ, ಹಿರಿಯ ಕವಿ’ ಎಂದು ಪರಿಚಯಿಸಿದರು’

ಹುಬ್ಬಳ್ಳಿಯ ಶರ್ಮಾ ದರ್ಶನ ಭವನದಲ್ಲಿ ಬೇಂದ್ರೆ ಸಂಶೋಧನಾ ಸಂಸ್ಥೆ ಹಾಗೂ ಅಂಬಿಕಾತನಯದತ್ತ ವೇದಿಕೆ ಸಹಯೋಗದಲ್ಲಿ ಬುಧವಾರ ನಡೆದ ವರಕವಿ ಡಾ.ದ.ರಾ. ಬೇಂದ್ರೆ ಅವರ 124ನೇ ಜನ್ಮದಿನಾಚರಣೆಯಲ್ಲಿ ಮುಂಬೈನ ಕವಿ ಡಾ.ಜಿ.ವಿ. ಕುಲಕರ್ಣಿ ಬೇಂದ್ರೆ ಜತೆಗಿನ ತಮ್ಮ ಒಡನಾಟವನ್ನು ಹೀಗೆ ಮೆಲುಕು ಹಾಕಿದರು.

‘ಹುಬ್ಬಳ್ಳಿಯಲ್ಲಿ ಬೇಂದ್ರೆ ಅವರ ಜನ್ಮದಿನವನ್ನು ಎಂದೂ ತಪ್ಪಿಸಿಕೊಳ್ಳುವುದಿಲ್ಲ’ ಎಂದು ಮಾತು ಆರಂಭಿಸಿದ ಅವರು, ‘ಕರ್ನಾಟಕ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದ ವಿ.ಕೃ. ಗೋಕಾಕ್, ಈ ಹುಡುಗ ಚನ್ನಾಗಿ ಕವಿತೆ ಬರೀತಾನೆ. ನಿಮ್ಮೊಂದಿಗೆ ಇಟ್ಟುಕೊಳ್ಳಿ ಎಂದು ನನ್ನ ಬಗ್ಗೆ ಬೇಂದ್ರೆಯವರಿಗೆ ಹೇಳಿದ್ದರು. ಹೌದಾ, ನಾನೂ ನಿವೃತ್ತಿಯಾಗಿ ಪೂರ್ಣ ಕವಿಯಾಗಿದ್ದೇನೆ. ನೀ ಯಾವಾಗ ಬೇಕಾದರೂ ನನ್ನ ಮನೆಗೆ ಬಾ ಎಂದು ಬೇಂದ್ರೆ ಆಹ್ವಾನ ನೀಡಿದ್ದರು. ಅಲ್ಲಿಂದ ಅವರ ಒಡನಾಟ ಮತ್ತಷ್ಟು ಗಟ್ಟಿಯಾಯಿತು’ ಎಂದರು.

ಪೇಡಾ ತಿನ್ನಿಸಿದ್ದರು

‘ಬೇಂದ್ರೆ ಅವರು ಚಿಕಿತ್ಸೆಗಾಗಿ ಮುಂಬೈಗೆ ಬಂದಿದ್ದ ಸಂದರ್ಭದಲ್ಲೇ, ನನ್ನ ಪತ್ನಿ ಎಂ.ಎ ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್ ಪಡೆದಿದ್ದರು. ಅವರನ್ನು ನೋಡಲು ಹೋದಾಗ, ರ‍್ಯಾಂಕ್ ಖುಷಿಗೆ ಪೇಡಾ ಎಲ್ಲಿ? ಎಂದು ಕೇಳಿದರು. ನೀವು ಆಸ್ಪತ್ರೆಗೆಂದು ಬಂದಿದ್ದೀರಿ ಹೇಗೆ ಕೊಡುವುದು ಎಂದು ಹೇಳಿದೆ. ಆಗ ಅವರೇ ಪೇಡಾ ತರಿಸಿ, ನನಗೂ ಕೊಟ್ಟು ಅವರೂ ತಿಂದು ಸಂಭ್ರಮಿಸಿದರು’ ಎಂದು ಬೇಂದ್ರೆ ಅವರ ಜೀವನಪ್ರೀತಿಯನ್ನು ಕೊಂಡಾಡಿದರು.

‘ಗರಿ’ ಕವನ ಸಂಕಲದ ಸಾರ್ವಕಾಲಿಕ ಔಚಿತ್ಯ’ದ ಕುರಿತು ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಸಿ. ಸಿವಾರೆಡ್ಡಿ, ‘ಬೇಂದ್ರೆಯವರ ದೈಹಿಕ ಸ್ಪರ್ಶದಿಂದ ನಾನು ವಂಚಿತನಾದರೂ, ಅವರ ಸಾಹಿತ್ಯ ಸ್ಪರ್ಶದಿಂದ ಪುನೀತನಾದೆ. ಅವರ ‘ಗರಿ’ ಸಂಕಲನದಲ್ಲಿರುವ ಮುನ್ನುಡಿ ಜಗತ್ತಿಗೆ ಇಂದಿಗೂ ಮಾರ್ಗದರ್ಶಕವಾಗಿದೆ’ ಎಂದು ಬಣ್ಣಿಸಿದರು.

‘ಚಿರಂಜೀವಿ ಶರ್ಮಾಗೆ ಎಂಬ ಒಕ್ಕಣೆಯೊಂದಿಗೆ ಬೇಂದ್ರೆ ತಮ್ಮ ‘ಸಾಹಿತ್ಯ ವಿರಾಟ್ ಸ್ವರೂಪ’ ಕೃತಿಯನ್ನು ನನಗೆ ನೀಡಿದ್ದರು’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟ ಬೇಂದ್ರೆ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಕೆ.ಎಸ್. ಶರ್ಮಾ, ‘ಬೇಂದ್ರೆ ಅವರ ಸಾಹಿತ್ಯದ ಮರು ಓದು ಆಗಬೇಕಿದೆ’ ಎಂದು ಪ್ರತಿಪಾದಿಸಿದರು.

ಸಂತ ಜ್ಞಾನೇಶ್ವರ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕುಳ್ಳೂರು ನಾಗಪ್ಪ ಸಿದ್ದಪ್ಪ, ‘ಬೇಂದ್ರೆ ಅವರ ನಾಕುತಂತಿ’ ಕುರಿತು ಅನಿಸಿಕೆ ಹಂಚಿಕೊಂಡರು.

ಅತಿಥಿಗಳನ್ನು ಡಾ.ಕೆ.ಎಸ್. ಶರ್ಮಾ, ಬೇಂದ್ರೆಯವರ ಮೊಮ್ಮಗಳು ಸುಲೋಚನಾ ಪೋತ್ನೀಸ್ ಹಾಗೂ ಪುನರ್ವಸು ಬೇಂದ್ರೆ ಸನ್ಮಾನಿಸಿದರು. ಕೊಳಲು ವಾದಕ ಹರೀಶ ಕುಲಕರ್ಣಿ ಮತ್ತವರ ತಂಡ ಬೇಂದ್ರೆಯವರ ಕವನಗಳನ್ನು ಪ್ರೇಕ್ಷಕರಿಗೆ ಉಣಬಡಿಸಿತು.

ಮೋಹನ ಲಿಂಬಿಕಾಯಿ ಸ್ವಾಗತಿಸಿದರು. ಸಂಜಯ ತ್ರಾಸದ ವಂದಿಸಿದರು. ಪ್ರೊ. ರವೀಂದ್ರ ಶಿರೋಳ್ಕರ್ ನಿರೂಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT