ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಅಧಿಕಾರಿಯ ಉಡುಗೊರೆ ಪುಸ್ತಕ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 11 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಸದಾ ಒತ್ತಡದ ಕೆಲಸದಲ್ಲಿರುವ ಪೊಲೀಸರಿಗೆ ರಜೆ ಸಿಗುವುದೇ ವಿರಳ. ಬಂದೋಬಸ್ತ್‌, ರಾತ್ರಿ ಗಸ್ತು, ಗಣ್ಯವ್ಯಕ್ತಿಗಳ ಭದ್ರತೆ, ಪರೇಡ್, ಆರೋಪಿ ಶೋಧನೆ ಹೀಗೆ ಹತ್ತು ಹಲವು ಅನುದಿನದ ಕೆಲಸಗಳಾಚೆ ತಮ್ಮ ವೈಯಕ್ತಿಕ ಬದುಕಿನ ಕಡೆಗೂ ಲಕ್ಷ್ಯವಹಿಸುವುದು ಕಷ್ಟಸಾಧ್ಯ. ಏತನ್ಮಧ್ಯೆ ಹುಬ್ಬಳ್ಳಿ ಮಹಾನಗರದ ಅಶೋಕನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಜಗದೀಶ ಹಂಚಿನಾಳ ಅವರು ತಮಗೆ ಸಿಗುವ ವಿಶ್ರಾಂತಿ ಸಮಯದಲ್ಲಿಯೇ ಕನ್ನಡ ನಾಡು-ನುಡಿಯ ಪ್ರೇಮ ಮರೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ.

ನಿತ್ಯವೂ ಸ್ವತಃ ಪುಸ್ತಕ ಓದುವುದರೊಂದಿಗೆ ಸಾರ್ವಜನಿಕರಿಗೆ, ಸಿಬ್ಬಂದಿ ವರ್ಗದವರಿಗೆ, ರಾಜಕೀಯ ಗಣ್ಯವಕ್ತಿಗಳಿಗೆ, ಮೇಲಧಿಕಾರಿಗೆ ಸೇರಿದಂತೆ ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಉತ್ತಮ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುತ್ತ ಬಂದಿದ್ದಾರೆ. ಇನ್ನೊಂದು ವಿಶೇಷವೆಂದರೆ ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಮದುವೆ, ಪ್ರಮೋಷನ್, ಗೃಹ ಪ್ರವೇಶ ಇನ್ನಿತರ ಶುಭಸಂದರ್ಭದಲ್ಲಿ ಇವರು ನೀಡುವ ಉಡುಗೊರೆ ಎಂದರೆ ಪುಸ್ತಕಗಳು.

ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಜಗದೀಶ ಹಂಚಿನಾಳ ವಿದ್ಯಾರ್ಥಿ ದೆಸೆಯಿಂದಲೇ ಎಲ್ಲ ರೀತಿಯ ಓದನ್ನು ರೂಢಿಸಿಕೊಂಡವರು. ಅವರ ಕಾಲಕ್ಕೆ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಮನೆ ಮನೆಗೆ ಪತ್ರಿಕೆ ತಲುಪುವ ವ್ಯವಸ್ಥೆ ಇರಲಿಲ್ಲವಂತೆ. ಹೀಗಾಗಿ ಜಗದೀಶ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದಿನಪತ್ರಿಕೆಯನ್ನು ಓದುತ್ತಿದ್ದರಂತೆ. ಅವರ ತಂದೆಯವರೂ ಇಲಾಖೆಯಲ್ಲಿ ಇರುವುದರಿಂದ ನನಗೆ ಓದಲು ಸಹಕಾರಿಯಾಯಿತೆಂದು ಹೇಳುತ್ತಾರೆ. ಕೆರೂರಿನ ಎ.ಆರ್.ಹಿರೇಮಠ ಹೈಸ್ಕೂಲ್‌ನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಾಗ ಓದಿನ ಆಸಕ್ತಿಯುಳ್ಳ ಶಿಕ್ಷಕ ಹಾಗೂ ವಿದ್ಯಾರ್ಥಿಗಳನ್ನು ಸೇರಿಸಿಕೊಂಡ ಮಿತ್ರಕೂಟ ಎಂಬ ಸಂಘವನ್ನು ಕಟ್ಟಿ ಆ ಮೂಲಕ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ನೀಡುತ್ತಾ ಬಂದಿದ್ದರು. ಅಲ್ಲಿಂದಲೇ ತಮಗೆ ಪುಸ್ತಕ ಹಂಚುವ ಆಸಕ್ತಿ ಬೆಳೆಯಿತೆಂದು ಹೇಳುತ್ತಾರೆ.

‘ಕಾಲೇಜು ಮೆಟ್ಟಿಲು ತುಳಿಯುವ ಹಂತದಲ್ಲಿ ಕಾದಂಬರಿ ಓದುವ ಹುಚ್ಚು ಹೆಚ್ಚಾಯಿತು. ಮಲೆಗಳಲ್ಲಿ ಮದುಮಗಳು, ರಕ್ತರಾತ್ರಿ, ಹೂವು ಸೇರಿದಂತೆ
ಕುವೆಂಪು, ಎಂ.ಕೆ ಇಂದಿರಾ, ತ.ರಾ.ಸು, ಎಸ್.ಎಲ್.ಭೈರಪ್ಪ, ಸಾಯಿಸುತೆ ಅವರ ಇನ್ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ಓದಿದ್ದೇನೆ. ಆದರೆ, ಇತ್ತೀಚಿಗೆ ಕೆಲಸದ ಒತ್ತಡದಲ್ಲಿ ಓದು ಕಡಿಮೆಯಾಗಿದೆ. ಆದರೂ ಪ್ರತಿದಿನ ಮಲಗುವ ಮುನ್ನ ಕನಿಷ್ಠ ಇಪ್ಪತ್ತು ಪುಟವಾದರೂ ಓದಿಯೇ ಮಲಗುತ್ತೇನೆ. ಸದ್ಯ ಗಣೇಶಯ್ಯ ಅವರ ‘ರಕ್ತ ಸಿಕ್ತ ರತ್ನ’ ಐತಿಹಾಸಿಕ ಥ್ರಿಲ್ಲರ್ ಕಾದಂಬರಿಯನ್ನು ಓದುತ್ತಿದ್ದೇನೆ‘ ಎಂದರು.

‘ಪುಸ್ತಕ ಓದದವನು ಒಂದು ಹುಟ್ಟಿನಲ್ಲಿ ಒಂದೇ ಜೀವನ ಅನುಭವಿಸುತ್ತಾನೆ. ಆದರೆ ಪುಸ್ತಕ ಓದುವವನು ಒಂದೇ ಜನ್ಮದಲ್ಲಿ ಸಾವಿರ ಜೀವನ ಕಾಣಬಲ್ಲ ಎಂಬ ಗಾದೆ ಮಾತಿನಂತೆ ಮನುಷ್ಯನ ಜೀವನದಲ್ಲಿ ಪುಸ್ತಕದ ಓದು ಬಹುಮುಖ್ಯ ಪಾತ್ರವಹಿಸುತ್ತದೆ. ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ, ಜ್ಞಾನವೃದ್ಧಿ, ಆತ್ಮಸಂತೋಷ ಪುಸ್ತಕ ಓದಿನಿಂದಲೇ ದೊರೆಯುತ್ತದೆ‘ ಎಂಬುದು ಜಗದೀಶ ಅವರ ಅಭಿಪ್ರಾಯ.

ಪುಸ್ತಕವನ್ನೇ ಯಾಕೆ ಉಡುಗೊರೆಯಾಗಿ ನೀಡುತ್ತೀರಿ ಎಂಬ ಪ್ರಶ್ನೆಗೆ, ’ಎಲ್ಲರೂ ಸುಸಂದರ್ಭಗಳಲ್ಲಿ ಹೂಗುಚ್ಚ ನೀಡುತ್ತಾರೆ. ಅದು ಕೆಲವೇ ಗಂಟೆಗಳಲ್ಲಿ ಬಾಡಿ ಹೋಗುತ್ತದೆ. ಒಂದು ಪುಸ್ತಕ ಕೊಟ್ಟರೆ ಅದು ಎಷ್ಟೋ ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಮೇಲಾಗಿ ಲೇಖಕರನ್ನ, ಪ್ರಕಾಶಕರನ್ನ ಪ್ರೋತ್ಸಾಹಿಸುವುದಷ್ಟೇ ಅಲ್ಲದೇ ನಮ್ಮ ಸಾಹಿತ್ಯವನ್ನು, ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕಾರ್ಯಸಾಧನೆಯಾಗುತ್ತದೆ‘ ಎನ್ನುತ್ತಾರೆ.

‘ನನ್ನ ಈ ಕಾರ್ಯಕ್ಕೆ ತುಂಬಾ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ನೌಕರಿ ಸೇರಿದ ಹೊಸತರಲ್ಲಿ ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯಲ್ಲಿ ತೊಡಗಿದಾಗ ವಿಶ್ರಾಂತಿ ಸಮಯದಲ್ಲಿ ಕಾಡಿನಲ್ಲಿ ಕುಳಿತು ಸಾಕಷ್ಟು ಪುಸ್ತಕಗಳನ್ನು ಓದಿ ಮುಗಿಸಿದ್ದೆ. ಇದನ್ನು ಕಂಡು ಹಲವು ಮೇಲಾಧಿಕಾರಿಗಳು ಒಳ್ಳೆಯ ಹವ್ಯಾಸ ಎಂದು ಬೆನ್ನುತಟ್ಟಿದ್ದರು‘ ಎಂಬುದನ್ನು ಅವರು ನೆನಪಿಸಿಕೊಂಡರು.

ಜಗದೀಶ ಅವರ ಪುಸ್ತಕ ಪ್ರೀತಿ ಕಂಡ ಅಶೋಕನಗರ ಪೊಲೀಸ್‌ ಠಾಣೆಯ ಅಧಿಕಾರಿ, ಸಿಬ್ಬಂದಿ ಕೂಡ ವಿಶ್ರಾಂತಿ ಸಮಯದಲ್ಲಿ, ರಾತ್ರಿ ಗಸ್ತು ವೇಳೆ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.

–ಸೋಮು ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT