ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಧ್ವಜ ದಿನಾಚರಣೆ, ಗಮನ ಸೆಳೆದ ಪಥ ಸಂಚಲನ

Last Updated 2 ಏಪ್ರಿಲ್ 2022, 13:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೊಲೀಸರು ಸಮಾಜದ ಬಗ್ಗೆ ಕಳಕಳಿ ಭಾವನೆ ಹೊಂದಬೇಕು. ಸಾರ್ವಜನಿಕ ನೆಮ್ಮದಿಗೆ ಕಾರ್ಯ ಪ್ರವೃತ್ತರಾಗಬೇಕು. ಪೊಲೀಸ್ ಸಿಬ್ಬಂದಿಗೆ ಶಿಸ್ತು ಮತ್ತು ಸಂಯಮ ಬಹಳ ಅವಶ್ಯಕ ಎಂದು ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ಅನಿಲ ಕುಲಕರ್ಣಿ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಹೊಸ ಸಿಎಆರ್ ಮೈದಾನದಲ್ಲಿ ಶನಿವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸರು ಕಾನೂನುಗಳ ಬಗ್ಗೆ ಅರಿವು ಹೊಂದುವುದು ಬಹಳ ಮುಖ್ಯ. ಕಾನೂನುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಬೇರೆಯವರು ನಮ್ಮ ಮೇಲೆ ಅಧಿಕಾರ ಚಲಾಯಿಸುವುದು ತಪ್ಪುತ್ತದೆ. ಅತ್ಯಂತ ಚುರುಕುತನದಿಂದ ತನಿಖೆ ಮಾಡಬೇಕು. ದಿನನಿತ್ಯದ ಒತ್ತಡದಲ್ಲಿ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದರು.

ನಿವೃತ್ತ ಪೊಲೀಸ್ ಇನ್ಸಪೆಕ್ಟರ್

ಅರುಣಕುಮಾರ ಸಾಳುಂಕೆ ಮಾತನಾಡಿ, 'ಯಾವ ಅಡೆತಡೆ ಇಲ್ಲದೆ ನಿವೃತ್ತಿ ಹೊಂದಲು ಅಧಿಕಾರಿಗಳು ತೋರಿದ ಸಹಕಾರ ಅನನ್ಯವಾದುದು. ಕಳೆದ 34 ವರ್ಷಗಳಲ್ಲಿ ಬಳ್ಳಾರಿ, ಹಾವೇರಿ, ಗದಗ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಸೇನಾ ಪಡೆಗಳು ಗಡಿಯನ್ನು ಕಾಯುವ ಹಾಗೆ, ಪೋಲಿಸರು ಆಂತರಿಕ ರಕ್ಷಣೆಯಲ್ಲಿ ತೊಡಗಿರುತ್ತಾರೆ. ಪೊಲೀಸ್ ಸಿಬ್ಬಂದಿ ಕೋವಿಡ್ ಅವಧಿಯಲ್ಲಿ ಸಮಾಜವನ್ನು ರಕ್ಷಣೆ ಮಾಡಲು ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಪೊಲೀಸರು ಒಂದು ದಿನವು ರಜೆ ತೆಗೆದುಕೊಳ್ಳದೇ ಹಗಲಿರುಳು ಸೇವೆಗೈದಿದ್ದಾರೆ. ದೈನಂದಿನ ಜೀವನದಲ್ಲಿ ಸವಾಲುಗಳು ಬರುವುದು ಸಹಜ. ಅವುಗಳನ್ನು ದಿಟ್ಟತನದಿಂದ ಎದುರಿಸಲು ಸನ್ನದ್ಧರಾಗಬೇಕು. ಸಾರ್ವಜನಿಕರು ನಮ್ಮ ಮೇಲೆ ಹೆಚ್ಚಿನ ಗೌರವ ಹೊಂದಿರುತ್ತಾರೆ. ಆ ಗೌರವವನ್ನು ಉಳಿಸಿಕೊಂಡು ಹೋಗಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಪೊಲೀಸ್ ಕಮಿಷನರ್ ಲಾಭೂರಾಮ್ ಮಾತನಾಡಿ ಕರ್ನಾಟಕ ಏಕೀಕರಣವಾದ ನಂತರ ಕರ್ನಾಟಕ ಪೊಲೀಸ್ ಪಡೆಯನ್ನು 1965ರ ಏಪ್ರಿಲ್‌ 2 ರಂದು ಕರ್ನಾಟಕ ಪೊಲೀಸ್ ಕಾಯ್ದೆಗೆ ಒಳಪಡಿಸಲಾಯಿತು. ಅದರ ಸ್ಮರಣೆಗಾಗಿ ಪ್ರತಿ ವರ್ಷ ಪೊಲೀಸ್ ಧ್ವಜ ದಿನವನ್ನಾಗಿ ರಾಜ್ಯದ ಎಲ್ಲ ಘಟಕಗಳಲ್ಲಿ ಆಚರಿಸಲಾಗುತ್ತದೆ. ಕಾನೂನು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳ ಸಂರಕ್ಷಣೆ ಮಾಡಲು ಈ ದಿನವನ್ನು ಮುಡಿಪಾಗಿಡಲಾಗುತ್ತದೆ. ನಿತ್ಯ ಜೀವನದಲ್ಲಿ ಶಾಂತಿ ಸೌಹಾರ್ದತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದ ತೋರಿದ ಶೌರ್ಯ, ಸಾಹಸ ಹಾಗೂ ನಿಸ್ವಾರ್ಥ ಸೇವೆಯನ್ನು ನೆನಪಿಸುವಂತಹ ದಿನವಿದು. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುವುದು. ನಿವೃತ್ತಿ ಹೊಂದಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಕುಟುಂಬದವರ ವೈದ್ಯಕೀಯ ವೆಚ್ಚ ಹಾಗೂ ಶವ ಸಂಸ್ಕಾರಕ್ಕಾಗಿ ಧನಸಹಾಯವನ್ನು ನೀಡಲಾಗುತ್ತದೆ. ಸಂಗ್ರಹವಾದ ಹಣದಲ್ಲಿ ಅರ್ಧದಷ್ಟು ಪೊಲೀಸ್ ಕಲ್ಯಾಣ ನಿಧಿಗೆ ಹಾಗೂ ಉಳಿದ ಅರ್ಧ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಉಪಯೋಗಿಸಲಾಗುತ್ತದೆ. ಕಲ್ಯಾಣ ನಿಧಿಯ ಮೊತ್ತದಿಂದ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚ ಹಾಗೂ ಸಿಬ್ಬಂದಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಬಳಸಲಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಪೊಲೀಸ್ ಸಿಬ್ಬಂದಿ ನಾಗರಾಜ ಕೆಂಚಪ್ಪನವರ , ಶಿವಾನಂದ ತಿಮ್ಮಾಪುರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಸಂತೋಷ ಭೋಜಪ್ಪಗೋಳ ಅವರು ಪೊಲೀಸ್ ಪಡೆಗಳ ಪಥ ಸಂಚಲನದ ನೇತೃತ್ವ ವಹಿಸಿದ್ದರು. ಎಡ್ವಿನ್ ಡಿಸೋಜಾ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್ ಪಥ ಸಂಚಲನ ನಡೆಸಿತು. ಆರ್ ಎಸ್ ಐ ಭಾಗಣ್ಣ ವಾಲೀಕಾರ ರಾಷ್ಟ್ರ ಧ್ವಜದ ಬೆಂಗಾವಲು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT