ಬಿಆರ್‌ಟಿಎಸ್‌ ನಿರ್ವಹಣೆಗೊಂದು ಪೊಲೀಸ್‌ ಠಾಣೆ

7
ರಾಜ್ಯ ಗೃಹ ಸಚಿವಾಲಯಕ್ಕೆ ಪ್ರಸ್ತಾವ ಕಳುಹಿಸಿದ ಪೊಲೀಸ್‌ ಕಮಿಷನರ್‌

ಬಿಆರ್‌ಟಿಎಸ್‌ ನಿರ್ವಹಣೆಗೊಂದು ಪೊಲೀಸ್‌ ಠಾಣೆ

Published:
Updated:
Deccan Herald

ಹುಬ್ಬಳ್ಳಿ: ಎಲ್ಲವೂ ಅಂದುಕೊಂಡಂತೆ ಆದರೆ ಬಿಆರ್‌ಟಿಎಸ್‌ ವತಿಯಿಂದ ಅವಳಿ ನಗರದ ಮಧ್ಯೆ ಸಂಚರಿಸುವ ಚಿಗರಿ ಬಸ್‌ಗಳ ಭದ್ರತೆ ಹಾಗೂ ಕಾರಿಡಾರ್‌ ಉಸ್ತುವಾರಿ ನೋಡಿಕೊಳ್ಳಲು ಪೊಲೀಸ್‌ ಠಾಣೆ ಆರಂಭವಾಗಲಿದೆ.

ಈ ಸಂಬಂಧ ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌ ಗೃಹ ಇಲಾಖೆಗೆ ಪ್ರಸ್ತಾವವೊಂದನ್ನು ಕಳಿಸಿದೆ. ಸಾಮಾನ್ಯ ಪೊಲೀಸ್‌ ಠಾಣೆಗೆ ಇರುವಂತೆ ಇಲ್ಲಿಯೂ ಇನ್‌ಸ್ಪೆಕ್ಟರ್‌, ಪಿಎಸ್‌ಐ, ಎಎಸ್‌ಐ, ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಕಾನ್‌ಸ್ಟೆಬಲ್‌ಗಳು ಕಾರ್ಯನಿರ್ವಹಿಸಲಿದ್ದಾರೆ.

ಕಾರಿಡಾರ್‌ನಲ್ಲಿ ಖಾಸಗಿ ವಾಹನಗಳು ನುಸುಳಿದರೆ ಎಫ್ಐಆರ್‌ ದಾಖಲಿಸುವ, ದಂಡ ವಸೂಲಿ ಮಾಡುವ ಹಾಗೂ ‘ಚಿಗರಿ’ ಬಸ್‌ಗಳ ಓಡಾಟಕ್ಕೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಬಿಆರ್‌ಟಿಎಸ್‌ ಪೊಲೀಸ್‌ ಠಾಣೆಯ ಮೇಲೆ ಇರಲಿದೆ.

ಜನಪ್ರತಿನಿಧಿಗಳು ಬಸ್‌ನಲ್ಲಿ ಸಂಚರಿಸುವ ವೇಳೆ ಅವರಿಗೆ ಭದ್ರತೆ ನೀಡುವುದೂ ಪೊಲೀಸರ ಕರ್ತವ್ಯವಾಗಲಿದೆ. ಒಟ್ಟು 100 ಸಿಬ್ಬಂದಿಯನ್ನು ಈ ಠಾಣೆಗೆ ನಿಯೋಜಿಸುವ ಉದ್ದೇಶವಿದ್ದು, ಅನುಮೋದನೆ ದೊರಕಿದ ಬಳಿಕ ಠಾಣೆ ರಚನೆ ಆರಂಭವಾಗಲಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಡಿಸಿಪಿ ಬಿ.ಎಸ್‌.ನೇಮಗೌಡ, ‘ದೇಶದ ಯಾವ ಬಿಆರ್‌ಟಿಎಸ್ ಬಸ್‌ ಹಾಗೂ ಕಾರಿಡಾರ್‌ ನಿರ್ವಹಣೆಗೆಂದೇ ಪ್ರತ್ಯೇಕ ಪೊಲೀಸ್‌ ಠಾಣೆ ಇಲ್ಲ. ಆದರೆ, ಹುಬ್ಬಳ್ಳಿ–ಧಾರವಾಡದಲ್ಲಿ ಮೊದಲ ಬಾರಿಗೆ ಇಂತಹ ಠಾಣೆ ಆರಂಭಿಸುವ ಉದ್ದೇಶವಿದೆ. ಇದಕ್ಕಾಗಿ ಗೃಹ ಇಲಾಖೆಗೆ ಪ್ರಸ್ತಾವ ಕಳಿಸಿಕೊಟ್ಟಿದ್ದೇವೆ’ ಎಂದರು.

‘ರೈಲ್ವೆಯ ಆಸ್ತಿ ಪಾಸ್ತಿ ರಕ್ಷಣೆಗಾಗಿ ರೈಲ್ವೆ ಸುರಕ್ಷಾ ದಳ (ಆರ್‌ಪಿಎಫ್‌) ಇರುತ್ತದೆ. ಅದಕ್ಕೆ ರೈಲುಗಳು, ನಿಲ್ದಾಣಗಳು ಹಾಗೂ ಪ್ರಯಾಣಿಕರ ಆಸ್ತಿಪಾಸ್ತಿಯನ್ನು ಕಾಯುವ ಜವಾಬ್ದಾರಿ ಇರುತ್ತದೆ. ಅಪರಾಧ ಪ್ರಕರಣಗಳು ನಡೆದಾಗ ತನಿಖೆ ನಡೆಸುವ ಅಧಿಕಾರವೂ ಇರುತ್ತದೆ. ಬಿಆರ್‌ಟಿಎಸ್‌ಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಉದ್ದೇಶವಿತ್ತು. ಆದರೆ, ಭದ್ರತಾ ದಳಕ್ಕೆ ಬಸ್‌ಗೆ ರಕ್ಷಣೆ ನೀಡುವುದನ್ನು ಬಿಟ್ಟು ಬೇರೆ ಅವಕಾಶ ಇರುವುದಿಲ್ಲ. ಹೀಗಾಗಿ, ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಆರಂಭವಾದರೆ ಎಲ್ಲ ಅಧಿಕಾರಗಳು ದೊರೆಯಲಿವೆ. ಹೀಗಾಗಿ, ಕಾಯಂ ಪೊಲೀಸ್‌ ಠಾಣೆ ಆರಂಭಿಸುವ ಯೋಜನೆ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !