ಗುರುವಾರ , ಏಪ್ರಿಲ್ 22, 2021
22 °C
ನೂತನ ಯಂತ್ರದ ಪ್ರಾತ್ಯಕ್ಷಿಕೆ ನಡೆಸಿದ ಅಧಿಕಾರಿಗಳು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಗೆ ಚಿಂತನೆ

ದೂಳು ತೆಗೆಯುವ ಯಂತ್ರ ಖರೀದಿಗೆ ಪಾಲಿಕೆ ಚಿಂತನೆ

ನಾಗರಾಜ್‌ ಬಿ.ಎನ್‌. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಳೆ ಹಾಗೂ ಬೇಸಿಗೆ ಎರಡೂ ಕಾಲದಲ್ಲಿ ರಸ್ತೆ ಸ್ವಚ್ಛಗೊಳಿಸಲು ಅನುಕೂಲವಾಗುವ ನೂತನ ತಂತ್ರಜ್ಞಾನ ಹೊಂದಿರುವ ಯಂತ್ರ ಖರೀದಿಸಲು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ.

ಚೆನ್ನೈ ಮೂಲದ ಕಂಪನಿಯ ‘ಟ್ರ್ಯಾಕ್ಟರ್‌ ಮೌಂಟೆಡ್‌ ಸ್ವೀಪರ್‌ ಮೆಷಿನ್‌’ ಅನ್ನು ಸೋಮವಾರ ನಗರದ ಕೊಪ್ಪಿಕರ್‌ ರಸ್ತೆಯಲ್ಲಿ ಪಾಲಿಕೆ ಅಧಿಕಾರಿಗಳು ಪ್ರಾತ್ಯಕ್ಷಿಕೆ ನಡೆಸಿದರು. ₹18 ಲಕ್ಷ ಬೆಲೆಯ ಈ ಯಂತ್ರದ ಕಾರ್ಯ ವೈಖರಿಯ ಸಾಧಕ, ಬಾಧಕ ಪರಿಶೀಲಿಸಿ ಖರೀದಿಸಬೇಕೋ, ಬೇಡವೋ ಎಂದು ಪಾಲಿಕೆ ಆಡಳಿತ ನಿರ್ಧರಿಸಲಿದೆ.

‘ಒಂದು ಟ್ರ್ಯಾಕ್ಟರ್‌, ಹಿಂಭಾಗದಲ್ಲಿ 500 ಲೀಟರ್‌ ಸಿಂಟ್ಯಾಕ್ಸ್‌, ಮುಂಭಾಗದಲ್ಲಿ ಬ್ರಶ್‌ ಒಳಗೊಂಡಿದ್ದು, ರಸ್ತೆಯನ್ನು ಸುಲಭವಾಗಿ ಶುಚಿಗೊಳಿಸಬಹುದು. ಪುಣೆ, ಚೆನ್ನೈ, ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಈ ಯಂತ್ರ ಬಳಕೆ ಆಗುತ್ತಿದೆ. ರಸ್ತೆಯಲ್ಲಿರುವ ದೂಳನ್ನು ಸುಲಭವಾಗಿ ತೆಗೆಯಬಹುದಾಗಿದೆ. ವಿಶೇಷವೆಂದರೆ ಮಳೆಗಾಲದಲ್ಲಿಯೂ ಇದನ್ನು ಬಳಕೆ ಮಾಡಿ, ರಸ್ತೆ ಅಂಚಿನಲ್ಲಿರುವ ಕೆಸರು ಶುಚಿಗೊಳಿಸಲು ಸಾಧ್ಯ. ಯಂತ್ರದ ಕಾರ್ಯ ವೈಖರಿಯನ್ನು ಪ್ರಾತ್ಯಕ್ಷಿಕೆ ಮೂಲಕ ನೋಡಲಾಗಿದೆ. ಅದನ್ನು ಖರೀದಿಸುವ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಪಾಲಿಕೆ ಕಮಿಷನರ್‌ ಸುರೇಶ ಇಟ್ನಾಳ್ ‘ಪ್ರಜಾವಾಣಿ’ಗೆ ತಿಳಿಸಿದರು.

‘2011–12ರ ಅವಧಿಯಲ್ಲಿ ದೂಳು ಸ್ವಚ್ಛಗೊಳಿಸುವ ಎರಡು ಯಂತ್ರಗಳನ್ನು ಖರೀದಿಸಲಾಗಿತ್ತು. ಒಂದೊಂದು ಯಂತ್ರಕ್ಕೆ ₹ 70 ಲಕ್ಷ ವೆಚ್ಚ ಮಾಡಲಾಗಿತ್ತು. ಏಳು ವರ್ಷಗಳ ಅವಧಿಯಲ್ಲಿ ಆ ಯಂತ್ರಗಳು ಕೇವಲ ಹತ್ತು ತಿಂಗಳು ಮಾತ್ರ ಕಾರ್ಯ ನಿರ್ವಹಿಸಿವೆ.. ಅದರ ಬಿಡಿ ಭಾಗಗಳು ಹಾಳಾಗಿದ್ದರಿಂದ ಕಾರ್ಯ ನಿರ್ವಹಿಸಲಿಲ್ಲ. ಅದರ ಬಿಡಿ ಭಾಗಗಳು ಸ್ಥಳೀಯವಾಗಿ ದೊರೆಯುತ್ತಿರಲಿಲ್ಲ. ಎರಡು ತಿಂಗಳ ಹಿಂದಷ್ಟೇ ಬಿಡಿ ಭಾಗಗಳನ್ನು ಜೋಡಿಸಿ ದುರಸ್ತಿ ಮಾಡಲಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ನಾಲ್ಕೈದು ವರ್ಷಗಳಿಂದ ಅವಳಿ ನಗರದ ಸ್ವಚ್ಛತೆಗೆ ಮಹಾನಗರ ಪಾಲಿಕೆ ಬೇಕಾಬಿಟ್ಟಿಯಾಗಿ ಹಣ ವೆಚ್ಚ ಮಾಡುತ್ತಿದೆ. ವರ್ಷಕ್ಕೊಂದು ಹೊಸ ಯಂತ್ರ, ನೂತನ ತಂತ್ರಜ್ಞಾನ ಎನ್ನುತ್ತ ಯಂತ್ರಗಳನ್ನು ಖರೀದಿಸುತ್ತಿದೆ. ಆದರೆ, ಆ ಯಂತ್ರಗಳು ವರ್ಷದಲ್ಲಿ ಒಂದು ತಿಂಗಳು ಸಹ ಕೆಲಸ ಮಾಡುವುದಿಲ್ಲ. ಸಾರ್ವಜನಿಕರ ಹಣ ಪೋಲಾಗುತ್ತಿದೆ ಎನ್ನುವುದು ಜನರ ಆರೋಪ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು