ರಾಜಕೀಯ ಹಸ್ತಕ್ಷೇಪ; ಸಹಕಾರ ಕ್ಷೇತ್ರದ ಸ್ವಾಯತ್ತತೆಗೆ ದಕ್ಕೆ

7
ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಆತಂಕ

ರಾಜಕೀಯ ಹಸ್ತಕ್ಷೇಪ; ಸಹಕಾರ ಕ್ಷೇತ್ರದ ಸ್ವಾಯತ್ತತೆಗೆ ದಕ್ಕೆ

Published:
Updated:
Deccan Herald

ಹುಬ್ಬಳ್ಳಿ: ರಾಜಕೀಯ ಹಸ್ತಕ್ಷೇಪದಿಂದ ಸಹಕಾರ ಕ್ಷೇತ್ರದ ಗೌರವ, ಘನತೆ, ಸ್ವಾಯತ್ತತೆಗೆ ದಕ್ಕೆಯಾಗುತ್ತಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಕೆಸಿಸಿಐ ಸಭಾಂಗಣದಲ್ಲಿ ಧಾರವಾಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಹಕಾರ ಕ್ಷೇತ್ರಗಳ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ. ಸ್ವಾರ್ಥಿಗಳಿಂದ ತುಂಬಿದೆ. ಹೀಗಾಗಿ ಸಹಕಾರ ಕ್ಷೇತ್ರಗಳು ಉತ್ತಮ ಕೆಲಸ ನಿರ್ವಹಿಸಿದೇ ನಷ್ಟದಲ್ಲಿವೆ ಎಂದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊಸ, ಹೊಸ ಕಾಯ್ದೆ, ಕಾನೂನು ಜಾರಿಗೆ ತರುತ್ತಿರುವುದರಿಂದ ಸಹಕಾರ ಕ್ಷೇತ್ರ ಹೊಸ ಸವಾಲು, ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳನ್ನು ಅಧಿಕಾರಿ ಹಾಗೂ ಸಿಬ್ಬಂದಿ ಸಮರ್ಥವಾಗಿ ನಿಬಾಯಿಸುವ ಚಾಕಚಕ್ಯತೆ ಬೆಳಸಿಕೊಳ್ಳಬೇಕು ಎಂದು ಹೇಳಿದರು.

ಕೃಷಿಕರ ಏಳಿಗೆಗೆ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಆಡಳಿತ ವರ್ಗ ಶ್ರಮಿಸಬೇಕು. ಸಹಕಾರ ಕ್ಷೇತ್ರವನ್ನು ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುವುದು ನಿಲ್ಲಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಧಾರವಾಡ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಬಾಪುಗೌಡ ಡಿ.ಪಾಟೀಲ, ಕೃಷಿಕರಿಗೆ ಸಾಲ ವಿತರಣೆ ಮತ್ತು ಸಾಲ ಮನ್ನಾ, ಜಿಎಸ್‌ಟಿ ಜಾರಿ, ನೋಟ್‌ ರದ್ದು ಕ್ರಮಗಳಿಂದ ಸಹಕಾರ ಸಂಸ್ಥೆಗಳು ಸಾಕಷ್ಟು ಸಮಸ್ಯೆಗೆ ಒಳಗಾಗಿದ್ದು, ಇವುಗಳ ಸಮರ್ಥ ನಿರ್ವಹಣೆ ಸಂಬಂಧ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದರು.

ಧಾರವಾಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಪ್ರಸಕ್ತ ಸಾಲಿನಲ್ಲಿ ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳ 1.15 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹ 230 ಕೋಟಿ ಕೃಷಿ ಸಾಲ ವಿತರಿಸಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದ ಬಳಿಕ ಬ್ಯಾಂಕಿಗೆ ₹ 200 ಕೋಟಿ ಪಾವತಿಸಿದೆ. ಇನ್ನೂ ₹ 73 ಕೋಟಿ ಬರುವುದು ಬಾಕಿ ಇದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್‌.ಗಂಗಣ್ಣ, ಪ್ರಾಥಮಿಕ ಸಹಕಾರ ಬ್ಯಾಂಕುಗಳು ರೈತರ ಜೀವನಾಡಿಯಾಗಿ ಕೆಲಸ ಮಾಡಬೇಕಿದೆ ಎಂದರು.

ರಾಜ್ಯದ 21 ಜಿಲ್ಲೆಗಳಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿದ್ದು, ಇವುಗಳ ಅಡಿಯಲ್ಲಿ 5400 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 2.5 ಕೋಟಿ ಜನರು ವಿವಿಧ ಸಹಕಾರ ಬ್ಯಾಂಕುಗಳ ವ್ಯಾಪ್ತಿಗೊಳಪಟ್ಟಿವೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಹೊರ ನಿಯಮಾವಳಿಗಳಿಂದ ಸಹಕಾರ ಬ್ಯಾಂಕುಗಳಿಗೆ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚಾಗಿವೆ. ಸಹಕಾರ ಕಾನೂನುಗಳಿಗೆ ತಿದ್ದುಪಡಿ ತರುವ ಮುನ್ನಾ ಹಿರಿಯ ಸಹಕಾರಗಳ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ಅಧ್ಯಕ್ಷ ಜಿ.ಪಿ.ಪಾಟೀಲ, ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಐ.ಎಸ್‌.ಪಾಟೀಲ, ಧಾರವಾಡ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವಿ.ಮುಗದ, ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ಪ್ರತಾಪ ಎ.ಚವ್ಹಾಣ, ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎನ್‌.ಅರುಣಕುಮಾರ್, ಕೆಸಿಸಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಶೆಲ್ಲಿಕೇರಿ, ಸಹಕಾರ ಸಂಘಗಳ ಉಪನಿಬಂಧಕ ಸಾವಿತ್ರಿ ಬಿ.ಕಡಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ರಂಗಸ್ವಾಮಿ, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಬಸವಣ್ಣೆಪ್ಪ ಎನ್‌.ನವಲಗುಂದ ಮತ್ತು ಮಂಜುನಾಥ ಎಸ್‌. ಮುರಳ್ಳಿ ಇದ್ದರು.
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !