ಪಿಒಪಿ ಗಣೇಶ ಬಳಸಿದರೆ ದಂಡ, ಜೈಲು ಶಿಕ್ಷೆ

7
ಜಿಲ್ಲಾಧಿಕಾರಿ ದೀಪಾ ಚೋಳನ್‌ ನೇತೃತ್ವದಲ್ಲಿ ಗಣೇಶ ಹಬ್ಬದ ಪೂರ್ವಭಾವಿ ಸಭೆ

ಪಿಒಪಿ ಗಣೇಶ ಬಳಸಿದರೆ ದಂಡ, ಜೈಲು ಶಿಕ್ಷೆ

Published:
Updated:
Deccan Herald

ಹುಬ್ಬಳ್ಳಿ: ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಮಾದರಿಯ ಗಣೇಶ ಮೂರ್ತಿಗಳನ್ನು ಬಳಸದಂತೆ 2016ರಿಂದಲೇ ಸರ್ಕಾರ ಆದೇಶ ಹೊರಡಿಸಿದೆ. ಎರಡು ವರ್ಷ ಸಡಿಲಿಕೆ ನೀಡಲಾಗಿತ್ತು. ಈ ಬಾರಿ ಅಂತಹ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರೆ ಕಠಿಣ ಕ್ರಮ ಜರುಗಿುವುದು ಖಚಿತ’ ಎಂದು ಜಿ‌ಲ್ಲಾಧಿಕಾರಿ ದೀಪಾ ಚೋಳನ್‌ ಸ್ಪಷ್ಟಪಡಿಸಿದರು.

ನಗರದ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಹಾನಗರ ಪಾಲಿಕೆ ಸದಸ್ಯರು, ಗಣೇಶ ಮಹಾಮಂಡಳಗಳ ಪದಾಧಿಕಾರಿಗಳು, ಪಾಲಿಕೆ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ‘ಜಿಲ್ಲಾಡಳಿತದ ಸೂಚನೆ ಮಧ್ಯೆಯೂ ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರೆ ಅಂಥವರ ವಿರುದ್ಧ ₹ 10 ಸಾವಿರ ದಂಡ ಅಥವಾ ಮೂರು ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಕಠಿಣ ಕ್ರಮಕ್ಕೆ ಅವಕಾಶ ಕೊಡಬೇಡಿ’ ಎಂದು ಮನವಿ ಮಾಡಿದರು.

‘ಮುಂದಿನ ವರ್ಷ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದಿಲ್ಲ ಎಂಬ ಭರವಸೆ ನೀಡುತ್ತಲೇ ಎರಡು ವರ್ಷಗಳು ಉರುಳಿವೆ. ಈ ಬಾರಿ ಯಾವುದೇ ಕಾರಣಕ್ಕೂ ಅವಕಾಶ ನೀಡಲು ಸಾಧ್ಯವಿಲ್ಲ. ಎಲ್ಲರೂ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಸಹಕರಿಸಬೇಕು’ ಎಂದರು.

‘ಸಾರ್ವಜನಿಕ ಗಣೇಶೋತ್ಸವ ಸಮಿತಿಗಳವರು ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಜಿಲ್ಲಾಡಳಿತದ ಅನುಮತಿ ಪಡೆಯಬೇಕು. ಅವಳಿ ನಗರದಲ್ಲಿ ಮೂರು ಕಡೆ ಅನುಮತಿ ನೀಡುವ ಕೇಂದ್ರಗಳನ್ನು ಆರಂಭಿಸಲಾಗಿದೆ. ಪಾಲಿಕೆ, ಹೆಸ್ಕಾಂ, ಅಗ್ನಿಶಾಮಕ ದಳಕ್ಕೆ ಸಂಬಂಧಿಸಿದ ಎಲ್ಲ ಅನುಮತಿಗಳು ಇಲ್ಲೇ ಸಿಗಲಿವೆ’ ಎಂದು ಹೇಳಿದರು.

ಗಣೇಶ ಮೂರ್ತಿ ತಯಾರಿಸುವ ಕಲಾವಿದ ಬಾಲಕೃಷ್ಣ ಮಾತನಾಡಿ, ‘ಜಿಲ್ಲಾಡಳಿತದ ಮಾತಿಗೆ ಬೆಲೆ ಕೊಟ್ಟು ನಾವು ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ನಿಷೇಧದ ಆದೇಶದ ಮಧ್ಯೆಯೂ ಪಿಒಪಿ ಗಣೇಶ ಮೂರ್ತಿಗಳೇ ಎಲ್ಲೆಡೆ ದೊರೆಯುತ್ತವೆ. ನಾವು ತಯಾರಿಸಿದ ಮೂರ್ತಿಗಳನ್ನು ಕೊಳ್ಳುವವರೇ ಇಲ್ಲ. ಅಲ್ಲದೇ, ಮೂರ್ತಿಗಳನ್ನು ಮಾರಾಟಕ್ಕೆ ಇಡಲು ಪಾಲಿಕೆ ವತಿಯಿಂದ ನಮಗೆ ಜಾಗದ ವ್ಯವಸ್ಥೆ ಮಾಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ದೀಪಾ ಚೋಳನ್‌, ‘ಜಾಗ ಕೊಡಿಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ರೇಣುಕಾ ಸುಕುಮಾರ್‌ ಮಾತನಾಡಿ, ‘ಕಮಿಷನರೇಟ್‌ ವ್ಯಾಪ್ತಿಯಲ್ಲಿ 13 ಕಡೆ ಚೆಕ್‌ ಪೋಸ್ಟ್‌ಗಳನ್ನು ಆರಂಭಿಸಲಾಗಿದ್ದು, ಪಿಒಪಿ ಗಣಪತಿಗಳು ಬೇರೆ ಕಡೆಯಿಂದ ಬಂದರೆ ತಡೆದು ವಾಪಸ್‌ ಕಳಿಸಲಾಗುವುದು. ರಸ್ತೆ ಮಧ್ಯದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುವಂತೆ ಸಾರ್ವಜನಿಕ ಗಣೇಶ ಮಂಡಳಿಯವರು ಟೆಂಟ್‌ ಹಾಕಬಾರದು. ಇದರಿಂದ ಸಾರ್ವಜನಿಕರಿಗೇ ತೊಂದರೆಯಾಗಲಿದೆ’ ಎಂದು ಮನವಿ ಮಾಡಿದರು.

ಮೇಯರ್‌ ಸುಧೀರ್‌ ಸರಾಫ, ಉಪಮೇಯರ್‌ ಮೇನಕಾ ಹುರಳಿ, ಪಾಲಿಕೆ ವಿರೋಧ ಪಕ್ಷದ ನಾಯಕ ಗಣೇಶ ಟಗರಗುಂಟಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವಿಜಯಕುಮಾರ್‌ ಕಡಕ್‌ಭಾವಿ, ಎಸಿಪಿ ಎಚ್‌.ಕೆ. ಪಠಾಣ, ಹುಬ್ಬಳ್ಳಿ ಗಣೇಶೋತ್ಸವ ಮಹಾಮಂಡಳಿಗಳ ಅಧ್ಯಕ್ಷ ಶ್ರೀಶೈಲಪ್ಪ ಶೆಟ್ಟರ್‌, ಮುಖಂಡ ಮೋಹನ ಲಿಂಬಿಕಾಯಿ, ಪರಿಸರವಾದಿ ಶಂಕರ ಕುಂಬಿ, ಜಿತೇಂದ್ರ ಮಜೇಥಿಯಾ ವೇದಿಕೆಯಲ್ಲಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !