ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌ಐ, ಎಸ್‌ಡಿಪಿಐ ನಿಷೇಧ ಸಾಧ್ಯತೆ: ಶೆಟ್ಟರ್‌

Last Updated 6 ಆಗಸ್ಟ್ 2022, 4:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ಕುರಿತು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ. ಯಾವುದೇ ಹಂತದಲ್ಲಾದರೂ ಇವುಗಳನ್ನು ನಿಷೇಧಿಸುವ ವಿಶ್ವಾಸವಿದೆ. ಆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಜನ್ಮದಿನದ ಅಮೃತಮಹೋತ್ಸವದಿಂದ ಬಿಜೆಪಿಗೆ ನಡುಕ ಉಂಟಾಗಿಲ್ಲ. ಪಕ್ಷದ ಬೆಳವಣಿಗೆ, ಸಂಘಟನೆಗೆ ಇದರಿಂದ ಯಾವುದೇ ಧಕ್ಕೆ ಆಗಿಲ್ಲ. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೂಚನೆಯಂತೆ ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡರು. ಅದು ತೋರಿಕೆಯಒಗ್ಗಟ್ಟು ಅಷ್ಟೇ. ಕಾಂಗ್ರೆಸ್‌ನಲ್ಲಿನ ಆಂತರಿಕ ಜಗಳ ದೊಡ್ಡದಾಗುತ್ತಿದ್ದು, ಈ ಜನ್ಮ ದಿನಾಚರಣೆಯಿಂದ ಕಾಂಗ್ರೆಸ್‌ಗೇ ಸಮಸ್ಯೆಯಾಗಿದೆ’ ಎಂದರು.

‘ಬಿಜೆಪಿ ವತಿಯಿಂದ ನಡೆದ ಸಂಕಲ್ಪಯಾತ್ರೆ, ರೈತರ ಸಮಾವೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ 4–5 ಲಕ್ಷ ಜನ ಸೇರಿದ್ದರು. ಸಿದ್ದರಾಮಯ್ಯ ಜನ್ಮದಿನದ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರ ಸೇರಿದ್ದ ದೊಡ್ಡ ವಿಷಯವೇನೂ ಅಲ್ಲ. ಆ ಕಾರ್ಯಕ್ರಮಕ್ಕಾಗಿ ಬಹಳಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ, ದೇಶದಲ್ಲಿ ಕಾಂಗ್ರೆಸ್‌ ಸಂಘಟನೆ ದಿನೇ ದಿನೇ ಕುಸಿಯತ್ತಿದೆ. ರಾಜ್ಯವೂ ಶೀಘ್ರ ಕಾಂಗ್ರೆಸ್‌ ಮುಕ್ತವಾಗುತ್ತದೆ’ ಎಂದು ಟೀಕಿಸಿದರು.

‘ಕಾಂಗ್ರೆಸ್‌ನವರಿಗೆ ಬೇರೆ ವಿಷಯ ಇಲ್ಲದೆ, ಖಾದಿ ವಿಚಾರದಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ. ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದತ್ತ ಈಗಷ್ಟೇ ಅವರು ಇಣುಕುತ್ತಿದ್ದಾರೆ. ಅಲ್ಲಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಕೇವಲ ಎರಡು ನಿಮಿಷ ಇದ್ದರು. ಅಧಿಕಾರದಲ್ಲಿದ್ದಾಗ ಖಾದಿ ಬಗ್ಗೆ ಕಾಳಜಿ ತೋರದ ಕಾಂಗ್ರೆಸ್‌, ಈಗ ನಾಟಕವಾಡುತ್ತಿದೆ’ ಎಂದರು.

‘ಖಾದಿ ಉತ್ಪಾದನೆ ಹಾಗೂ ಮಾರಾಟಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಕೇಂದ್ರ ಸರ್ಕಾರ ಖಾದಿಗೆ ಮಹತ್ವ ಕೊಟ್ಟಿದೆ. ರಾಷ್ಟ್ರಧ್ವಜ ತಯಾರಿಕೆಯಲ್ಲಿ ಎಲ್ಲಾದರೂ ಲೋಪವಾಗಿದ್ದರೆ ಸರಿಪಡಿಸಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ರಾಷ್ಟ್ರಧ್ವಜ ಬೇಕಿರುವುದರಿಂದ ಪಾಲಿಸ್ಟರ್‌ ಧ್ವಜಗಳು ಅನಿವಾರ್ಯವಾಗಿವೆ. ಆದರೆ ವಾಸ್ತವದಲ್ಲಿ, ಖಾದಿ ಉತ್ಪಾದನೆ, ಖಾದಿ ಬಟ್ಟೆಗಳ ಮಾರಾಟ ಹೆಚ್ಚಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT