ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ–ದಿಲ್ಲಿ ಬೆಸೆದ ಅಂಚೆ ಸ್ಮಾರ್ಟ್‌ ಜಾಲದಲ್ಲಿ ಮಸುಕು

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 9 ಅಕ್ಟೋಬರ್ 2019, 9:50 IST
ಅಕ್ಷರ ಗಾತ್ರ

ತೀರ್ಥರೂಪರಾದ ತಂದೆಯವರಿಗೆ...

ನಾನು ಕ್ಷೇಮ, ನಿಮ್ಮ ಕ್ಷೇಮ–ಕುಶಲಕ್ಕೆ ಪತ್ರ ಬರೆಯಿರಿ..

ತಂದೆ ಸಮಾನರಾದ ಅಣ್ಣನವರಿಗೆ...

ಹೀಗೆಲ್ಲ ಪತ್ರ ಬರೆಯುವ ಕಾಲವೊಂದಿತ್ತು. ಕಾರ್ಡ್‌, ಇನ್‌ಲ್ಯಾಂಡ್‌ ಲೆಟರ್‌ ಬರುವುದಕ್ಕೆ ಅಂಚೆಯಣ್ಣನಿಗೆ ಕಾಯುವ ದಿನಗಳೂ ಇದ್ದವು.ಆದರೆ,ಆಧುನಿಕ ತಂತ್ರಜ್ಞಾನ ಮೈಗೂಡಿಸಿಕೊಂಡ ಮೇಲೆ ಇದಕ್ಕೆ ತಿಲಾಂಜಲಿ ಇಡಲಾಗಿದೆ. ಸಂದೇಶ ರವಾನೆಗೆ ಆಧಾರಸ್ತಂಭವಾಗಿದ್ದ ಅಂಚೆ ಇಲಾಖೆ ಇಂದು ‘ಸ್ಮಾರ್ಟ್‌’ ತಂತ್ರಜ್ಞಾನದ ಸ್ಪರ್ಧೆಯ ಸುಳಿಗೆ ಸಿಕ್ಕಿಕೊಂಡು ಜನಮಾನಸದಿಂದ ದೂರವಾಗುತ್ತಿದೆ.

ಇಂಟರ್ನೆಟ್‌, ವಾಟ್ಸ್‌ಆ್ಯಪ್, ಫೇಸ್‌ಬುಕ್‌, ಟ್ವಿಟರ್‌ ಹಾಗೂ ಇ–ಮೇಲ್‌ ಜಮಾನದಲ್ಲಿ ‘ಅಂಚೆ’ಯ ಅಸ್ತಿತ್ವ ಮಸುಕಾಗಿದೆ. ಪೋಸ್ಟ್‌ ಕಾರ್ಡ್‌, ಇನ್‌ಲ್ಯಾಂಡ್‌ ಲೆಟರ್‌ಗಳು ಜನಮಾನಸದಿಂದ ದೂರ ಸಾಗುತ್ತಿವೆ. ‘ಭಾರತೀಯ ಅಂಚೆ’ ಆಧುನೀಕರಣಯತ್ತ ದಾಪುಗಾಲು ಹಾಕಿದ್ದರೂ ಐದು ವರ್ಷದ ಅವಧಿಯಲ್ಲಿ ಪತ್ರ ರವಾನೆಯ ಕ್ಷೇತ್ರದಲ್ಲಿ ಅಂಚೆ ಇಲಾಖೆಯ ಸೇವೆಗಳ ಬಳಕೆ ಶೇ 60ರಷ್ಟು ಕಡಿಮೆಯಾಗಿದೆ.

ಅಂಚೆ ಸೇವೆಗಳ ಮಹತ್ವ ತಿಳಿಸಲು ಏನೆಲ್ಲಾ ಪ್ರಯತ್ನಪಟ್ಟರೂ ಜನರ ‘ಬದಲಾದ ಮನಃಸ್ಥಿತಿ’ ಅಂಚೆಯಣ್ಣನನ್ನು ಒಪ್ಪಿಕೊಳ್ಳದಂತಾಗಿದೆ. ತ್ವರಿತ ನಿರ್ಧಾರ ತೆಗೆದುಕೊಂಡು ಸೇವೆ ಒದಗಿಸಲು ‘ಅಂಚೆ’ಗಿರುವ ಇತಿಮಿತಿ, ಕಾನೂನು ಚೌಕಟ್ಟುಗಳೇ ಸ್ಪರ್ಧೆಯಲ್ಲಿ ಹಿಂದುಳಿಯಲು ಕಾರಣವಾಗಿದೆ.ಇಷ್ಟೆಲ್ಲಾ ಕಷ್ಟ–ನಷ್ಟಗಳ ನಡುವೆಯೂ ಅಂಚೆ ಇಲಾಖೆ ಹಲವು ಸೌಲಭ್ಯಗಳನ್ನು ವಿತರಿಸುತ್ತಿದೆ. ಪ್ರಚಾರದ ಕೊರತೆಯಿಂದ ಅಸ್ತಿತ್ವ ಸಾಬೀತುಪಡಿಸಲು ಹೆಣಗಾಡುತ್ತಿದೆ.

ಪತ್ರಗಳಿಗೆ ಬರ

ನಮ್ಮ ಬಡಾವಣೆಯಲ್ಲಿ ಪೋಸ್ಟ್‌ ಬಾಕ್ಸ್‌ ಇಲ್ಲ. ಇಲ್ಲೊಂದು ಸ್ಥಾಪಿಸಬೇಕು. ಬೆಳಿಗ್ಗೆ, ಮಧ್ಯಾಹ್ನ ಪತ್ರಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಸಾರ್ವಜನಿಕರುಐದಾರು ವರ್ಷಗಳ ಹಿಂದೆಯೂ ಮನವಿ ಸಲ್ಲಿಸುತ್ತಿದ್ದರು. ಆದರೆ, ‘ಸ್ಮಾರ್ಟ್‌’ ತಂತ್ರಜ್ಞಾನ ಅತಿಬಳಕೆಯಿಂದ ಇದೀಗ ಪೋಸ್ಟ್‌ ಬಾಕ್ಸ್‌ ಹೋಗಲಿ, ಪತ್ರ ಬರೆಯುವುದನ್ನೇ ಬಹುತೇಕ ನಿಲ್ಲಿಸಿದ್ದಾರೆ. ಪೋಸ್ಟ್‌ ಬಾಕ್ಸ್‌ಗಳು ಅಲ್ಲಲ್ಲಿ ಕಂಡು ಬಂದರೂ ವೈಯಕ್ತಿಕ ಪತ್ರಗಳ(ಪರ್ಸನಲ್‌ ಲೆಟರ್‌) ಸಂಖ್ಯೆ ಕಡಿಮೆಯಾಗಿದೆ. ಆದಾಯ ತೆರಿಗೆ, ಎಲ್‌ಐಸಿ, ಸರ್ಕಾರದ ನೋಟಿಸ್‌ಗಳ ವಿಲೇವಾರಿ ಅಂಚೆ ಇಲಾಖೆ ಮೂಲಕವೇ ಆಗುತ್ತಿರುವುದರಿಂದ ಇನ್‌ಲ್ಯಾಂಡ್‌ ಲೆಟರ್‌ಗಳನ್ನು ಇನ್ನೂ ಕಾಣಬಹುದಾಗಿದೆ.

ಅಂಚೆ ಇಲಾಖೆ ಕಾಗದ–ಪತ್ರಗಳ ರವಾನೆಗಷ್ಟೇ ಸೀಮಿತವಲ್ಲ. ಸರ್ಕಾರಿ ಸೌಲಭ್ಯಗಳನ್ನು ತೆಗೆದುಕೊಳ್ಳುವಲ್ಲಿ ಅಂಚೆ ಇಲಾಖೆಯಲ್ಲಿನ ಖಾತೆಗಳೇ ಬೇಕು. ಅದಕ್ಕಾಗಿ ಇಂದಿಗೂ ಸಾರ್ವಜನಿಕರು ಖಾತೆಗಳನ್ನು ಹೊಂದಿದ್ದಾರೆ. ಆದರೂನಿರೀಕ್ಷಿಸದಷ್ಟು ತಂತ್ರಜ್ಞಾನದ ಬಳಕೆ ಇಲ್ಲದೆ, ಖಾಸಗಿ ಪೈಪೋಟಿಯಲ್ಲಿ ವಾಣಿಜ್ಯವಾಗಿ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಇದೆಲ್ಲದರ ನಡುವೆಯೂ ಹತ್ತಾರು ಜನಸ್ನೇಹಿ ಸೇವೆಗಳನ್ನು ಹೊಂದಿರುವ ಅಂಚೆ ಇಲಾಖೆ, ಅವುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನವನ್ನೂ ಮಾಡುತ್ತಿದೆ. ಅಲ್ಲದೆ, ವಿದ್ಯಾರ್ಥಿಗಳಲ್ಲಿ ಬರೆಯುವ ಹವ್ಯಾಸವನ್ನು ಉಳಿಸಿಕೊಳ್ಳಲು ಪ್ರಬಂಧದಂತಹ ಸ್ಪರ್ಧೆಗಳನ್ನು ಅಂಚೆ ಮೂಲಕವೇ ಆಯೋಜಿಸುತ್ತಿದೆ. ಈ ಮೂಲಕ ಯುವ ಜನಾಂಗಕ್ಕೆ ಪತ್ರ ಬರೆಯಲು ಪ್ರೇರೇಪಿಸುತ್ತಿದೆ.

ಪಾರ್ಸಲ್‌ ಎಂದರೆ ಅಂಚೆ ಇಲಾಖೆ ಎಂದಿದ್ದ ಕಾಲದಲ್ಲಿ ಖಾಸಗಿ ಕೊರಿಯರ್‌ ಸೇವೆ ಆರಂಭವಾದಾಗ ಅಂಚೆ ಇಲಾಖೆಗೆ ಹಿನ್ನಡೆಯಾಯಿತು. ರಿಜಿಸ್ಟರ್ಡ್‌ ಪೋಸ್ಟ್‌ ಮಾಡಿದರೆ ಆ ವ್ಯಕ್ತಿಗೇ ಪತ್ರ ಅಥವಾ ವಸ್ತು ವಿಲೇವಾರಿ ಆಗುತ್ತದೆ ಎಂಬ ಮಾತಿತ್ತು. ಕೊರಿಯರ್‌ ಎಂಬ ಖಾಸಗಿ ವ್ಯವಸ್ಥೆ ಜಾರಿಯಾದ ಮೇಲೆ ಇಂತಹ ವೈಯಕ್ತಿಕ ಕಾಗದ ಹಾಗೂ ವಸ್ತು ವಿಲೇವಾರಿಗೆ ಅಂಚೆ ಇಲಾಖೆಯನ್ನು ನಾಗರಿಕರು ಅವಲಂಬಿಸುವುದು ಕ್ಷೀಣವಾಯಿತು. ಆದರೆ, ಸರ್ಕಾರಿ ಇಲಾಖೆಗಳು ಅಂಚೆ ಇಲಾಖೆ ಮೂಲಕವೇ ವೈಯಕ್ತಿಕ ಪತ್ರ ರವಾನಿಸುತ್ತಿರುವುದು ಇಲಾಖೆಗೆ ಜೀವಜಲ ನೀಡಿದಂತಾಗಿದೆ.

ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ

ಅಂಚೆ ಇಲಾಖೆಯಲ್ಲಿ ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದರೂ ಸಾಕಷ್ಟು ಸಮಯ ಬೇಕು. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಹಣಕಾಸು ಇಲಾಖೆ, ಪ್ರಸಾರ ಖಾತೆ ಸೇರಿದಂತೆ ಒಟ್ಟು ಏಳು ಇಲಾಖೆಗಳ ಅಡಿಯಲ್ಲಿ ಅಂಚೆ ಇಲಾಖೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಸ್ಪಷ್ಟ ಹಾಗೂ ತ್ವರಿತ ನಿರ್ಧಾರ ಕೈಗೊಳ್ಳಲು ಆಗುತ್ತಿಲ್ಲ. ಆದರೆ, ಖಾಸಗಿ ಸಂಸ್ಥೆಗಳು ತ್ವರಿತವಾಗಿ ನಿರ್ಧಾರ ಕೈಗೊಳ್ಳುವುದರಿಂದ ಉತ್ತಮ ಸೇವೆ ಒದಗಿಸಲಿವೆ.

ಅಂಚೆ ಚೀಟಿ ಬಳಕೆಗೆ ಜಾಗೃತಿ

ಶಾಲಾ ಕಾಲೇಜುಗಳಲ್ಲಿ ಅಂಚೆ ಚೀಟಿ ಬಳಕೆಗೆ ಇಲಾಖೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಸದ್ಯ ಸಹಕಾರಿ ಸಂಘಗಳು ಮಾಸಿಕ ಸಭೆ, ವಾರ್ಷಿಕ ಸಭೆಗಳಿಗೆ ಆಹ್ವಾನ ನೀಡಲು ಇನ್‌ಲ್ಯಾಂಡ್‌ ಲೆಟರ್‌ ಬಳಸುತ್ತಿವೆ.

ಅಂಚೆ ಇಲಾಖೆಯು ನಗರ ಪ್ರದೇಶಕ್ಕೆ 24 ಗಂಟೆಯೊಳಗೆ ಸ್ಪೀಡ್‌ ಪೋಸ್ಟ್‌ ತಲುಪಿಸುತ್ತಿದೆ. ಗ್ರಾಮೀಣ ಪ್ರದೇಶಗಳಿಗಾದರೆ 72 ಗಂಟೆಯೊಳಗೆ ಬೇಕಾಗುತ್ತದೆ. ಜತೆಗೆ ಅಂಚೆ ಇಲಾಖೆಗೆ ಸಗಟು ಪ್ರಮಾಣದಲ್ಲಿ
ಹಾಗೂ ನಿರ್ದಿಷ್ಟ ರೂಟ್‌ನಲ್ಲೇ ಕಳುಹಿಸಬೇಕಿರುವುದರಿಂದ ಕೊಂಚ ವಿಳಂಬ ಆಗಬಹುದು. ಆದರೆ, ಸೇವೆ ಖಚಿತವಾಗಿರುತ್ತದೆ. ಖಾಸಗಿಯವರು ಒಂದೆರಡು ಪೋಸ್ಟ್‌ಗಳನ್ನು ಬಸ್‌ನಲ್ಲೋ ಅಥವಾ ಇನ್ಯಾವುದೇ ಸಂಪರ್ಕ ವ್ಯವಸ್ಥೆಯೊಂದಿಗೆ ಕಳುಹಿಸುತ್ತಾರೆ. ಅವರು ಹಳ್ಳಿಗಳಿಗೆ ಸೇವೆ ಒದಗಿಸುವುದಿಲ್ಲ.

ಪ್ರಮುಖ ಸೇವೆಗಳು

‘ಕಡಿಮೆ ಶುಲ್ಕ, ಹೆಚ್ಚು ಬಡ್ಡಿ’ ಎಂಬ ಘೋಷವಾಕ್ಯದೊಂದಿಗೆ ಶೂನ್ಯ ದರದಲ್ಲಿ ಉಳಿತಾಯ ಖಾತೆ ತೆರೆಯುವ ಸೌಲಭ್ಯ ಒದಗಿಸಿದೆ.ಖಾತೆಯಲ್ಲಿ ಮಿನಿಮಮ್‌ ಬ್ಯಾಲೆನ್ಸ್‌ ₹50 ಇದ್ದರೆ ಸಾಕು ವಹಿವಾಟು ನಡೆಸಲು ಅವಕಾಶ ಕಲ್ಪಿಸಿದೆ. ₹500 ಮಿನಿಮಮ್‌ ಬ್ಯಾಲೆನ್ಸ್‌ ಇದ್ದರೆ ಚೆಕ್‌ ಬುಕ್‌ ಪಡೆಯಬಹುದು. ಇಂಟರ್ನೆಟ್‌, ಮೊಬೈಲ್‌ ಬ್ಯಾಂಕಿಂಗ್‌ ಹಾಗೂ ಎಸ್‌ಎಂಎಸ್‌ ಸೇವೆ ಕೂಡ ಲಭ್ಯವಿದೆ.

ಐಪಿಪಿಬಿ (ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌) ವ್ಯವಸ್ಥೆ, ಪೋಸ್ಟಲ್‌ ಲೈಫ್‌ ಇನ್‌ಶ್ಯೂರೆನ್ಸ್‌ ಸೌಲಭ್ಯ, ಸ್ಪೀಡ್‌ ಪೋಸ್ಟ್‌, ರಿಜಿಸ್ಟಾರ್‌ ಪೋಸ್ಟ್‌, ಪಾರ್ಸೆಲ್‌ ಪೋಸ್ಟ್‌, ಬಿಸಿನೆಸ್‌ ಪಾರ್ಸೆಲ್‌, ಲಾಜಿಸ್ಟಿಕ್‌, ಕ್ಯಾಷ್ ಆನ್‌ ಡಿಲೆವರಿ(ಸಿಒಡಿ), ಡೈರೆಕ್ಟ್‌ ಪೋಸ್ಟ್‌, ವಿಪಿಪಿ ಸೌಲಭ್ಯವೂ ಸಿಗುತ್ತಿದೆ. ಜತೆಗೆ ಇಂಟರ್‌ ನ್ಯಾಷನಲ್‌ ಸ್ಪೀಡ್‌ ಪೋಸ್ಟ್‌, ರಿಜಿಸ್ಟಾರ್‌, ಪಾರ್ಸೆಲ್‌ ಪೋಸ್ಟ್‌, ಏರ್‌ ಪಾರ್ಸೆಲ್‌, ಸರ್ಫೇಸ್‌ ಪರ್ಸೆಲ್‌ ಸೌಲಭ್ಯ ಇದೆ. ಅಂಚೆ ಇಲಾಖೆಯಲ್ಲಿ ಇಂಟರ್‌ ನ್ಯಾಷನಲ್‌ ಅಂಚೆ ಸೇವೆ ಅತ್ಯಂತ ಕಡಿಮೆ ದರದಲ್ಲಿ ಸಿಗಲಿದೆ.

ಮನೆ ಮನೆ ಬ್ಯಾಂಕಿಂಗ್

ಐಪಿಪಿಬಿ ವ್ಯವಸ್ಥೆಯಲ್ಲಿ ಹಿರಿಯ ನಾಗರಿಕರಿಗೆ ಮನೆ ಮನೆ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೊಬೈಲ್‌ನಲ್ಲಿ ಐಪಿಪಿಬಿ ತಂತ್ರಾಂಶ ಡೌನ್‌ಲೋಡ್‌ ಮಾಡಿಕೊಂಡ ಹಿರಿಯ ನಾಗರಿಕರು ಹಣಕ್ಕಾಗಿ ಸಂದೇಶ ಕಳುಹಿಸಿದರೆ ಅವರ ಖಾತೆಯಿಂದ ಹಣ ಡ್ರಾ ಮಾಡಿಕೊಂಡು ಹೋಗಿ ಮನೆಗೆ ತಲುಪಿಸಲಾಗುವುದು. ಇದಕ್ಕಾಗಿ ಅಂಚೆಯಣ್ಣಂದಿರಿಗೆ ಮೊಬೈಲ್, ಆರ್‌ಐಸಿಟಿ ಡಿವೈಸ್ ನೀಡಿದ್ದು, ಹಣ ತಲುಪಿಸಿ ಡಿಜಿಟಲ್ ಸಹಿ ಪಡೆಯಲಾಗುತ್ತದೆ.

ತಿರುಮಲ ದರ್ಶನಕ್ಕೆ ಟಿಕೆಟ್ ಬುಕ್ಕಿಂಗ್: ತಿರುಪತಿ ತಿರುಮಲ ದರ್ಶನಕ್ಕೆ ಆನ್‌ಲೈನ್‌ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿಕೊಡಲಾಗುತ್ತದೆ. ಇದು ಹೆಡ್ ಪೋಸ್ಟ್ ಆಫೀಸ್‌ನಲ್ಲಿ (ಹುಬ್ಬಳ್ಳಿಯ ಅಂಬೇಡ್ಕರ್‌ ವೃತ್ತ) ಮಾತ್ರ ಇರಲಿದೆ. ನವನಗರದ ಅಂಚೆ ಕಚೇರಿಯಲ್ಲಿ ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆಯೂ ಇದೆ. ಇದಕ್ಕೆ ಯಾವುದೇ ಶುಲ್ಕ ಇಲ್ಲ.

ಅಂಚೆ ಸಪ್ತಾಹ ಇಂದಿನಿಂದ

ಅ.9ರಿಂದ ಅಂಚೆ ಸಪ್ತಾಹ ಆಚರಣೆಗೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಚೇರಿಯಲ್ಲಿ ಕೇಕ್ ಕತ್ತರಿಸಿ, ಶಾಲಾ ಮಕ್ಕಳಿಗೆ ಅಂಚೆ ಸೇವೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಪೋಸ್ಟ್ ಫೋರಂ ಸಮಿತಿ ಸದಸ್ಯರು ಸಪ್ತಾಹದಲ್ಲಿ ಭಾಗವಹಿಸುವರು. ಐವರು ಸದಸ್ಯರನ್ನು ಒಳಗೊಂಡ ಸಮಿತಿಯಲ್ಲಿ ನಿವೃತ್ತ ಸರ್ಕಾರಿ ನೌಕರರು, ಸಾಮಾಜಿಕ ಕಾರ್ಯಕರ್ತರು, ಮೌಲ್ಯಯುತ ಗ್ರಾಹಕರು, ಮಾರ್ಕೆಟಿಂಗ್ ವ್ಯವಸ್ಥಾಪಕರು ಹಾಗೂ ಎಲ್ಲ ಕ್ಷೇತ್ರಗಳ ಗಣ್ಯರು ಇರುವರು. ಈ ಸಮಿತಿ ಮೂರು ತಿಂಗಳಿಗೆ ಒಮ್ಮೆ ಸಭೆ ಸೇರಿ ಕುಂದುಕೊರತೆಗಳ ಬಗ್ಗೆ ಚರ್ಚಿಸಲಿದೆ. ಸಾರ್ವಜನಿಕರಿಗಾಗಿ ಕಚೇರಿಗಳಲ್ಲಿ ದೂರು ಹಾಗೂ ಸಲಹಾ ಪುಸ್ತಕ ಇರಿಸಿದ್ದು, ಸಮಸ್ಯೆಗಳ ಬಗ್ಗೆ ಬರೆಯಬಹುದು. ಅದನ್ನು ಪರಿಹರಿಸಿದ ಬಗ್ಗೆ ಅಧಿಕಾರಿಗಳು ದೂರುದಾರರಿಗೆ ಪ್ರತಿಕ್ರಿಯಿಸುವರು.ಜನಸುರಕ್ಷಾ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಜೀವನ್‌ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್‌ ಪಿಂಚಣಿ ಯೋಜನೆಗಳನ್ನು ಒದಗಿಸಲಾಗುತ್ತಿದೆ.

ಪ್ರಬಂಧ ಸ್ಪರ್ಧೆ

ಪ್ರತಿ ವರ್ಷ ಅಕ್ಟೋಬರ್‌ ತಿಂಗಳಲ್ಲಿ ವಿದ್ಯಾರ್ಥಿಗಳಿಗಾಗಿ ಅಂಚೆ ಪ್ರದರ್ಶನ, ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ ನಡೆಯಲಿದೆ. ಪ್ರಬಂಧ ಸ್ಪರ್ಧೆ ವಿಜೇತರಿಗೆ ₹25 ಸಾವಿರ ಬಹುಮಾನ ನೀಡಲಾಗುವುದು. ಈ ವರ್ಷ ಅಂಚೆ ಸಪ್ತಾಹದ ಅಂಗವಾಗಿ ಕಾಲೇಜು, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.

‘ಗಾಂಧಿ ಯೂ ಆರ್‌ ಇಮ್ಮಾರ್ಟಲ್‌’ / ‘ಪ್ರಿಯ ಬಾಪು ಆಪ್‌ ಅಮರ್‌ ಹೈ’ ಪ್ರಬಂಧದ ವಿಷಯವಾಗಿದೆ. ಇದನ್ನು ಇನ್‌ಲ್ಯಾಂಡ್‌ ಅಥವಾ ಎ4 ಅಳತೆಯ ಕಾಗದದಲ್ಲಿ ಬರೆದು ಕಳುಹಿಸಬೇಕು. ಎ4 ಹಾಳೆಯಲ್ಲಿ 1000 ಪದ, ಇನ್‌ಲ್ಯಾಂಡ್‌ನಲ್ಲಿ 500 ಪದಗಳ ಮಿತಿ ಇರಲಿದೆ. ಪ್ರಬಂಧ ಬರೆದು ಕಳುಹಿಸಲು ಕೊನೆಯ ದಿನಾಂಕ ನವೆಂಬರ್‌ 30. ಪ್ರಬಂಧಗಳನ್ನು ಹುಬ್ಬಳ್ಳಿಯ ಅಂಬೇಡ್ಕರ್‌ ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿಗೆ ತಲುಪಿಸಬೇಕು.

ಸರ್ವರ್‌ ಸಮಸ್ಯೆ

ಅವಳಿ ನಗರದ ಕೆಲ ಅಂಚೆ ಕಚೇರಿಗಳಲ್ಲಿ ಸರ್ವರ್‌ನದ್ದೇ ದೊಡ್ಡ ಸಮಸ್ಯೆ. ಎಲೆಕ್ಟ್ರಾನಿಕ್‌ ಮೇಲ್‌ ಸರ್ವೀಸ್‌ ಮಾಡಲು ಹೋದರೆ ಸರ್ವರ್‌ ಡೌನ್‌ ಇದೆ ಎಂಬ ಉತ್ತರ ನೀಡುತ್ತಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಮಾತ್ರ ಸರ್ವರ್‌ ಸಮಸ್ಯೆ ಇರುತ್ತದೆ. ಆಗ ನಾವೇನು ಮಾಡಲಾಗಲ್ಲ’ ಎನ್ನುತ್ತಾರೆ ಅಂಚೆ ಇಲಾಖೆ ಅಧಿಕಾರಿಗಳು. ಅಂಥ ಸಮಸ್ಯೆಗಳು ಕಂಡು ಬಂದಾಗ ಸಹಾಯವಾಣಿ ಸಂಖ್ಯೆ 18002666868ಕ್ಕೆ ಕರೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದರು.

ಅಂಕಿ ಅಂಶಗಳು

1. 54 ಲಕ್ಷ -ದೇಶದಲ್ಲಿರುವ ಒಟ್ಟು ಅಂಚೆ ಕಚೇರಿಗಳು

80,000 – ದೇಶದ ಗ್ರಾಮೀಣ ಪ್ರದೇಶದಲ್ಲಿರುವ ಅಂಚೆ ಕಚೇರಿಗಳು

208 – ಧಾರವಾಡ ಜಿಲ್ಲೆಯಲ್ಲಿರುವ ಒಟ್ಟು ಅಂಚೆ ಕಚೇರಿಗಳು

4,33,417 – ಬದುಕು ರೂಪಿಸಿಕೊಂಡನೌಕರರು

₹11,496 ಕೋಟಿ – ಅಂಚೆ ಇಲಾಖೆ ವಾರ್ಷಿಕ ಬಜೆಟ್‌ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT