ಹುಬ್ಬಳ್ಳಿ–ಧಾರವಾಡ: ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ವಾರದಲ್ಲಿ ಆರಂಭ

7
ಪಾಲಿಕೆಯ ಮೂರು ವಿಭಾಗಗಳಿಗೆ ಪ್ರತ್ಯೇಕ ಟೆಂಡರ್: ಪ್ರಮುಖ ರಸ್ತೆಗಳಿಗೆ ಪ್ರಥಮ ಆದ್ಯತೆ

ಹುಬ್ಬಳ್ಳಿ–ಧಾರವಾಡ: ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ವಾರದಲ್ಲಿ ಆರಂಭ

Published:
Updated:
Deccan Herald

ಹುಬ್ಬಳ್ಳಿ: ಅವಳಿ ನಗರದ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದ್ದು, ಇನ್ನೊಂದು ವಾರದಲ್ಲಿ ಕೆಲಸ ಆರಂಭಿಸಲಿದೆ. ಪಾಲಿಕೆಯ ಉತ್ತರ, ದಕ್ಷಿಣ ಹಾಗೂ ಧಾರವಾಡ ವಿಭಾಗದಲ್ಲಿ ಗುಂಡಿ ಮುಚ್ಚಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ತಲಾ ₹ 1.50 ಕೋಟಿಯಂತೆ ಒಟ್ಟು ₹ 4.50 ಕೋಟಿ ವ್ಯಯಿಸಲಾಗುತ್ತಿದೆ.

ಡಾಂಬರಿನ ಮೇಲ್ಪದರ ಕಿತ್ತು ಹೋಗಿದ್ದರೆ ಅದನ್ನು ರಸ್ತೆ ಗುಂಡಿ ಎಂದೇ ಪರಿಗಣಿಸಲಾಗುತ್ತದೆ. ಟೆಂಡರ್ ಕರೆಯುವ ಮೊದಲು ನಗರದ ರಸ್ತೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಸುಮಾರು 9 ಸಾವಿರ ಗುಂಡಿಗಳು ಪತ್ತೆಯಾಗಿವೆ. ಆಯಾ ವಲಯದ ಕಿರಿಯ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿರುವ ಗುಂಡಿಗಳೆಷ್ಟು ಎಂಬುದರ ಬಗ್ಗೆ ವಿಸ್ತೃತ ಸಮೀಕ್ಷೆ ನಡೆಸಿದ್ದಾರೆ. ಆದರೆ ಈ ಪ್ರಕ್ರಿಯೆ ಮುಗಿದು ಈಗಾಗಲೇ ಎರಡು ತಿಂಗಳಾಗಿದ್ದು, ಗುಂಡಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.

ಸತತ ಮಳೆ ಸುರಿಯುತ್ತಿದ್ದ ಕಾರಣ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಮುಂದೂಡಲಾಗುತ್ತಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಲು ಬೀಳುತ್ತಿರುವುದರಿಂದ ಕಾಮಗಾರಿ ಆರಂಭಿಸಲು ಪಾಲಿಕೆ ಮುಂದಾಗಿದೆ. ವಾಣಿಜ್ಯ ವಹಿವಾಟು ಹೆಚ್ಚಾಗಿರುವ ನಗರದ ಪ್ರಮುಖ ರಸ್ತೆಗಳ ಗುಂಡಿಯನ್ನು ಮೊದಲು ಮುಚ್ಚಲಾಗುತ್ತದೆ. ಆ ನಂತರ ನಗರ ಭಾಗದ ರಸ್ತೆ, ಅದು ಮುಗಿದ ಮೇಲೆ ಬಡಾವಣೆಗಳ ಪ್ರಮುಖ ರಸ್ತೆ, ಆ ನಂತರ ಒಳ ರಸ್ತೆಗಳಲ್ಲಿ ಕಾಮಗಾರಿ ನಡೆಸಲಾಗುತ್ತದೆ.

ಕಾಮಗಾರಿ ಪೂರ್ಣಗೊಳ್ಳಲು ಎರಡು ವಾರ ಬೇಕಾಗುತ್ತದೆ. ಮೂರು ವಿಭಾಗಗಳಲ್ಲಿ ಪ್ರತ್ಯೇಕ ಟೆಂಡರ್ ಆಗಿರುವುದರಿಂದ ತಡವಾಗದು. ಬರಿ ಡಾಂಬರು ಪದರ ಮಾತ್ರ ಕಿತ್ತು ಹೋಗಿದ್ದರೆ ಅದನ್ನು ಹಾಕಲಾಗುತ್ತದೆ. ಅದಕ್ಕಿಂತ ಆಳವಾಗಿ ಗುಂಡಿ ಬಿದ್ದಿದ್ದರೆ ಜಲ್ಲಿ ಕಲ್ಲು, ಮರಳು,  ಮಿಶ್ರಣ ಹಾಕಿ ಹಾಗೂ ಆ ನಂತರ ಡಾಂಬರು ಹಾಕಲಾಗುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಪಾಲಿಕೆ ವ್ಯಾಪ್ತಿಯ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ದೊಡ್ಡ ಗುಂಡಿಗಳು ಅಪಘಾತಕ್ಕೂ ಕಾರಣವಾಗುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !