ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಜರಿಕೆ ಕಿತ್ತೊಗೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಶಂಭು ಹಕ್ಕಿ

ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ ಪತ್ರಿಕಾ ಬಳಗ ಆಯೋಜಿಸಿದ್ದ ಎಡ್ಯುವರ್ಸ್‌ ಶೈಕ್ಷಣಿಕ ಮೇಳ
Last Updated 10 ಜುಲೈ 2022, 15:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆ, ಹಿಂಜರಿಕೆ ಬಿಡಬೇಕು. ಇದೇ ನಮ್ಮ ವಿದ್ಯಾರ್ಥಿಗಳನ್ನು ಸಾಧನೆಯ ಹಾದಿಯಿಂದ ಹಿಂದಕ್ಕೆ ಎಳೆಯುತ್ತದೆ’ ಎಂದು ದಕ್ಷಿಣ ಚೀನಾದ ಭಾರತೀಯ ರಾಯಭಾರಿಶಂಭು ಹಕ್ಕಿ ಹೇಳಿದರು.

‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವು ನಗರದ ಗೋಕುಲ ಗಾರ್ಡನ್ಸ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಎಡ್ಯುವರ್ಸ್‌ 2022 ಶೈಕ್ಷಣಿಕ ಮೇಳ’ದ ಎರಡನೇ ದಿನದ ಕಾರ್ಯಕ್ರಮದಲ್ಲಿ ‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಎದುರಿಸುವ ಸವಾಲುಗಳು, ಪರಿಹಾರಗಳು’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಯಷ್ಟೇ ಅಲ್ಲ, ಯಾವುದೇ ಕ್ಷೇತ್ರ ಯಶಸ್ಸು ಸಾಧಿಸಬೇಕಾದರೂ ಆ ನಿರ್ದಿಷ್ಟ ಕ್ಷೇತ್ರಕ್ಕೆ ಬೇಕಾದ ಕೌಶಲಗಳನ್ನು ರೂಢಿಸಿಕೊಳ್ಳಲು ಸ್ವಯಂ ಬದಲಾವಣೆ ಮಾಡಿಕೊಳ್ಳಬೇಕು. ನಮ್ಮ ಚಟುವಟಿಕೆಗಳು ಬದಲಾಗಬೇಕು. ಗ್ರಾಮೀಣ ಭಾಗದ ಮತ್ತು ಹಳ್ಳಿ ವಿದ್ಯಾರ್ಥಿಗಳಲ್ಲಿ ಸಂಯಮ ಹೆಚ್ಚಿರುತ್ತದೆ. ಅವರು ಸುಲಭವಾಗಿ ಸೋಲು ಒಪ್ಪಿಕೊಳ್ಳುವುದಿಲ್ಲ. ಆದರೆ, ಹಿಂಜರಿಕೆ ಹಾಗೂ ನನಗೆ ಸಾಧ್ಯವಿಲ್ಲ ಎನ್ನುವ ಮನೋಭಾವದಿಂದ ಅವರು ಹೊರಗೆ ಬರಬೇಕು. ಯಶಸ್ಸಿಗೆ ಮುಳುವಾಗಿರುವುದೇ ಈ ಕಾರಣಗಳುಎಂದು ಅಭಿಪ್ರಾಯಪಟ್ಟರು.‌‌‌

ಭಿನ್ನವಾದ ಓದುವ ವಿಧಾನ: ಶಾಲಾ, ಕಾಲೇಜಿನಲ್ಲಿ ಓದುವುದಕ್ಕೂ, ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಶಾಲಾ– ಕಾಲೇಜಿನಲ್ಲಿ ಓದಿದ ರೀತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೂ ಓದಿದರೆ ಪ್ರಯೋಜನವಾಗದು. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹೆಚ್ಚು ತಾಳ್ಮೆ ಬೇಡುತ್ತದೆ. ಬದ್ಧತೆಯಿಂದ ಯಾವ ವಿಷಯವನ್ನು ಓದಬೇಕು ಎಂದು ಪಟ್ಟಿ ಮಾಡಿಕೊಂಡು ಅಭ್ಯಾಸ ಮಾಡಬೇಕು. ನಿಮ್ಮದೇ ತಂತ್ರಗಾರಿಕೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ‌‌

ಪ್ರೊ.ಶಾಂತಾರಾಮ್‌ ನಾಯಕ್‌ ಅವರು ಕಾಮೆಡ್‌ ಕೆ ಪ್ರವೇಶ ಪ್ರಕ್ರಿಯೆ ಬಗ್ಗೆ ಮಾತನಾಡಿ, ‘ಕಾಲೇಜು ಪ್ರವೇಶಕ್ಕೆ ಕೊನೆಯ ಹಂತದಲ್ಲಿ ಅರ್ಜಿ ಸಲ್ಲಿಸುವುದಕ್ಕಿಂತ ಮೊದಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಉತ್ತಮ’ಎಂದುಸಲಹೆನೀಡಿದರು.

ಸಿಇಟಿ ಪ್ರಕ್ರಿಯೆ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೋಡಲ್ ಅಧಿಕಾರಿ (ಧಾರವಾಡ) ಡಾ. ಗುರುನಾಥ ಬಡಿಗೇರ ವಿವರಣೆ ನೀಡಿದರು.

ಪತ್ರಿಕೆ ಓದು– ನಿತ್ಯ ಮಂತ್ರವಾಗಲಿ

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಚ್ಛಿಸುವವರು ದಿನ ಪತ್ರಿಕೆ ಓದುವುದನ್ನು ಮೂಲಮಂತ್ರವನ್ನಾಗಿಸಿಕೊಳ್ಳಬೇಕು. ಜಗತ್ತಿನಲ್ಲಿ ಏನಾಗುತ್ತಿದೆ ಎನ್ನುವುದನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು. ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಇದು ಸುದೀರ್ಘ ಪ್ರಕ್ರಿಯೆಯಾಗಿದ್ದು, ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಸಂತೋಷಪಡಿ ಎಂದು ಶಂಭು ಹಕ್ಕಿ ಹೇಳಿದರು.

ಕೋಚಿಂಗ್‌ ಅಲ್ಲ; ಪರಿಶ್ರಮ ಮುಖ್ಯ

ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಯಾವುದೇ ಪರೀಕ್ಷೆಯನ್ನಾದರೂ, ಯಾವುದೇ ಕೋಚಿಂಗ್‌ ಇಲ್ಲದೆ ಉತ್ತೀರ್ಣರಾಗಬಹುದು. ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಕೇವಲ ಶೇ 5ರಷ್ಟು ಮಾತ್ರ ಸೌಕರ್ಯಗಳು ಗಣನೆಗೆ ಬರುತ್ತವೆ. ಇನ್ನುಳಿದ ಶೇ 95ರಷ್ಟು ಪ್ರಮಾಣ ನಿಮ್ಮ ಪರಿಶ್ರಮವೇ ಕಾರಣವಾಗುತ್ತದೆ. ಸಮಾನ ಮನಸ್ಕರ ಗುಂಪು ಕಟ್ಟುಕೊಂಡು ವಿಷಯವಾರು ಚರ್ಚಿಸುವುದು, ನಿತ್ಯ ತಪ್ಪದೆ ಪತ್ರಿಕೆ ಓದುವುದು ಹಾಗೂ ಚರ್ಚೆ ಮಾಡುವ ಮೂಲಕ ಪರೀಕ್ಷೆಗೆ ತಯಾರಿ ನಡೆಸಬಹುದು. ಮೊಬೈಲ್‌– ಇಂಟರ್‌ನೆಟ್‌ ಹಾಗೂ ಇತರ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜ್ಞಾನ ಪಡೆಯಬಹುದು ಎಂದುಶಂಭು ಸಲಹೆ ನೀಡಿದರು.

ಪ್ರಶ್ನೋತ್ತರ

ಶೈಕ್ಷಣಿಕ ಮೇಳದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರಶ್ನೆಗಳಿಗೆ ಡಾ. ಗುರುನಾಥ ಬಡಿಗೇರ, ಪ್ರೊ. ಶಾಂತಾರಾಮ್‌ ನಾಯಕ್‌ ಅವರು ಉತ್ತರಿಸಿದರು.

* ಕಾಮೆಡ್‌ ಕೆ ಪ್ರವೇಶ ಪರೀಕ್ಷೆ ರದ್ದಾಗುತ್ತದೆಯೇ – ಸೌಮೇಶ
ಇಲ್ಲಿಯವರೆಗೆ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಅಂತೆ ಕಂತೆ ಸುದ್ದಿಗಳನ್ನು ನಂಬಬೇಡಿ. ಸರ್ಕಾರ ಅಧಿಕೃತವಾಗಿ ಹೇಳುವವರೆಗೆ ಕಾಮೆಡ್‌ ಕೆ ಕಾರ್ಯನಿರ್ವಹಿಸಲಿದೆ. ಕರ್ನಾಟಕ ಪರೀಕ್ಷೆ ಪ್ರಾಧಿಕಾರ (ಕೆಇಎ) ವೆಬ್‌ಸೈಟ್‌ ಅನ್ನು ಆಗಾಗ ಪರಿಶೀಲಿಸುತ್ತಿರಬೇಕು.

* ದಾಖಲೆಗಳ ದೃಢೀಕರಣಕ್ಕೆ ಯಾರ ಸಹಿ ಅವಶ್ಯಕತೆ ಇದೆ– ನಾಗರಾಜ ಪಾಟೀಲ
ಗೆಜೆಟೆಡ್‌ ಎ ಮತ್ತು ಬಿ ಹೊಂದಿರುವ ಅಧಿಕಾರಿಗಳ ಸಹಿ ಪಡೆದುಕೊಳ್ಳಬಹುದು.

* ದ್ವಿತೀಯ ಪಿಯುಸಿ ಅಂಕಪಟ್ಟಿ ಬಂದಿಲ್ಲ. ಇದು ಕಾಲೇಜು ಪ್ರವೇಶ ಪಡೆಯುವ ವೇಳೆ ಸಮಸ್ಯೆ ಆಗಲಿದೆಯೇ– ಉಮಾಪತಿ
ಎಲ್ಲರ ಅಂಕಪಟ್ಟಿ ಬರುವುದು ತಡವಾಗಿದ್ದರೆ, ಸರ್ಕಾರದಿಂದ ನಿರ್ದಿಷ್ಟ ನಿರ್ದೇಶನ ಬರಲಿದೆ. ನಿಮ್ಮ ಅಂಕಪಟ್ಟಿ ಮಾತ್ರ ಬಂದಿಲ್ಲ ಎಂದಾದರೆ, ಸಕಾರಣ ನೀಡಬೇಕಾಗುತ್ತದೆ. ಆದಷ್ಟು ಬೇಗನೇ ಕೆಇಎ ಸಹಾಯವಾಣಿ ಸಂಪರ್ಕಿಸಿ, ಪರಿಹಾರ ಕಂಡುಕೊಳ್ಳಿ.

* ವೃತ್ತಿ ಶಿಕ್ಷಣದ ಸೀಟುಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಇರುವ ಮೀಸಲಾತಿ ಪಡೆಯವುದು ಹೇಗೆ– ಮಹೇಂದ್ರ ಕುಮಾರ

ರಾಜ್ಯದಲ್ಲಿ ಕನಿಷ್ಠ ಏಳು ವರ್ಷ ವಿದ್ಯಾಭ್ಯಾಸ ಮಾಡಿರಬೇಕು. ಅದಕ್ಕೆ ಸಂಬಂಧಿಸಿದಂತೆ ಬಿಇಒ ಅಥವಾ ಡಿಡಿಪಿಐ ಅವರಿಂದ ಸ್ಟಡಿ ಸರ್ಟಿಫಿಕೇಟ್‌ ಪಡೆದುಕೊಂಡಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT