ಸೋಮವಾರ, ಸೆಪ್ಟೆಂಬರ್ 28, 2020
27 °C
‘ಯಾರ ಪರ ಇರಬೇಕು ಎನ್ನುವ ಗೊಂದಲದಲ್ಲಿ ಕಾಂಗ್ರೆಸ್’

ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭಾರತದ ಜನರ ಭಾವನೆಯಾಗಿತ್ತು: ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಹತಾಶಗೊಂಡಿರುವ ಕಾಂಗ್ರೆಸ್ ಯಾರ ಪರ ಇರಬೇಕು ಎನ್ನುವ ಗೊಂದಲದಲ್ಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ‘ನಮ್ಮ ಸರ್ಕಾರ ಬಂದ ಮೇಲೆ ದೇಶದಲ್ಲಿ ಸೌಹಾರ್ದತೆ ನೆಲೆಸಿದೆ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಮೇಲೂ ಶಾಂತಿಯಿದೆ. ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು  ಇಳಿಕೆಯಾಗಿವೆ. ದೇಶದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವುದು ಅಸಾದುದ್ದೀನ್‌ ಓವೈಸಿ ಮತ್ತು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದರು.

‘ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್‌ ದೇಶದ ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಈ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಈಗಲೂ ಗೊಂದಲವಿದೆ. ರಾಮಮಂದಿರ ಹೋರಾಟದ ಪರವಿದ್ದರೆ ಅಲ್ಪ ಸಂಖ್ಯಾತರ ಮತಗಳು ಕಳೆದು ಹೋಗುವ ಭಯ; ಅಲ್ಪಸಂಖ್ಯಾತರ ಪರವಿದ್ದರೆ ಹಿಂದೂಗಳ ಮತಗಳು ಕಳೆದುಹೋಗುವ ಭಯದಲ್ಲಿದೆ. ಕೇವಲ ಮತ ಬ್ಯಾಂಕ್‌ ಗಳಿಸಿಕೊಳ್ಳುವತ್ತ ಮಾತ್ರ ಕಾಂಗ್ರೆಸ್‌ ಯೋಚಿಸುತ್ತಿದೆ’ ಎಂದು ದೂರಿದರು.

ರಾಮಮಂದಿರ ಬಳಿಕ ಮಥುರಾ ಮತ್ತು ಕಾಶಿಯಲ್ಲೂ ಮಸೀದಿಗಳನ್ನು ತೆರವುಗೊಳಿಸಿ ಮಂದಿರಗಳನ್ನು ಕಟ್ಟಬೇಕು ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವುದು ದೇಶದ ಜನರ ಮತ್ತು ಬಿಜೆಪಿಯ ಸಂಕಲ್ಪವಾಗಿತ್ತು. ಈಗ ಅದನ್ನು ಮಾಡಿದ್ದೇವೆ. ಬೇರೆ ವಿಷಯದ ಬಗ್ಗೆ ಮಾತನಾಡುವುದಿಲ್ಲ’ ಎಂದು.

ಮುಂದಿನ ಚುನಾವಣೆಗೆ ಮಥುರಾ ಹಾಗೂ ಕಾಶಿಯಲ್ಲಿ ಮಂದಿರ ನಿರ್ಮಾಣ ನಿಮ್ಮ ಪಕ್ಷದ ಅಜೆಂಡಾ ಆಗಬಹುದೇ ಎನ್ನುವ ಮರುಪ್ರಶ್ನೆಗೆ ‘ಚುನಾವಣೆ ಇನ್ನೂ ದೂರವಿದೆ’ ಎಂದರು.

ಪ್ರಸ್ತಾವ ಸಲ್ಲಿಸಲಿ: ಮಹದಾಯಿ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಹಣ ಮೀಸಲಿಟ್ಟಿದೆ. ಇದಕ್ಕೂ ಮೊದಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದ್ದು, ರಾಜ್ಯ ಈ ಕುರಿತು ಕೇಂದ್ರಕ್ಕೆ ವಿವರವಾದ ಪ್ರಸ್ತಾವ ಸಲ್ಲಿಸಬೇಕು. ಆದಷ್ಟು ಬೇಗನೆ ರಾಜ್ಯದಿಂದ ಪ್ರಸ್ತಾವ ಬಂದರೆ ಕೇಂದ್ರದಿಂದ ಆಗಬೇಕಾದ ಕೆಲಸ ಮಾಡಿಸಿಕೊಡುವುದಾಗಿ ಹೇಳಿದ್ದೇನೆ ಎಂದು ಜೋಶಿ ತಿಳಿಸಿದರು.

ರಾಜ್ಯ ರಾಜಕಾರಣ ಬರುವುದಿಲ್ಲ
ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ ಜೋಶಿ, ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ತಮ್ಮ ಅವಧಿ ಪೂರ್ಣಗೊಳಿಸುತ್ತಾರೆ. ಯಾವುದೇ ಅನುಮಾನ ಬೇಡ ಎಂದರು.

ಕೋವಿಡ್‌ಗೆ ಒಳಗಾಗಿರುವ ಅಮಿತ್‌ ಶಾ, ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಕೇಳಲಾದ ಪ್ರಶ್ನಗೆ ‘ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದೆ. ಅಮಿತ್‌ ಶಾ ಸರ್ಕಾರಿ ಆಸ್ಪತ್ರೆಗೆ ದಾಖಲಾದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಅದು ಸೂಕ್ತವೂ ಅಲ್ಲ’ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು