ಹುಬ್ಬಳ್ಳಿ: 'ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವರ್ತನೆಯಿಂದ ಕೆಲವು ಮುಸ್ಲಿಂ ಗೂಂಡಾಗಳು ಸಂಘರ್ಷ ಉಂಟು ಮಾಡುವ ಹೇಳಿಕೆ ನೀಡುತ್ತಿದ್ದು, ತಕ್ಷಣ ಅವರನ್ನು ಒದ್ದು ಒಳಗೆ ಹಾಕಬೇಕು' ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಮುಸ್ಲಿಂ ಸಂಘಟನೆಯವರು ಹಿಂದೂಗಳಿಗೆ ತಾಕತ್ತಿದ್ದರೆ ಬಿ.ಸಿ. ರಸ್ತೆ ಬಳಿ ಬನ್ನಿ ಎಂದು ಸವಾಲು ಹಾಕಿದ್ದಾರೆ. ಆ ಬಿ.ಸಿ. ರಸ್ತೆ ಅಪಘಾನಿಸ್ಥಾನ ಅಥವಾ ಪಾಕಿಸ್ತಾನದಲ್ಲಿ ಇದೆಯಾ? ಭಾರತ ನೆಮ್ಮದಿಯಿಂದ ಇದೆ. ಇಂಥ ಹೇಳಿಕೆ ನೀಡಿ ಸಂಘರ್ಷಕ್ಕೆ ಕರೆಯುತ್ತಿರುವುದು ಸರಿಯಲ್ಲ. ಈಗಾಗಲೇ ಸರ್ಕಾರ ಅವರನ್ನು ಜೈಲಿಗೆ ಹಾಕಬೇಕಿತ್ತು. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರದ ಮನಸ್ಥಿತಿಯೇ ಕಾರಣ' ಎಂದು ಕಿಡಿಕಾರಿದರು.
'ಬಿ.ಸಿ. ರಸ್ತೆ ಅಷ್ಟೇ ಅಲ್ಲ, ನಿಮ್ಮ ಮನೆಯೊಳಗೆ ಬರುತ್ತೇವೆ. ಈ ರೀತಿ ದರ್ಪ, ಅಹಂಕಾರ ಇನ್ನುಮುಂದೆ ನಡೆಯುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೇ ಎನ್ನುವ ಕಾರಣಕ್ಕೆ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ. ಹಿಂದೂಗಳು ಜೀವಂತವಾಗಿದ್ದು, ಸರಿಯಾಗಿ ಉತ್ತರ ಕೊಡಲು ಸಿದ್ಧರಿದ್ದಾರೆ' ಎಂದು ಎಚ್ಚರಿಕೆ ನೀಡಿದರು.