ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿ–ಪೇಯ್ಡ್ ಆಟೊ ಸೇವೆ ಸ್ಥಗಿತ ಸಾಧ್ಯತೆ?

ಸೇವೆಗೆ ಸಹಕಾರ ನೀಡದ ಪೊಲೀಸ್, ಆರ್‌ಟಿಒ, ಆಟೊ ಚಾಲಕರು: ರೈಲ್ವೆ ಡಿಜಿಎಂಗೆ ಪಾಟ್ಸ್ ಪತ್ರ
Last Updated 24 ಜನವರಿ 2023, 12:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದ ಮುಂಭಾಗದಲ್ಲಿ ಒಂದೂವರೆ ತಿಂಗಳ ಹಿಂದಷ್ಟೇ ಕಾರ್ಯಾರಂಭವಾಗಿದ್ದ ಪ್ರಿ–ಪೇಯ್ಡ್ ಆಟೊ ಸೇವೆಯು ಪೊಲೀಸ್‌ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ರೈಲ್ವೆ ಪೊಲೀಸ್‌ ಮತ್ತು ಆಟೊ ಚಾಲಕರ ಸಹಕಾರವಿಲ್ಲದೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಈ ಕುರಿತು ಪ್ರಿ–ಪೇಯ್ಡ್ ಆಟೊ ಆ್ಯಂಡ್‌ ಟ್ಯಾಕ್ಸಿ ಸರ್ವಿಸ್‌ (ಪಾಟ್ಸ್‌) ಸಂಸ್ಥೆ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಸೋಮವಾರ ಪತ್ರ ಬರೆದಿದ್ದು, ಜ. 31ರೊಳಗೆ ಸೇವೆ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ಬೆಂಗಳೂರು ಮೂಲದ ಪಾಟ್ಸ್‌ ಸಂಸ್ಥೆ ಡಿ. 3ರಂದು ರೈಲ್ವೆ ನಿಲ್ದಾಣದ ಎದುರು 24X7 ಪ್ರಿ–ಪೇಯ್ಡ್ ಸೇವೆ ಆರಂಭಿಸಿತ್ತು. ಸಂಸ್ಥೆಯಡಿ ನೋಂದಾಯಿಸಿಕೊಳ್ಳದ ಆಟೊ ಚಾಲಕರು, ರೈಲು ಇಳಿದ ಪ್ರಯಾಣಿಕರು ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಮನಸೋ ಇಚ್ಛೆ ಬಾಡಿಗೆ ದರದಲ್ಲಿ ಕರೆದೊಯ್ಯುತ್ತಿದ್ದರು. ಇದನ್ನು ತಪ್ಪಿಸುವಂತೆ ಸಂಸ್ಥೆಯು ಪೊಲೀಸ್‌ ಮತ್ತು ಸಾರಿಗೆ ಇಲಾಖೆಗೆ ನಾಲ್ಕೈದು ಬಾರಿ ವಿನಂತಿಸಿಕೊಂಡಿದೆ. ಇಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸದಿದ್ದರಿಂದ ಸೇವೆ
ಯಿಂದ ಹಿಂದೆ ಸರಿಯುವ ತೀರ್ಮಾನಕ್ಕೆ ಸಂಸ್ಥೆ ಬಂದಿದೆ.

‘ಪ್ರತಿದಿನ ಎರಡು ಸಾವಿರದಷ್ಟು ಪ್ರಯಾಣಿಕರು ರೈಲು ನಿಲ್ದಾಣದಿಂದ ನಗರದ ವಿವಿಧೆಡೆಗೆ ಪ್ರಯಾಣಿಸುತ್ತಾರೆ. ಕನಿಷ್ಠ 200 ಮಂದಿ ಪ್ರಿ–ಪೇಯ್ಡ್ ಆಟೊದಲ್ಲಿ ಸಂಚರಿಸಿದರೂ ಖರ್ಚು ವೆಚ್ಚ ಸರಿದೂಗಿಸಿಕೊಳ್ಳಬಹುದು. ಕೌಂಟರ್‌ನಲ್ಲಿ 2022ರ ಡಿ. 3ರಿಂದ 2023ರ ಜ. 22ರವರೆಗೆ 567 ಟಿಕೆಟ್‌ಗಳು ಮಾತ್ರ ಮಾರಾಟವಾಗಿವೆ. ಅದರಿಂದ ಸೇವಾ ಶುಲ್ಕ ಕೇವಲ ₹1,701 ಸಂಗ್ರಹವಾಗಿದೆ. ಮೂವರು ಸಿಬ್ಬಂದಿಗೆ ವೇತನ, ವಿದ್ಯುತ್‌–ಇಂಟರ್‌ನೆಟ್‌ ಶುಲ್ಕ ಹಾಗೂ ಇತರೆ ವೆಚ್ಚ ಭರಿಸಲು ಸಾಧ್ಯವಾಗದೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ’ ಎಂದು ಹುಬ್ಬಳ್ಳಿ ಪಾಟ್ಸ್‌ ಅಧ್ಯಕ್ಷ ಎನ್‌.ಎನ್‌. ಇನಾಮದಾರ್‌ ‘ಪ್ರಜಾವಾಣಿ’ಗೆ
ತಿಳಿಸಿದರು.

‘ಮುಂಚೆ ಸಂಸ್ಥೆಯಡಿ ನೋಂದಾಯಿಸಿಕೊಳ್ಳಲು 50ಕ್ಕೂ ಹೆಚ್ಚು ಆಟೊ ಚಾಲಕರು ಮುಂದೆ ಬಂದು, ದಾಖಲೆಗಳನ್ನು ನೀಡಿದ್ದರು. ಇದೀಗ ನಿರುತ್ಸಾಹ ತೋರಿದ್ದು, ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ದರದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರು ಹೇಳಿದ ಸ್ಥಳಕ್ಕೆ ಕರೆದೊಯ್ಯುತ್ತೇವೆ. ಹೆಚ್ಚುವರಿಯಾಗಿ ಹಣ ವಸೂಲಿ ಮಾಡುವುದಿಲ್ಲ. ನೋಂದಣಿ ಮಾಡಿಕೊಳ್ಳದ ಆಟೊ ಚಾಲಕರು ₹50 ಬಾಡಿಗೆ ದರದಲ್ಲಿ ತಲುಪಬಹುದಾದ ಸ್ಥಳಕ್ಕೆ ₹100ರಿಂದ ₹150 ಪಡೆಯುತ್ತಿದ್ದಾರೆ. ಇದನ್ನು ನಿಯಂತ್ರಿಸುವಂತೆ ಪೊಲೀಸ್‌ ಇಲಾಖೆಗೆ ವಿನಂತಿಸಿದರೂ ಪ್ರಯೋಜನವಾಗಿಲ್ಲ’ ಎಂದರು.

ಮನವಿ ಪತ್ರದಲ್ಲಿ ಏನಿದೆ?

‘ಪ್ರಿ–ಪೇಯ್ಡ್ ಆಟೊ ಸೇವೆ ಜನಪ್ರಿಯಗೊಳಿಸಲು ಸಾಕಷ್ಟು ಪ್ರಯತ್ನಪಟ್ಟರೂ, ಯಾವ ಇಲಾಖೆಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ಎಲ್ಲಾ ಆಟೊಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಶೇ 90ರಷ್ಟು ಚಾಲಕರಲ್ಲಿ ದಾಖಲೆಗಳಿಲ್ಲ. ಅವರೆಲ್ಲರೂ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದಾರೆ. ರಾತ್ರಿ ಚಾಲಕರು ಮದ್ಯ ಸೇವನೆ ಮಾಡಿ ಆಟೊ ಚಾಲನೆ ಮಾಡುವುದರಿಂದ, ಪ್ರಯಾಣಿಕರ ಮೇಲೆ ದೌರ್ಜನ್ಯವಾಗುವ ಸಾಧ್ಯತೆ ಇರುವುದರಿಂದ ರಾತ್ರಿ ಕೌಂಟರ್‌ ಮುಚ್ಚಿದ್ದೇವೆ. ಪ್ರತಿ ತಿಂಗಳು ₹54 ಸಾವಿರ ವೆಚ್ಚವಾಗುತ್ತಿದ್ದು, ಪ್ರಸ್ತುತ ವರ್ಷ ಜ. 22ರವರೆಗೆ ಸಂಗ್ರಹವಾದ ಸೇವಾ ಶುಲ್ಕ ಕೇವಲ ₹432 ಮಾತ್ರ. ಸಾರ್ವಜನಿಕರಿಂದ ಪೊಲೀಸ್‌ ಸಹಾಯವಾಣಿಗೆ ಸಾಕಷ್ಟು ದೂರುಗಳು ಹೋಗಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲಾ ಕಾರಣಗಳಿಂದ ಸೇವೆ ಸ್ಥಗಿತಗೊಳಿಸುತ್ತಿದ್ದೇವೆ’ ಎಂದು ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಬರೆದಿರುವ ಪತ್ರದಲ್ಲಿ ಪಾಟ್ಸ್ ತಿಳಿಸಿದೆ.

ಪ್ರಿ–ಪೇಯ್ಡ್ ದರ ಪಟ್ಟಿ

* ಸೇವಾ ಶುಲ್ಕ ಪ್ರತಿ ಬಾಡಿಗೆಗೆ ₹3

* ಕನಿಷ್ಠ ಬಾಡಿಗೆ ದರ 1.60 ಕಿ.ಮೀ.ಗೆ ₹30

* ನಂತರದ ಪ್ರತಿ ಒಂದು ಕಿ.ಮೀ.ಗೆ ₹15

* ಕಾಯುವ ದರ ಮೊದಲ 5 ನಿಮಿಷ ಉಚಿತ; ನಂತರ ಪ್ರತಿ 15 ನಿಮಿಷಕ್ಕೆ ₹5

* ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT