ಶುಕ್ರವಾರ, ಮೇ 7, 2021
20 °C
ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಕುಗ್ಗುತ್ತಲೇ ಇದೆ ಮಾವು ಬೆಳೆಯುವ ಕ್ಷೇತ್ರ

ಅಕಾಲಿಕ ಮಳೆ; ಮಾವು ಬೆಳೆಗೆ ಕಳೆ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ವರ್ಷದ ಆರಂಭದಲ್ಲಿ ಸುರಿದ ಅಕಾಲಿಕ ಮಳೆ, ಗಾಳಿ, ಮಂಜಿನಿಂದ ಮಾವಿನ ಹೂವು ಮುರುಟಿ ಇಳುವರಿಗೆ ಕೊಂಚ ಪೆಟ್ಟುಕೊಟ್ಟರೂ, ಅಕಾಲಿಕ ಮಳೆ ಮಾವಿನ ಹಣ್ಣಿನ ಗಾತ್ರ ಹೆಚ್ಚಲು ವರದಾನವಾಗಿದೆ. ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಮಾವು ಬೆಳೆಗಾರರಿಗೆ ಖುಷಿಕೊಟ್ಟಿದೆ.

‘ಮಳೆಯ ಜೊತೆ ಗಾಳಿ ಹಾಗೂ ಆಲಿಕಲ್ಲು ಬಿ‌ದ್ದರೆ ಮಾತ್ರ ಕಾಯಿಗೆ ಹಾನಿಯಾಗಲಿದೆ. ಮಳೆ ಮಾತ್ರ ಸುರಿದಲ್ಲಿ ಮಾವಿನ ಮರ ಹಾಗೂ ಕಾಯಿಗೆ ಬಹಳ ಒಳ್ಳೆಯದು’ ಎನ್ನುತ್ತಾರೆ ಛಬ್ಬಿ ಪಾಳೆಯ ಮಾವು ಬೆಳೆಗಾರ ರಾಜು ಹನುಮಕ್ಕನವರ.

ಮಾವು ಹೂಬಿಟ್ಟು, ಮಿಡಿಯಾಗುವ ಹಂತದಲ್ಲಿ ಸುರಿದ ಮಳೆ, ಮಂಜು, ಗಾಳಿಯ ಹೊಡೆತಕ್ಕೆ ನಲುಗಿದ ಮಾವಿನ ತೋಪಿನಲ್ಲಿ ಶೇ60ರಷ್ಟು ಮಾತ್ರ ಹೂ ಹಿಡಿದಿದ್ದು, ನಿರೀಕ್ಷೆಯಷ್ಟು ಫಸಲು ಬರದಿರಬಹುದು. ಆದರೆ, ಇತ್ತೀಚೆಗೆ ಸುರಿದ ಮಳೆ ಹೆಚ್ಚು ಉಪಯೋಗವಾಗಲಿದೆ. ಇರುವಷ್ಟು ಕಾಯಿ ಸಮೃದ್ಧವಾಗಿ ಬೆಳೆಯಲಿವೆ. ಮಳೆ ನೀರಿನಿಂದಾಗಿ ಮಾವಿನ ಬೇರು ಇನ್ನಷ್ಟು ಆಳಕ್ಕಿಳಿಲಿವೆ. ಇದರಿಂದ ಕಾಯಿ ಇನ್ನಷ್ಟು ಬಲಿತು, ಹಣ್ಣಿನ ಗಾತ್ರವೂ ಹಿಗ್ಗಲಿದೆ ಎನ್ನುತ್ತಾರೆ ಅವರು.

‘ವರ್ಷದ ಆರಂಭದಲ್ಲಿ ಸುರಿದ ಅಕಾಲಿಕ ಮಳೆ, ಮಂಜಿನಿಂದ ಮಾವಿನ ಕಾಯಿ ಬಲಿಯಲು ವಿಳಂಬವಾಯಿತು. ಮಂಜು ಸುರಿದ್ದಿದ್ದರಿಂದ ಮಾವಿನ ಹೂವು ಮುರುಟಿ ಕಾಯಿ ಹಿಡಿಯಲಿಲ್ಲ. ಬೂದಿ ರೋಗವು ಇಳುವರಿಗೆ ಹೊಡೆತ ನೀಡಿದೆ. ಈ ಎಲ್ಲ ಕಾರಣಗಳಿಂದ ಮಾವಿನ ಫಸಲು ಮಾರುಕಟ್ಟೆಗೆ ಬರಲು ಕೊಂಚ ತಡವಾಗಬಹುದು’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಹುಬ್ಬಳ್ಳಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ವಿಜಯಕುಮಾರ ರ‍್ಯಾಗಿ.

‘ರೈತರು ಮಾವಿನ ಮರಗಳನ್ನು ತೆಗೆದು ಪೇರಲ ಮತ್ತು ಕಬ್ಬು ಬೆಳೆಯತ್ತ ಮುಖ ಮಾಡಿರುವುದರಿಂದ ಏಳೆಂಟು ವರ್ಷಗಳಲ್ಲಿ ಮಾವು ಬೆಳೆಯುವ ಪ್ರದೇಶ ಕಡಿಮೆಯಾಗುತ್ತ ಬಂದಿದೆ. ಪ್ರತಿವರ್ಷ ಸರಾಸರಿ 40–50 ಹೆಕ್ಟೇರ್‌ ಪ್ರದೇಶ ಕಡಿಮೆಯಾಗುತ್ತಿದೆ’ ಎಂದು ಅವರು ಹೇಳಿದರು.

ಧಾರವಾಡ ಜಿಲ್ಲೆಯಲ್ಲಿ 2012ರಲ್ಲಿ 9,610 ಹೆಕ್ಟೇರ್, 2014ರಲ್ಲಿ 9,035 ಹೆಕ್ಟೇರ್, 2019–20ರಲ್ಲಿ 8,445 ಹೆಕ್ಟೇರ್‌ ಆಗಿದೆ. ಹೀಗೆ ಮುಂದುವರಿದಲ್ಲಿ ಮಾವಿನ ಬೆಳೆಯ ಪ್ರದೇಶ ಇನ್ನಷ್ಟು ಕಡಿಮೆಯಾಗಲಿದೆ ಎನ್ನುತ್ತಾರೆ ಅವರು.

ಧಾರವಾಡ ಜಿಲ್ಲೆಯಲ್ಲಿ ಆಪೂಸ್‌ ಮಾವಿನ ತಳಿಯೇ ಹೆಚ್ಚಾಗಿದ್ದು, ಇತ್ತೀಚೆಗೆ ಕೇಸರ್‌ ಮತ್ತು ಮಲ್ಲಿಕಾ ತಳಿಯ ಮಾವನ್ನೂ ಬೆಳೆಯಲಾಗುತ್ತಿದೆ. ಮಾವು ಬೆಳೆಯನ್ನು ಪ್ರೋತ್ಸಾಹಿಸಲು ಮಾವು ಬೆಳೆಗಾರರಿಗೆ ಮೂರು ವರ್ಷದವರೆಗೆ ತೋಟ ನಿರ್ವಹಣೆಗೆ ₹ 10ಸಾವಿರ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ.

ಮಾವಿನ ಮಾರುಕಟ್ಟೆ ವಿಚಾರದಲ್ಲಿ ಒಂದಡಿ ಮುಂದಿಟ್ಟಿರುವ ಮಾವು ಬೆಳೆಗಾರರು ಈ ಬಾರಿ ಮಧ್ಯವರ್ತಿಗಳಿಗೆ ಗುತ್ತಿಗೆ ನೀಡುವ ಬದಲು ತಮ್ಮದೇ ಆದ ‘ಉಳುವಾ ಯೋಗಿ ತೋಟಗಾರಿಕಾ ಬೆಳೆಗಾರರ ಉತ್ಪಾದನಾ ಸಂಘ’ದ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು