ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ಧತೆಗೆ ಸಿಇಒ ಸೂಚನೆ

Last Updated 28 ಜೂನ್ 2021, 12:36 IST
ಅಕ್ಷರ ಗಾತ್ರ

ಧಾರವಾಡ: ‘ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯು ಜುಲೈ 3ನೇ ವಾರದಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದ್ದು, ಜಿಲ್ಲೆಯಲ್ಲಿ ಸುರಕ್ಷಿತವಾಗಿ ಮತ್ತು ವ್ಯವಸ್ಥಿತವಾಗ ಪರೀಕ್ಷೆ ನಡೆಸಲು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸುಶೀಲಾ ಸೂಚಿಸಿದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆ ಕುರಿತು ಸೋಮವಾರ ವಿಡಿಯೊ ಸಂವಾದ ನಡೆಸಿದ ಬಳಿಕ ಅವರು ಶಿಕ್ಷಣ ಇಲಾಖೆ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

‘ಪರೀಕ್ಷಾ ಕರ್ತವ್ಯ ನಿರ್ವಹಿಸುವ ಎಲ್ಲ ಶಿಕ್ಷಕರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಲಸಿಕೆ ನೀಡಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷಿಸಬೇಕು. ಅಗತ್ಯವಿದ್ದಲ್ಲಿ ಪಲ್ಸ್ ಆಕ್ಸಿಮೀಟರ್ ಸಹ ಬಳಸಬೇಕು’ ಎಂದರು.

‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಕುರಿತು ಸರ್ಕಾರ ನೀಡಿರುವ ಎಸ್‌ಒಪಿಯಲ್ಲಿ ತಿಳಿಸಿರುವ ಮಾರ್ಗಸೂಚಿಗಳನ್ನು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿಕೊಂಡು ಯಶಸ್ವಿಗೊಳಿಸಬೇಕು. ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸಿಯೇ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಮತ್ತು ಪರೀಕ್ಷಾ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಶಿಕ್ಷಕರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಎನ್-95 ಮಾಸ್ಕ್ ಧರಿಸಬೇಕು. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಮಾಸ್ಕ್ ಮರೆತು ಬಂದಿದ್ದರೆ ಅವರಿಗೆ ಇಲಾಖೆಯಿಂದ ಮಾಸ್ಕ್ ನೀಡಬೇಕು. ಪರೀಕ್ಷೆ ಮೊದಲು ಹಾಗೂ ನಂತರ ಕೊಠಡಿಯನ್ನು ಸ್ಯಾನಿಟೈಸ್ ಮಾಡಬೇಕು’ ಅವರು ತಿಳಿಸಿದರು.

‘ಜಿಲ್ಲೆಯಲ್ಲಿ ಈಗಾಗಲೇ ಕಲಿಕಾ ಸೇತು ಶೀರ್ಷಿಕೆಯಡಿ ಎರಡು ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲಾಗಿದೆ. ಜುಲೈ 2 ಹಾಗೂ 5ರಂದು ಕಲಿಕಾಸೇತು–3 ಹೆಸರಿನಡಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಪರೀಕ್ಷಾ ಮಂಡಳಿ ಮಾದರಿಯಲ್ಲೇ ನಡೆಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಪ್ರೊಬೇಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ ಇದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರ ವಿದ್ಯಾರ್ಥಿಗಳ ಸಂಖ್ಯೆ

ತಾಲ್ಲೂಕು;ಪ್ರೌಢಶಾಲೆ;ವಿದ್ಯಾರ್ಥಿಗಳ ಸಂಖ್ಯೆ;ಪರೀಕ್ಷಾ ಕೇಂದ್ರಗಳು

ಹುಬ್ಬಳ್ಳಿ ಶಹರ;121;8768;39

ಧಾರವಾಡ ಶಹರ;90;5771;28

ಧಾರವಾಡ ಗ್ರಮೀಣ;43;3800;22

ಹುಬ್ಬಳ್ಳಿ ಗ್ರಾಮೀಣ;52;3802;23

ಕಲಘಟಗಿ;34;2650;16

ಕುಂದಗೋಳ;37;2300;15

ನವಲಗುಂದ;39;2365;18

ಒಟ್ಟು;416;29,456;161

***

ಪರೀಕ್ಷಾ ಸಹಾಯವಾಣಿ ಆರಂಭ

ಜಿಲ್ಲಾ ಹಂತದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಹಾಯವಾಣಿ (1800 425 6758) ಆರಂಭಿಸಲಾಗಿದೆ. ಭಾನುವಾರ ಹೊರತುಪಡಿಸಿ ಪರೀಕ್ಷೆ ಹಿಂದಿನ ದಿನದವರೆಗೆ ಪ್ರತಿದಿನ ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಲಿದೆ.ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕ, ಭಯ ಮತ್ತು ಒತ್ತಡಗಳಿಗೆ ಒಳಗಾಗದೇ ಬರೆಯಲು ಮುಕ್ತ ವಾತಾವರಣ ನಿರ್ಮಿಸಲು ಸಹಾಯವಾಣಿ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.

ಪ್ರತಿ ಕೊಠಡಿಯಲ್ಲಿ 12 ವಿದ್ಯಾರ್ಥಿಗಳು

‘ಪ್ರತಿ ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಐಸೋಲೆಷನ್ ಕೊಠಡಿ ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕುಡಿಯುವ ನೀರನ್ನು ತಾವೇ ತರಲು ನಿರ್ದೇಶನ ನೀಡಲಾಗಿದೆ. ಇಲಾಖೆಯ ನಿಯಮಾನುಸಾರ ವಿದ್ಯಾರ್ಥಿಗಳಿಗೆ ತಮಗೆ ಹತ್ತಿರವಿರುವ ಬೇರೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ’ ಸಿಇಒ ತಿಳಿಸಿದರು.

ಮುಖ್ಯ ಪರೀಕ್ಷೆ ಎರಡೇ ದಿನ

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಎರಡು ದಿನ ಮಾತ್ರ ನಡೆಯಲಿದೆ. ಗಣಿತ, ವಿಜ್ಞಾನ ಮತ್ತು ಸಮಾಜ ವಿಷಯಗಳನ್ನು ಒಳಗೊಂಡು ಪತ್ರಿಕೆ–1 ಹಾಗೂ ಪ್ರಥಮ, ದ್ವಿತೀಯ, ತೃತೀಯ ಭಾಷೆಯನ್ನು ಒಳಗೊಂಡ ಪತ್ರಿಕೆ–2 ಇರುತ್ತವೆ. ಪ್ರತಿ ಪತ್ರಿಕೆಯು 120 ಅಂಕಗಳನ್ನು ಒಳಗೊಂಡಿರುತ್ತವೆ. ಎಲ್ಲಾ ಪ್ರಶ್ನೆಗಳೂ ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ.

ಸಂಪೂರ್ಣ ಬಹು ಆಯ್ಕೆ ಪ್ರಶ್ನೆಗಳಿಂದ ಕೂಡಿದೆ. ಪ್ರತಿ ವಿಷಯಕ್ಕೆ 40 ಅಂಕಗಳಿದ್ದು, ಒಂದು ಗಂಟೆಯ ಸಮಯ ನೀಡಲಾಗಿದೆ. 40 ಅಂಕಗಳನ್ನು 80 ಅಂಕಗಳಿಗೆ ಪರಿವರ್ತಿಸಿ ಆತಂರಿಕ ಮೌಲ್ಯಮಾಪನ 20 ಅಂಕಗಳನ್ನು ಸೇರಿಸಿ ಒಟ್ಟು 625 ಅಂಕಗಳಿಗೆ ಮೌಲ್ಯಮಾಪನ ಮಾಡಲಾಗುತ್ತದೆ. 10ನೇ ತರಗತಿಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆಎ+, ಎ, ಬಿ, ಸಿ ಶ್ರೇಣಿ ಮಾದರಿಯಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. 90ರಿಂದ 100 ಅಂಕ ಪಡೆದ ವಿದ್ಯಾರ್ಥಿಗಳಿಗೆಎ+ ಶ್ರೇಣಿ, 80ರಿಂದ 89 ಅಂಕ ಪಡೆದ ವಿದ್ಯಾರ್ಥಿಗಳಿಗೆ ಎ ಶ್ರೇಣಿ, 60ರಂದ 79 ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಿ ಶ್ರೇಣಿ ಮತ್ತು 35 ರಿಂದ 59 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಿ ಶ್ರೇಣಿ ನೀಡಲಾಗುತ್ತದೆ ಎಂದ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT