ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ. 26ರಂದು ರಾಷ್ಟ್ರಪತಿಗೆ ಪೌರ ಸಮ್ಮಾನ: ಕಾರ್ಯಕ್ರಮಕ್ಕೆ ಭರದ ಸಿದ್ಧತೆ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಗೋಪಾಕೃಷ್ಣ ಬಿ. ಪರಿಶೀಲನೆ
Last Updated 21 ಸೆಪ್ಟೆಂಬರ್ 2022, 5:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿರುವ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣ ಕಾರ್ಯವು ಇಲ್ಲಿನ ದೇಶಪಾಂಡೆ ನಗರದ ಜಿಮ್ಖಾನ್ ಮೈದಾನದಲ್ಲಿ ಭರದಿಂದ ಸಾಗಿದೆ. ರಾಷ್ಟ್ರಪತಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಹು–ಧಾ ಮಹಾನಗರ ಪಾಲಿಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಸೆ. 26ರಂದು ರಾಷ್ಟ್ರಪತಿ ಅವರಿಗೆ ಪಾಲಿಕೆ ವತಿಯಿಂದ ಪೌರ ಸಮ್ಮಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೈದಾನದಲ್ಲಿ ಬೃಹತ್‌ ಪೆಂಡಾಲ್‌ ಹಾಗೂ 80x30 ಅಡಿ ಉದ್ದದ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ. 50 ಮಂದಿ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿರುವ 500 ಮಂದಿ ಗಣ್ಯರಿಗೆ ಹಾಗೂ 2,500 ಮಂದಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. 50 ಕ್ಕೂ ಹೆಚ್ಚು ಕಾರ್ಮಿಕರು ಪೆಂಡಾಲ್‌ ಹಾಗೂ ವೇದಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಬಿ. ಅಧಿಕಾರಿಗಳ ಜೊತೆ ಮೈದಾನಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದರು. ನಂತರ ಅಲ್ಲಿಯೇ ಅಧಿಕಾರಿಗಳ ಜೊತೆ ಸಭೆ ನಡೆಸಿ, ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಿ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದರು. ರಾಷ್ಟ್ರಪತಿ ಸಂಚರಿಸುವ ಗೋಕುಲ ರಸ್ತೆ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗಿನ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರಸ್ತೆ ವಿಭಜಕಗಳನ್ನು ಶುಚಿಯಾಗಿಟ್ಟು, ಎಲ್ಲಿಯೂ ದೂಳು ಏಳದಂತೆ ನೋಡಿಕೊಳ್ಳಬೇಕು. ತೆಗ್ಗು–ಗುಂಡಿಗಳನ್ನು ಮುಚ್ಚಿ ರಸ್ತೆ ಸರಿಪಡಿಸಬೇಕು ಎಂದು ಸೂಚಿಸಿದರು. ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ಕಿಶನ್ ಬೆಳಗಾವಿ, ಅಧೀಕ್ಷಕ ಎಂಜಿನಿಯರ್‌ ಇ. ತಿಮ್ಮಪ್ಪ ಇದ್ದರು.

‘ಗೋಕುಲ ರಸ್ತೆಯ ಹೋಟೆಲ್ ಫರ್ನ್ ಮತ್ತು ಸವಾಯಿ ಗಂಧರ್ವ ಸಭಾಭವನದ ಬಳಿಯ ನಾಲಾದಲ್ಲಿನ ಹೂಳೆತ್ತಿ, ಅದರ ಮೇಲೆ ಫೆನ್ಸಿಂಗ್ ಅಳವಡಿಸಲು ಪಾಲಿಕೆ ನಿರ್ಧರಿಸಲಾಗಿದೆ. ನಗರದ ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ, ರಾಷ್ಟ್ರಪತಿ ಅವರನ್ನು ಸ್ವಾಗತಿಸುವ ಹೋರ್ಡಿಂಗ್ಸ್‌ ಮತ್ತು ಬ್ಯಾನರ್‌ಗಳನ್ನು ಅಳವಡಿಸಲಾಗುವುದು. ಮೈದಾನದಲ್ಲಿ ವೇದಿಕೆ ಸಜ್ಜುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಬಿಸಿಲು ಮತ್ತು ಮಳೆ ರಕ್ಷಣೆಗಾಗಿ ಜರ್ಮನ್ ಟೆಂಟ್ ಶಾಮಿಯಾನ್‌ ಬಳಕೆ ಮಾಡಲಾಗುತ್ತಿದೆ’ ಎಂದು ಆಯುಕ್ತ ಗೋಪಾಲಕೃಷ್ಣ ಬಿ. ತಿಳಿಸಿದರು.

‘ಸವಾಯಿ ಗಂಧರ್ವ ಸಭಾಭವನದ ಬಳಿಯ ಮೈದಾನದಲ್ಲಿನ ಬಲಗಡೆಯ ಗೇಟ್‌ನಿಂದ ಸಾರ್ವಜನಿಕರಿಗೆ ಹಾಗೂ ಗುಜರಾತ್ ಭವನ ಬಳಿಯ ಮುಖ್ಯ ದ್ವಾರದಿಂದ ಜನಪ್ರತಿನಿಧಿಗಳಿಗೆ, ಗಣ್ಯರಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಸವಾಯಿ ಗಂಧರ್ವ ಸಭಾ ಭವನದ ಹೊರಗಡೆಯ ವಾಹನ ನಿಲುಗಡೆ ಸ್ಥಳದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗಿದೆ’ ಎಂದರು.

‘ವೇದಿಕೆ ಕಾರ್ಯಕ್ರಮ 30–40 ನಿಮಿಷ’: ‘ಎಲ್ಲ ಮಹಾನಗರ ಪಾಲಿಕೆಯ ಮೇಯರ್‌ಗಳನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ‘ರಾಷ್ಟ್ರಪತಿ ಅವರೊಂದಿಗೆ ಸಮೂಹ ಚಿತ್ರ’ ಎನ್ನುವ ಯೋಜನೆ ಮಾಡಿಕೊಳ್ಳುತ್ತಿದ್ದು, ಅದರಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇರಲಿದ್ದಾರೆ. 30 ರಿಂದ 40 ನಿಮಿಷದ ಸಭಾ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರಪತಿ ಭವನದಿಂದ ಬರುವ ಎಲ್ಲ ಆದೇಶಗಳನ್ನು ಹಾಗೂ ಶಿಷ್ಟಾಚಾರ ಪಾಲಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲಿದ್ದೇವೆ’ ಎಂದು ಆಯುಕ್ತ ಗೋಪಾಲಕೃಷ್ಣ ಬಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT