ಧಾರವಾಡ: ನೂತನ ಪಿಂಚಣಿ ಪದ್ಧತಿ ರದ್ದಗೊಳಿಸಬೇಕು ಎಂಬುದು ಸಹಿತ ಶಿಕ್ಷಕರು, ಶಿಕ್ಷಣ ಕ್ಷೇತ್ರದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಖಲ ಭಾರತೀಯ ಪ್ರಾಥಮಿಕ ಶಿಕ್ಷಕರ ಫೆಡರೇಷನ್ (ಎಐಪಿಟಿಎಫ್) ನಡೆಸುತ್ತಿರುವ ‘ಭಾರತ ಯಾತ್ರೆ’ಯು ಧಾರವಾಡ ತಲುಪಿದೆ ಎಂದು ಫೆಡರೇಷನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದಿಂದ ಆರಂಭಗೊಂಡ ಭಾರತ ಯಾತ್ರೆ, ಕೇರಳ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳನ್ನು ಹಾದು ಕರ್ನಾಟಕದ ಬೀದರ ಜಿಲ್ಲೆಯ ಹುಮನಾಬಾದ್ ಮಾರ್ಗವಾಗಿ ಧಾರವಾಡ ತಲುಪಿದೆ. ಗದಗ, ಹಾವೇರಿ, ಕಾರವಾರ ಮೂಲಕ ಗೋವಾ, ಮಹಾರಾಷ್ಟ್ರ ಮೂಲಕ ಹಾದು ಅ.4ಕ್ಕೆ ದೆಹಲಿ ತಲುಪಲಿದೆ ಎಂದು ಮಾಹಿತಿ ನೀಡಿದರು.
ಈ ಯಾತ್ರೆಗೆ ಎಲ್ಲ ಕಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅ.5 ರಂದು ದೆಹಲಿ ರಾಮಲೀಲಾ ಮೈದಾನದಲ್ಲಿ ಸಮಾವೇಶದ ನಡೆಯಲಿದ್ದು, ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ನೂತನ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದುಗೊಳಿಸಿ ಹಳೆಯ ಪಿಂಚಣಿ ಮರುಜಾರಿಗೊಳಿಸಬೇಕು, ನೂತನ ಶಿಕ್ಷಣ ನೀತಿಯಲ್ಲಿನ (ಎನ್‌ಇಪಿ) ಲೋಪಗಳನ್ನು ಸರಿಪಡಿಸಬೇಕು, ಅತಿಥಿ ಶಿಕ್ಷಕರ ಬದಲು ಕಾಯಂ ಶಿಕ್ಷಕರ ನೇಮಕ ಮಾಡಬೇಕು, ಏಕರೂಪ ವೇತನ ಪದ್ಧತಿ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಛತ್ತೀಸ್‌ಗಡ, ಪಂಜಾಬ್ ರಾಜ್ಯದಲ್ಲಿ ಎನ್‍ಪಿಎಸ್ ಹಿಂಪಡೆದು, ಒಪಿಎಸ್ ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲೂ ಒಪಿಎಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಎಐಪಿಟಿಎಫ್ ಖಜಾಂಚಿ ಹರಿಗೋವಿಂದನ್, ಸೀಮಾ ಮಾತೂರು, ಕೆ.ನಾಗೇಶ, ಚಂದ್ರಶೇಖರ ನುಗ್ಗಲಿ, ಚಿಂತಕ ವಿ.ಪಿ.ನಿರಂಜನಾರಾಧ್ಯ, ಸೀಮಾ ಮಾತೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.