ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ

ಮಾರುಕಟ್ಟೆಯಲ್ಲಿ ಕಾಣದ ಖರೀದಿಯ ಸಡಗರ; ಕೋವಿಡ್‌ನಿಂದ ವ್ಯಾಪಾರ ಕುಸಿತ
Last Updated 14 ಜನವರಿ 2022, 17:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣ ಆಚರಣೆಗೆ ದರ ಏರಿಕೆ ಬಿಸಿ ತಟ್ಟಿದೆ. ಶುಕ್ರವಾರ ಮಾರುಕಟ್ಟೆಯಲ್ಲಿ ಎಳ್ಳು–ಬೆಲ್ಲ, ಕುಸರೆಳ್ಳು ವೈವಿಧ್ಯಮಯ ಹೂವು–ಹಣ್ಣು, ಕಬ್ಬು, ತೋರಣ ಕಟ್ಟಲು ಮಾವಿನ ಎಲೆ ಖರೀದಿ ನಡೆಯಿತು. ಆದರೆ, ಖರೀದಿಯಲ್ಲಿ ಸಂಭ್ರಮ ಕಂಡುಬರಲಿಲ್ಲ.

ದರ ಹೆಚ್ಚಳ:

ಒಂದು ಇಡೀ ಕಬ್ಬಿಗೆ ₹30–₹50 ತನಕ ದರವಿತ್ತು. ಮೂರು ತುಂಡು, ನಾಲ್ಕು ತುಂಡುಗಳ ಕಬ್ಬಿನ ಕಟ್ಟು ₹20ಕ್ಕೆ ಬಿಕರಿಯಾಯಿತು. ಹೂವುಗಳ ದರವೂ ಹೆಚ್ಚಾಗಿತ್ತು. ಮಲ್ಲಿಗೆ ಹೂವಿನ ಮಾಲೆ ಒಂದು ಮಾರಿಗೆ ₹30, ಚಿಕ್ಕ ಚೆಂಡು ಹೂವಿನ ಮಾಲೆ ಮಾರಿಗೆ ₹15, ಗುಲಾಬಿ ಹೂವು 5ಕ್ಕೆ ಒಂದರಂತೆ ಮಾರಾಟವಾದವು. ಕಡಲೆ ಸುಲಗಾಯಿ ಪ್ರತಿ ಕೆ.ಜಿ. ₹40ರಿಂದ ₹60 ತನಕ ಮಾರಾಟವಾಯಿತು.

‘ಸಂಕ್ರಾಂತಿ ಹಿನ್ನೆಲೆಯಲ್ಲಿ ಎಲ್ಲ ಹೂವುಗಳ ದರ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹50–₹100 ತನಕ ಹೆಚ್ಚಾಗಿದೆ. ಹೀಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲೂ ದರ ಹೆಚ್ಚಿದೆ’ ಎಂದು ದುರ್ಗದಬೈಲ್‌ನಲ್ಲಿ ಹೂವು ಮಾರುತ್ತಿದ್ದ ಗಿರಿಜವ್ವ ಕಾಶಿಮಠ ತಿಳಿಸಿದರು.‌

ವೈವಿಧ್ಯಮಯ ಕುಸುರೆಳ್ಳು:

ಮಾರುಕಟ್ಟೆಯಲ್ಲಿ ಬಣ್ಣ–ಬಣ್ಣದ ಹಾಗೂ ವಿವಿಧ ಬಗೆಯ ಕುಸುರೆಳ್ಳು ಮಾರಾಟ ನಡೆಯಿತು. ಶೇಂಗಾ ಕುಸುರೆಳ್ಳು, ಎಳ್ಳಿನ ಕುಸುರೆಳ್ಳು, ಬಡೆಸೋಂಪ್‌ ಕುಸುರೆಳ್ಳು, ಎಳ್ಳು, ಬೆಲ್ಲ, ಕೊಬ್ಬರಿ, ಶೇಂಗಾ, ಪುಟಾಣಿ, ದ್ರಾಕ್ಷಿ, ಗೋಡಂಬಿ, ಏಲಕ್ಕಿ ಮಿಶ್ರಿತ ಕುಸುರೆಳ್ಳು ಜತೆಗೆ ಎಳ್ಳು–ಬೆಲ್ಲದ ಚಿಕ್ಕ ಉಂಡೆಗಳ ಮಾರಾಟವೂ ಕಂಡುಬಂತು.

ಚಿಲ್ಲರೆ ಮಾರುಕಟ್ಟೆಯಲ್ಲಿ ₹10ಕ್ಕೆ 100 ಗ್ರಾಂ ಸಾಮಾನ್ಯ ಕುಸುರೆಳ್ಳು, 100 ಗ್ರಾಂ ಎಳ್ಳಿನ ಕುಸುರೆಳ್ಳು, 100 ಗ್ರಾಂ ಶೇಂಗಾ ಕುಸುರೆಳ್ಳು, 100 ಗ್ರಾಂ ಬಡೇಸೋಂಪ್‌ ಕುಸುರೆಳ್ಳಿಗೆ ತಲಾ ₹40–₹50 ದರವಿತ್ತು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಹೂವು, ಹಣ್ಣು, ತರಕಾರಿ, ಕಬ್ಬು ಎಲ್ಲದರ ದರಗಳೂ ಹೆಚ್ಚಾಗಿವೆ. ಐದು ತುಂಡು ಕಬ್ಬು, ನಾಲ್ಕು ಮಾರು ಹೂವು, ಒಂದಿಷ್ಟು ಕುಸುರೆಳ್ಳಿಗೆ ₹200 ಆಯಿತು. ಕಳೆದ ವರ್ಷ ಇದೇ ವಸ್ತುಗಳು ₹120ಕ್ಕೆ ಕೊಂಡಿದ್ದೆ’ ಎಂದು ಹುಬ್ಬಳ್ಳಿಯ ದೇಸಾಯಿ ಓಣಿ ನಿವಾಸಿ ಗಿರೀಶ ಚಿನಗಿ ತಿಳಿಸಿದರು.

ಕೋವಿಡ್‌, ಕರ್ಫ್ಯೂನಿಂದ ತೊಂದರೆ

‘30 ವರ್ಷಗಳಿಂದ ಸಂಕ್ರಾಂತಿ ಸಮಯದಲ್ಲಿ ಕುಸರೆಳ್ಳು ಮಾರುತ್ತಿದ್ದೇನೆ. ಜನವರಿ 1ರಿಂದಲೇ ಮಾರಾಟ ಆರಂಭಿಸಿ ಸಂಕ್ರಾಂತಿ ತನಕ ಮಾರಾಟ ಮಾಡುತ್ತಿದ್ದೆ. ಸರಾಸರಿ ಒಂದು ಟನ್‌ ಕುಸುರೆಳ್ಳು ಮಾರಾಟವಾಗುತ್ತಿತ್ತು. ಈ ಸಲ ಕೋವಿಡ್‌, ವಾರಾಂತ್ಯ ಕರ್ಫ್ಯೂನಿಂದಾಗಿ ಶೇಕಡ 40ರಷ್ಟು ವ್ಯಾಪಾರ ಕುಸಿತಗೊಂಡಿದೆ’ ಎಂದು ದುರ್ಗದ ಬೈಲ್‌ನ ಕುಸುರೆಳ್ಳು ವ್ಯಾಪಾರಿ ಗೋವಿಂದರಾಜ್ ಚಿಗಳಂಪಲ್ಲೆ ಹೇಳಿದರು.

‘ಪ್ರತಿ ವರ್ಷ ತರಹೇವಾರಿ ಕುಸುರೆಳ್ಳು ಮಾರುತ್ತಿದ್ದೆ. ಎಲ್ಲವೂ ತಲಾ 45–50 ಕೆ.ಜಿಯಷ್ಟು ಬಿಕರಿಯಾಗುತ್ತಿತ್ತು. ಈ ಸಲ ಅದು 10–20 ಕೆ.ಜಿಗೆ ತಗ್ಗಿದೆ. ಸಂಕ್ರಾಂತಿ ಸಮಯದಲ್ಲಿ ಮಕ್ಕಳಿಗೆ ಕಟ್ಟುವ ಸಕ್ಕರೆ ಕಿರೀಟ, ಬಾಜು ಬಂಧಿ, ನಕ್ಲೆಸ್‌, ನಡಪಟ್ಟಿ ಮತ್ತಿತರ ವಸ್ತುಗಳು ಪ್ರತಿ ವರ್ಷ 50 ಸೆಟ್‌ ಮಾರುತ್ತಿದ್ದೆ. ಈಸಲ 10–15 ಸೆಟ್‌ ಮಾತ್ರ ಮಾರಾಟವಾಗಿದೆ’ ಎಂದರು.

‘ಒಂದೆಡೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತವೆ. ಮತ್ತೊಂದೆಡೆ ಈ ಸಲ ಸಂಕ್ರಾಂತಿ ಶನಿವಾರ ಬಂದಿದೆ. ಅಂದು ವಾರಾಂತ್ಯದ ಕರ್ಫ್ಯೂ ಇರುತ್ತದೆ. ಇವೆಲ್ಲ ಅಂಶಗಳು ವ್ಯಾಪಾರಕ್ಕೆ ಹೊಡೆತ ನೀಡಿವೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT