ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಹಣ, ಪ್ರೋತ್ಸಾಹ ಧನ ತರಲು ಆದ್ಯತೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಶಾಸಕ ಶಿವರಾಮ ಹೆಬ್ಬಾರ ಅಧಿಕಾರ ಸ್ವೀಕಾರ
Last Updated 30 ಜನವರಿ 2019, 14:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ) ಅಧ್ಯಕ್ಷರಾಗಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಹುಬ್ಬಳ್ಳಿಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿದರು. ಬಳಿಕ, ಹೊಸೂರು ನಿಲ್ದಾಣದ ಬಳಿ, ಬಿಆರ್‌ಟಿಎಸ್‌ 15 ಹೊಸ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಸೇವಾ ಉದ್ದೇಶ ಹೊಂದಿರುವ ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ಶೇ 97ರಷ್ಟು ಹಳ್ಳಿಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುತ್ತಿದೆ. ಸದ್ಯ ನಷ್ಟದಲ್ಲಿರುವ ಸಂಸ್ಥೆಯನ್ನು ಸುಸ್ಥಿತಿಗೆ ತರಬೇಕಿದೆ. ಅದಕ್ಕಾಗಿ, ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ಅಂದಾಜು ₹482 ಕೋಟಿ ಬಾಕಿ ತರಲು ಆದ್ಯತೆ ನೀಡುವೆ’ ಎಂದರು.

‘ನಷ್ಟದಲ್ಲಿದ್ದ ಬಿಎಂಟಿಸಿಗೆ ಸರ್ಕಾರ ₹100 ಕೋಟಿ ವಿಶೇಷ ಅನುದಾನ ನೀಡಿತ್ತು. ಅದರಂತೆ, ನಮ್ಮ ಸಂಸ್ಥೆಗೂ ನೀಡುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರಿಗೆ ಒತ್ತಡ ಹೇರುತ್ತೇನೆ. ಸಂಸ್ಥೆಯ ಅಭಿವೃದ್ಧಿಗೆ ಉತ್ತರ ಕರ್ನಾಟಕ ಭಾಗದ ಎಲ್ಲಾ ಜನಪ್ರತಿನಿಧಿಗಳ ಸಹಕಾರ ಬಯಸುತ್ತೇನೆ’ ಎಂದು ಹೇಳಿದರು.

‘ಅವಳಿನಗರಕ್ಕೆ ತ್ವರಿಗೆ ಸಂಪರ್ಕ ಕಲ್ಪಿಸುವ ಬಿಆರ್‌ಟಿಸ್, ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಅಧೀನದಲ್ಲಿ ಕೆಲಸ ಮಾಡಲಿದೆ. ಬಿಆರ್‌ಟಿಸಿಎಸ್‌ಗೆ 200 ಬಸ್‌ ಒದಗಿಸುವ ಗುರಿ ಇದೆ. ಇಂದು 15 ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಲಾಗಿದ್ದು, ಮುಂದೆ ಹಂತ ಹಂತವಾಗಿ ಬಸ್‌ಗಳನ್ನು ಒದಗಿಸಲಾಗುವುದು. ಲೋಕಸಭಾ ಚುನಾವಣೆಯ ಅಧಿಸೂಚನೆ ಹೊರಬೀಳುವುದಕ್ಕೂ ಮುಂಚೆ ಬಿಆರ್‌ಟಿಎಸ್‌ ಉದ್ಘಾಟಿಸುವ ಬಗ್ಗೆ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರ ಜತೆ ಚರ್ಚಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

500 ಬಸ್ ಖರೀದಿ:
‘ಸಂಸ್ಥೆಗೆ ₹125 ಕೋಟಿ ವೆಚ್ಚದಲ್ಲಿ ಹೊಸದಾಗಿ 500 ಬಸ್ ಖರೀದಿಗೆ ಪ್ರಕ್ರಿಯೆ ನಡೆದಿದೆ. ಸಂಸ್ಥೆಯಲ್ಲಿರುವ 1,400 ಬಸ್‌ಗಳು ಹಾಗೂ 22 ಸಾವಿರ ಟೈಯರ್‌ಗಳು ಮಾರಾಟಕ್ಕೆ ಚಿಂತನೆ ನಡೆದಿದ್ದು, ಅದರಿಂದ ಅಂದಾಜು ₹20 ಕೋಟಿ ಆದಾಯ ಬರುವ ನಿರೀಕ್ಷೆ ಇದೆ’ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಹೇಳಿದರು.

‘ಇಂಧನ ದರ ಮತ್ತು ಸಿಬ್ಬಂದಿ ಸಂಬಳ ಏರಿಕೆ ಸಂಸ್ಥೆಯನ್ನು ಮತ್ತಷ್ಟು ನಷ್ಟಕ್ಕೆ ದೂಡಿದೆ. ವಿದ್ಯಾರ್ಥಿಗಳ ಬಸ್ ಪಾಸ್‌ಗೆ ಸರ್ಕಾರ ನೀಡುವ ಶೇ 50ರಷ್ಟು ಅನುದಾನ 4 ವರ್ಷದಿಂದ ಬಂದಿಲ್ಲ. ನಿಗದಿಯಂತೆ ಕೆಲ ಮೊತ್ತಗಳು ಬಿಡುಗಡೆಯಾಗಿಲ್ಲ. ಎಲ್ಲವನ್ನೂ ಸಂಸ್ಥೆಯೇ ಭರಿಸಬೇಕಾಗಿದೆ. ಬಾಕಿ ಮೊತ್ತ ಬಿಡುಗಡೆಗೆ ಕೋರಿ ಪತ್ರ ಬರೆಯಲಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.‌

ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ಯೋಜನೆಗೆ ಒಲವು:
‘ಹುಬ್ಬಳ್ಳಿಯಲ್ಲಿ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಹೆಚ್ಚಿನ ಭೂಮಿ ಹೊಂದಿದೆ. ಈ ಪೈಕಿ ಎಷ್ಟೋ ಬಳಕೆಯಾಗಿಲ್ಲ. ಅಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯೋದ್ದೇಶ ಬಳಕೆಯ ಕಟ್ಟಡಗಳನ್ನು ನಿರ್ಮಿಸಲಾಗುವುದು. ಆ ಮೂಲಕ, ಪರ್ಯಾಯವಾಗಿ ಸಂಸ್ಥೆಗೆ ಆದಾಯ ತರುವ ಯೋಜನೆಯನ್ನು ರೂಪಿಸಲಾಗುವುದು’ ಎಂದು ಶಿವರಾಮ ಹೆಬ್ಬಾರ ಹೇಳಿದರು.

ಸಚಿವ ಸ್ಥಾನ ಆಕಾಂಕ್ಷಿ ಹೌದು:
‘ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂಬುದು ನಿಜ. ಆಸೆ ಯಾವಾಗಲು ದೊಡ್ಡದಾಗಿರಬೇಕಲ್ಲವೆ. ಹಾಗೆಂದ ಮಾತ್ರಕ್ಕೆ ಸದ್ಯಕ್ಕೆ ನನಗೆ ವಹಿಸಿರುವ ಜವಾಬ್ದಾರಿ ಚಿಕ್ಕದು ಎಂದು ಭಾವಿಸಲಾರೆ. ಉತ್ತರ ಕರ್ನಾಟಕ ವ್ಯಾಪಿಸಿರುವ ಸಂಸ್ಥೆಯಲ್ಲಿ ಹೆಚ್ಚಿನ ಕೆಲಸ ಮಾಡಲು ಅವಕಾಶವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹೆದರಿಸುತ್ತಿದ್ದರು:
‘ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಅಧ್ಯಕ್ಷನನ್ನಾಗಿ ನನ್ನನ್ನು ನೇಮಕ ಮಾಡಿದ ಬೆನ್ನಲ್ಲೇ, ‘ನಷ್ಟದಲ್ಲಿರುವ ಸಂಸ್ಥೆಗೆ ಯಾಕೆ ಹೋಗುತ್ತೀರಿ? ಅಲ್ಲಿ ಏನೂ ಸರಿ ಇಲ್ಲ’ ಎಂದು ಕೆಲವರು ಹೆದರಿಸಿದ್ದರು. ಎಲ್ಲವೂ ಸರಿಯಾಗಿರುವ ಸಂಸ್ಥೆಗೆ ಹೋಗಿ ಮಾಡುವುದೇನಿದೆ. ನಷ್ಟದಲ್ಲಿರುವ ಸಂಸ್ಥೆಯನ್ನು ನಷ್ಟದಿಂದ ಹೊರ ತರುವುದರಲ್ಲಿ ನಿಜವಾದ ಶ್ರಮವಿದೆ’ ಎಂದರು.

ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಶಿವರಾಮ ಹೆಬ್ಬಾರ ಅವರ ಪತ್ನಿ ವನಜಾಕ್ಷಿ ಹೆಬ್ಬಾರ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಈಶ್ವರ ಶಿರಸಂಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT