ಬುಧವಾರ, ಸೆಪ್ಟೆಂಬರ್ 18, 2019
28 °C
ಇಂಡಿಯನ್ ಬ್ಯಾಂಕ್‌ ಕಾರ್ಪೊರೇಟ್ ಕಚೇರಿಯ ಮಹಾ ಪ್ರಬಂಧಕ ಎಸ್. ಚೆಳಿಯನ್

ಆರ್ಥಿಕ ವೃದ್ಧಿ, ಗ್ರಾಹಕ ಸ್ನೇಹಿ ವ್ಯವಸ್ಥೆಗೆ ಒತ್ತು

Published:
Updated:
Prajavani

ಹುಬ್ಬಳ್ಳಿ: ‘ಆರ್ಥಿಕ ವೃದ್ಧಿ ಹಾಗೂ ಗ್ರಾಹಕ ಸ್ನೇಹಿ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲು ಮೊದಲು ಆದ್ಯತೆ ನೀಡಲಾಗುವುದು’ ಎಂದು ಇಂಡಿಯನ್ ಬ್ಯಾಂಕ್‌ ಕಾರ್ಪೊರೇಟ್ ಕಚೇರಿಯ ಮಹಾ ಪ್ರಬಂಧಕ ಎಸ್. ಚೆಳಿಯನ್ ಹೇಳಿದರು.

ಬ್ಯಾಂಕ್ ಶಾಖೆಯ ವ್ಯವಸ್ಥಾಪಕರೊಂದಿಗೆ ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಬ್ಯಾಂಕಿಂಗ್ ವಲಯದ ಕಾರ್ಯಸೂಚಿ ಸುಧಾರಣೆ ಸಲುವಾಗಿ ಬ್ಯಾಂಕಿಂಗ್ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ ಹಾಗೂ ಸುಧಾರಣೆ ಕುರಿತು ವ್ಯವಸ್ಥಾಪಕರೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸಲಾಗುತ್ತಿದೆ’ ಎಂದರು.

‘ಶಾಖೆಗಳ ವ್ಯವಹಾರದಲ್ಲಿ ಸುಧಾರಣೆ, ವ್ಯವಹಾರ ವಿಸ್ತರಣೆಗೆ ಇರುವ ಅವಕಾಶಗಳು, ಗ್ರಾಹಕರ ಅಗತ್ಯತೆಗಳು, ಸ್ಥಳೀಯ ನಿರೀಕ್ಷೆಗಳು ಹಾಗೂ ಡಿಜಿಟಲೀಕರಣದಂತಹ ಗ್ರಾಹಕ ಸ್ನೇಹಿ ಕ್ರಮಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಗತ್ಯ ಬದಲಾವಣೆ ತರಲಾಗುವುದು’ ಎಂದು ಹೇಳಿದರು.

‘ಸದ್ಯ ಬ್ಯಾಂಕು ಶೇ 60ರಷ್ಟು ರಿಟೇಲ್ ಮತ್ತು ಶೇ 40ರಷ್ಟು ಕಾರ್ಪೊರೇಟ್ ವಹಿವಾಟು ನಡೆಸುತ್ತಿದೆ. ಇದೇ ಅನುಪಾತದಲ್ಲಿ ವಹಿವಾಟು ಮುಂದುವರಿದರೆ ಬ್ಯಾಂಕಿಂಗ್ ವಹಿವಾಟಿನಲ್ಲಿ ಸಮತೋಲನ ಸಾಧಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಆರ್ಥಿಕ ಕುಸಿತದಿಂದ ತಯಾರಿಕಾ ವಲಯ ಸೇರಿದಂತೆ ಇತರ ವಲಯಗಳು ಚೇತರಿಸಿಕೊಳ್ಳಲು ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಕಡಿಮೆ ಮಾಡಿದೆ. ಇದರಿಂದಾಗಿ ಬ್ಯಾಂಕುಗಳು ಬಡ್ಡಿ ದರ ಕಡಿಮೆ ಮಾಡಲಿವೆ. ಜತೆಗೆ, ಸಾಲ ಪಾವತಿಯ ಕಂತುಗಳನ್ನು ವಿಸ್ತರಿಸುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.

ಸಾಲ ವಸೂಲಿ ತೊಡಕು: ಹುಬ್ಬಳ್ಳಿ ವಲಯದ ಪ್ರಬಂಧಕ ಧಾರಾ ಶಿವಪ್ರಸಾದ್ ಮಾತನಾಡಿ, ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಸ್ಟ್ಯಾಂಡ್‌ಅಪ್ ಇಂಡಿಯಾ, ಮುದ್ರಾ ಸಾಲಗಳು, ಪಿಎಸ್‌ಬಿ ಸಾಲ ಸೇರಿದಂತೆ ಎಂ.ಎಸ್.ಎಂ.ಇ ವಲಯದ ಸಾಲ ನೀಡುವಿಕೆ ಹಾಗೂ ಸಾಲ ವಸೂಲಿಯಲ್ಲಿ ಹಲವು ತೊಡಕುಗಳಿವೆ. ಈ ಬಗ್ಗೆಯೂ ಚರ್ಚಿಸಿ ಸುಧಾರಣೆಗೆ ಏನು ಮಾಡಬೇಕೆಂಬುದರ ವರದಿಯನ್ನು ಆರ್ಥಿಕ ಸಚಿವಾಲಯಕ್ಕೆ ಸಲ್ಲಿಸಲಾಗುವುದು’ ಎಂದರು.

‘ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತನೆ, ಅಗತ್ಯ ಮಾಹಿತಿ ನೀಡುವಿಕೆ, ಯೋಜನೆಗಳ ಮನವರಿಕೆ, ಸ್ಥಳೀಯ ಭಾಷೆಯಲ್ಲೇ ವ್ಯವಹಾರದಂತಹ ಗ್ರಾಹಕ ಸ್ನೇಹಿ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ಕೆಲ ಸಿಬ್ಬಂದಿ ಗ್ರಾಹಕರೊಂದಿಗೆ ಒರಟಾಗಿ ವರ್ತಿಸುವ ಸಂಬಂಧ ದೂರುಗಳಿವೆ’ ಎಂದು ಹೇಳಿದರು.

‘ಸಿಬ್ಬಂದಿ ವಿರುದ್ಧದ ಗಂಭಿರವಾದ ದೂರು ಪರಿಶೀಲನೆಗೆ ಒಂಬುಡ್ಸ್‌ಮನ್ ವ್ಯವಸ್ಥೆ ಇದೆ. ದೂರಿನ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡುವ ಕುರಿತು ಸಿಬ್ಬಂದಿಗೆ ಆಗಾಗ ತರಬೇತಿ ಜತೆಗೆ, ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಬ್ಯಾಂಕ್ ಸದ್ಯ ದೇಶದಾದ್ಯಂತ 2,875 ಶಾಖೆಗಳನ್ನು ಹೊಂದಿದೆ. ಈ ಪೈಕಿ, ಕರ್ನಾಟಕದಲ್ಲಿ 120 ಶಾಖೆಗಳಿವೆ. ಹುಬ್ಬಳ್ಳಿ ವಲಯದಲ್ಲಿ 56 ಇದ್ದು, ಅಂದಾಜು 22,500 ಗ್ರಾಹಕರನ್ನು ಹೊಂದಿದೆ’ ಎಂದರು.

Post Comments (+)