ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸಂಸ್ಥೆಗಳಿಂದಲೇ ಮಾಹಿತಿ; ಆಕ್ಷೇಪ

ವೇತನ, ಭದ್ರತೆ ನೀಡದ ಹಲವು ಸಂಸ್ಥೆಗಳು; ಸಮರ್ಪಕ ಮಾಹಿತಿ ನೀಡುವ ಬಗ್ಗೆ ಶಿಕ್ಷಕರ ಅನುಮಾನ
Last Updated 22 ಜುಲೈ 2021, 13:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‍ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ನೀಡಲು ಸರ್ಕಾರ, ಶಿಕ್ಷಣ ಸಂಸ್ಥೆಗಳ ಮೂಲಕ ಮಾಹಿತಿ ಪಡೆಯುತ್ತಿರುವುದು ಶಿಕ್ಷಕರ ಆಕ್ಷೇಪಕ್ಕೆ ಕಾರಣವಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಶಿಕ್ಷಕರು ಆಗ್ರಹಿಸಿದ್ದಾರೆ.

‘ಶಿಕ್ಷಕರಿಗೆ ಕನಿಷ್ಠ ವೇತನ, ಉದ್ಯೋಗ ಭದ್ರತೆಯಂತಹ ಅಗತ್ಯ ಸೌಲಭ್ಯಗಳನ್ನು ನೀಡದ ಬಹುತೇಕ ಶಿಕ್ಷಣ ಸಂಸ್ಥೆಗಳು ತೆರಿಗೆ ಹಾಗೂ ಸೌಲಭ್ಯ ನೀಡುವಿಕೆಯಿಂದ ತಪ್ಪಿಸಿಕೊಳ್ಳಲು ಬಿಇಒ ಕಚೇರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಈಗ ಪರಿಹಾರಕ್ಕಾಗಿ ಶಿಕ್ಷಕರ ನಿಖರ ಮಾಹಿತಿ ನೀಡಿದಲ್ಲಿ, ತಮ್ಮ ಅಸಲಿಯತ್ತು ಬಯಲಾಗುವುದೋ ಎಂಬ ಆತಂಕ ಸಂಸ್ಥೆಗಳಿಗಿದೆ. ಅಗತ್ಯ ಸೌಲಭ್ಯಕ್ಕಾಗಿ ಶಿಕ್ಷಕರು ಆಗ್ರಹಿಸಿದಲ್ಲಿ, ಈ ಸಂಸ್ಥೆಗಳು ಅನಿವಾರ್ಯವಾಗಿ ನೀಡಬೇಕಾಗುತ್ತದೆ. ಕಾನೂನು ಹೋರಾಟಕ್ಕೂ ಶಿಕ್ಷಕರಿಗೆ ದಾಖಲೆಗಳು ಸಿಕ್ಕಂತಾಗುತ್ತದೆ. ಇದನ್ನೆಲ್ಲ ಯೋಚಿಸಿ, ನಿಖರ ಮಾಹಿತಿಯನ್ನು ನೀಡದ ಸಾಧ್ಯತೆ ಇರುವುದರಿಂದ ಅರ್ಹ ಶಿಕ್ಷಕರಿಗೆ ಪರಿಹಾರ ಸಿಗುವುದು ಅನುಮಾನವಾಗಿದೆ’ ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗದ ಸಂಸ್ಥಾಪಕ ಅಧ್ಯಕ್ಷ ಸಿ.ಎನ್‍. ನಾಗೇಶ್ ತಿಳಿಸಿದರು.

‘ಖಾಸಗಿ ಶಾಲಾ ಶಿಕ್ಷಕರಿಗೆ ತಲಾ ₹5,000 ಪರಿಹಾರ ನೀಡಲು ₹100 ಕೋಟಿ ಮೀಸಲಿಟ್ಟಿರುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಇದರಿಂದ 2 ಲಕ್ಷ ಶಿಕ್ಷಕರಿಗೆ ನೆರವು ಸಿಗುತ್ತಿತ್ತು. ಈಗ ಬೋಧಕೇತರ ಸಿಬ್ಬಂದಿಗೂ ಇದೇ ಹಣದಲ್ಲಿ ಪರಿಹಾರ ನೀಡಲು ಮಾಹಿತಿ ಕಲೆಹಾಕಲಾಗುತ್ತಿದೆ. ಇದರಿಂದ ಬಹುತೇಕ ಶಿಕ್ಷಕರು ಪರಿಹಾರದಿಂದ ವಂಚಿತವಾಗಲಿದ್ದಾರೆ’ ಎಂದರು.

‘ಕಳೆದ ವರ್ಷದಿಂದ ಸಂಬಳವಿಲ್ಲದೆ ಹಲವು ಶಿಕ್ಷಕರು ಜೀವನೋಪಾಯಕ್ಕಾಗಿ ಅನ್ಯ ವೃತ್ತಿಯಲ್ಲಿ ತೊಡಗಿದ್ದಾರೆ. ಬಹುತೇಕ ಶಾಲೆಗಳು ಸಾವಿರಾರು ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಿವೆ. ಈ ಸಂದರ್ಭದಲ್ಲಿ ನಿವೃತ್ತರಾದವರಿಗೂ ಪರಿಹಾರ ಇಲ್ಲವಾಗಿದೆ’ ಎಂದು ಬಳಗದ ಸಂಘಟನಾ ಅಧ್ಯಕ್ಷ ರಂಜನ್‍ ಬೇಸರಿಸಿದರು.

ಖಾತೆಗೆ ನೇರ ಹಣ: ‘ಶಿಕ್ಷಕರು ಹಾಗೂ ಸಿಬ್ಬಂದಿಯ ಹೆಸರು, ಬ್ಯಾಂಕ್ ಖಾತೆಯ ಮಾಹಿತಿ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಿಳಿಸಲಾಗಿತ್ತು. ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಶೀಘ್ರ ಶಿಕ್ಷಕರ ಖಾತೆಗಳಿಗೆ ನೇರವಾಗಿ ಹಣ ಹಾಕಲಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT