ಬುಧವಾರ, ಜನವರಿ 22, 2020
23 °C
ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆ: ಕುಡಿಯುವ ನೀರಿನ ದರ ಹೆಚ್ಚಳಕ್ಕೆ ಆಕ್ಷೇಪ

ದುರಸ್ತಿಯಾಗದ ರಸ್ತೆ; ಸದಸ್ಯರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೆಲ ತಿಂಗಳ ಹಿಂದೆ ಸುರಿದ ನಿರಂತರ ಮಳೆಯಿಂದ ಸಾಕಷ್ಟು ರಸ್ತೆಗಳು ಹಾಳಾಗಿದ್ದರೂ ಇನ್ನೂ ದುರಸ್ತಿ ಮಾಡಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಮಿನಿ ವಿಧಾನಸೌಧದಲ್ಲಿ ಗುರುವಾರ ತಾ.ಪಂ.ಅಧ್ಯಕ್ಷೆ ಚನ್ನಮ್ಮ ಗೊರ್ಲ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಸ್ತೆ ಮತ್ತು ಸೇತುವೆಗಳ ದುರಸ್ತಿಗೆ ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆಗೆ ಹಣ ಬಿಡುಗಡೆ ಮಾಡಿದ್ದರೂ ದುರಸ್ತಿ ಕಾರ್ಯ ನಡೆದಿಲ್ಲ ಎಂದು ಸದಸ್ಯರು ದೂರಿದರು.

ಸದಸ್ಯ ಫರ್ವೇಜ್‌ ಬ್ಯಾಹಟ್ಟಿ ‘ಹುಬ್ಬಳ್ಳಿ ತಾಲ್ಲೂಕಿನಲ್ಲಿ ಹಲವೆಡೆ ಸೇತುವೆಗಳು ಕುಸಿದಿವೆ. ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಮಳೆ ನಿಂತು ಸಾಕಷ್ಟು ದಿನವಾದರೂ ಕೆಲಸ ಮಾಡದೇ ಇರುವುದು ಸರಿಯಲ್ಲ’ ಎಂದರು.

ತಾ.ಪಂ. ಉಪಾಧ್ಯಕ್ಷ ಗುರುಪಾದಪ್ಪ ಕಮಡೊಳ್ಳಿ ‘ಹಲವು ಕಡೆ ಶಾಲಾ ಕೊಠಡಿಗಳು ಬಿದ್ದಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಈ ಕುರಿತು ಕೂಡಲೇ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗುಂಡಳ್ಳಿ ‘ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಶಾಲಾ ಕೊಠಡಿಗಳ ದುರಸ್ತಿ ಮಾಡಲಾಗುವುದು’ ಎಂದು ತಿಳಿಸಿದರು.

‘ಮಳೆಯಿಂದ ಹಾನಿಗೊಳಗಾದ ಶಾಲೆಗಳ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಗ್ರಾಮೀಣ ಭಾಗದ 69 ಶಾಲೆಗಳಿಗೆ ₹2 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಮಾಹಿತಿ ನೀಡಿದರು.

ನೀರಿನ ದರ ಹೆಚ್ಚಳಕ್ಕೆ ಆಕ್ಷೇಪ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. 20 ಲೀಟರ್‌ ನೀರಿಗೆ ₹2 ಇದ್ದ ದರವನ್ನು ದಿಢೀರನೇ ₹5ಕ್ಕೆ ಏರಿಸಿದ್ದು ಸರಿಯಲ್ಲ. ಈ ಬೆಲೆಯನ್ನು ಕಡಿಮೆ ಮಾಡಬೇಕು ಎನ್ನುವ ಆಗ್ರಹವೂ ಸದಸ್ಯರಿಂದ ಕೇಳಿ ಬಂತು.

ಖಾಸಗಿಯವರು ಪ್ರತಿ 20 ಲೀಟರ್‌ಗೆ ₹ 10 ನಿಗದಿ ಮಾಡಿದ್ದಾರೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಸದಸ್ಯರು ‘ಖಾಸಗಿಯವರಿಗೆ ಲಾಭವೇ ಮುಖ್ಯ ಉದ್ದೇಶವಾಗಿರುತ್ತದೆ. ನೀವೂ ಕೂಡ ಲಾಭದ ಉದ್ದೇಶದಿಂದ ಮಾತನಾಡಬೇಡಿ. ಮೊದಲ ದರ ಇಳಿಸಿ’ ಎಂದು ಆಗ್ರಹಿಸಿದರು.

ಮೂರು ವರ್ಷಗಳಲ್ಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಭೂಸೇನಾ ನಿಗಮದಿಂದ ಕೈಗೊಂಡ ಕಾಮಗಾರಿಗಳ ವಿವರವನ್ನು ತಾಲ್ಲೂಕು ಪಂಚಾಯ್ತಿಗೆ ನೀಡುವಂತೆ ನಿಗಮದ ಅಧಿಕಾರಿ ಲಕ್ಷ್ಮಣನಾಯ್ಕ್ ಅವರಿಗೆ ಸಭೆಯಲ್ಲಿ ಸೂಚಿಸಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ, ಸದಸ್ಯರಾದ ಫಕೀರವ್ವ ಹುಲ್ಲುಂಬಿ, ಲಕ್ಷ್ಮಿ ಶಿವಳ್ಳಿ, ದ್ಯಾಮಕ್ಕ ಸತ್ಯಮ್ಮನವರ, ಫಕೀರಪ್ಪ ಚಾಲಕಬ್ಬಿ, ಸರೋಜ ಅಲಗವಾಡಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಂ.ಸವದತ್ತಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು