ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಮಾದರಿ ಯೋಜನೆಗೆ ಪ್ರಸ್ತಾವ

Last Updated 24 ಆಗಸ್ಟ್ 2019, 14:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದ ಸಮಗ್ರ ಅಭಿವೃದ್ಧಿಗೆ ಗುಜರಾತ್‌ ಮಾದರಿಯ ‘ವಿಶೇಷ ಹೂಡಿಕೆ ವಲಯ’ ಯೋಜನೆಗೆ ಹುಬ್ಬಳ್ಳಿ–ಧಾರವಾಡ ಅಭಿವೃದ್ಧಿ ವೇದಿಕೆ ಪ್ರಸ್ತಾವ ಸಿದ್ಧಪಡಿಸಿದೆ. ಇದರಿಂದ ಆರ್ಥಿಕ ಪ್ರಗತಿಗೆ ನಾಂದಿಯಾಗಲಿದೆ ಎಂದು ವೇದಿಕೆ ಉಪಾಧ್ಯಕ್ಷ ಅಶೋಕ ಶೆಟ್ಟರ್‌ ಹೇಳಿದರು.

ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಶನಿವಾರ ಅವಳಿ ನಗರದ ಅಭಿವೃದ್ಧಿ ಕುರಿತು ಯೋಜನೆಗಳ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ್‌ ಅವರೊಂದಿಗೆ ನಡೆದ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೃಹತ್‌ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ಉದ್ಯೋಗಾವಕಾಶ ಹೆಚ್ಚಿಸಿ, ಆರ್ಥಿಕ ಪ್ರಗತಿ ಸಾಧಿಸುವ ಸದುದ್ದೇಶದಿಂದ ವೇದಿಕೆ ರಚನೆ ಮಾಡಲಾಗಿದೆ’ ಎಂದರು.

‘ಇತ್ತೀಚೆಗಿನ ಐದಾರು ವರ್ಷಗಳಲ್ಲಿ ಅವಳಿ ನಗರದಲ್ಲಿ ಸಾಕಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ. ಆದರೆ, ಉದ್ಯೋಗಾವಕಾಶಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ಇದರಿಂದಾಗಿ ಶೇ 90ರಷ್ಟು ವಿದ್ಯಾವಂತರು ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಇಲ್ಲಿಯೇ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾದರೆ ನಗರ ಆರ್ಥಿಕವಾಗಿ ಅಭಿವೃದ್ಧಿಯಾಗುವುದಲ್ಲದೆ, ಸಾಕಷ್ಟು ಉದ್ಯೋಗಗಳು ಸಹ ಸೃಷ್ಟಿಯಾಗುತ್ತವೆ’ ಎಂದು ಹೇಳಿದರು.

‘ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ 2009ರಲ್ಲಿ ‘ವಿಶೇಷ ಹೂಡಿಕೆ ವಲಯ’ ಸ್ಥಾಪನೆ ಮಾಡಿದ್ದರು. ಅಲ್ಲಿ ವಿಶ್ವದರ್ಜೆ ಗುಣಮಟ್ಟದ ಮೂಲ ಸೌಕರ್ಯಗಳನ್ನು ಒದಗಿಸಿ ವಿದೇಶಿ ಮೂಲದ ದೊಡ್ಡ ಕಂಪನಿಗಳು ಸ್ಥಾಪನೆಯಾಗುವಂತೆ ಮಾಡಿದ್ದರು. ಹಂತ ಹಂತವಾಗಿ ಉದ್ಯೋಗ ಸೃಷ್ಟಿಯಾಯಿತಲ್ಲದೆ, ಆರ್ಥಿಕವಾಗಿಯೂ ಆ ರಾಷ್ಟ್ರ ಬಲಿಷ್ಠವಾಯಿತು. ಅದೇ ಮಾದರಿಯನ್ನು ಮುಂದಿಟ್ಟುಕೊಂಡು ಅವಳಿ ನಗರದ ಅಭಿವೃದ್ಧಿಗೆ ಪ್ರಸ್ತಾವ ಸಿದ್ಧ ಪಡಿಸಲಾಗಿದೆ’ ಎಂದರು.

‘ಆಧುನಿಕ ತಂತ್ರಜ್ಞಾನ ಹಾಗೂ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸುವ ಘಟಕಗಳ ಸ್ಥಾಪನೆ, ಆಹಾರ ಮತ್ತು ವಸ್ತ್ರಗಳ ತಯಾರಿಕಾ ಘಟಕಗಳ ಆರಂಭವಾಗಬೇಕು. ‘ವಲಯ ಕೈಗಾರಿಕಾ ಅಭಿವೃದ್ಧಿ ಮಂಡಳಿ’ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ’ ಎಂದರು.

‘ಕೇಂದ್ರ ಸರ್ಕಾರದಲ್ಲಿ ಪ್ರಹ್ಲಾದ ಜೋಶಿ, ರಾಜ್ಯ ಸರ್ಕಾರದಲ್ಲಿ ಜಗದೀಶ ಶೆಟ್ಟರ್‌ ಸಚಿವರಾಗಿರುವುದರಿಂದ ಪ್ರಸ್ತಾವಿತ ಯೋಜನೆಗೆಗಳಿಗೆ ಒಪ್ಪಿಗೆ ದೊರೆಯುವ ವಿಶ್ವಾಸ ನಮ್ಮದಾಗಿದೆ’ ಎಂದರು.

ಇದಕ್ಕೂ ಮುನ್ನ ಹುಬ್ಬಳ್ಳಿ–ಧಾರವಾಡ ಅಭಿವೃದ್ಧಿ ವೇದಿಕೆಯ ಕಚೇರಿಯನ್ನು ಕೇಂದ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಿದರು.

ವೇದಿಕೆ ಅಧ್ಯಕ್ಷ ವಿಜಯ ಸಂಕೇಶ್ವರ, ವಿಎಸ್‌.ವಿ. ಪ್ರಸಾದ, ನಂದಕುಮಾರ, ರಮೇಶ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT