ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌ ಮುಚ್ಚುವ ಹುನ್ನಾರ: ಸಿಐಟಿಯು

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಐ. ಈಳಿಗೇರ ಆರೋಪ
Last Updated 25 ಫೆಬ್ರುವರಿ 2019, 11:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾರ್ವಜನಿಕ ವಲಯದ ಬಿಎಸ್‌ಎನ್‌ಎಲ್‌ ಕಂಪನಿಯನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ, ಸಿಐಟಿಯು (ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ಸ್‌) ಧಾರವಾಡ ಜಿಲ್ಲಾ ಸಮಿತಿ ಸದಸ್ಯರು ಹಾಗೂ ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರು ಹುಬ್ಬಳ್ಳಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕರರು, ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಕಂಪನಿ ಬಿಎಸ್‌ಎನ್‌ಎಲ್‌ ಚೇತರಿಕೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಐ. ಈಳಿಗೇರ, ‘ಕೇಂದ್ರದಲ್ಲಿ ಅಧಿಕಾರ ಹಿಡಿದ ಸರ್ಕಾರಗಳ ಅಪಕ್ವ ನಿರ್ಧಾರಗಳಿಂದಾಗಿ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಬಿಎಸ್‌ಎನ್‌ಎಲ್‌ ಮುಚ್ಚುವ ಹಂತಕ್ಕೆ ಬಂದಿದೆ. ಈ ಬೆಳವಣಿಗೆ ಹಿಂದೆ ಕಾರ್ಪೊರೇಟ್‌ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶವಿದೆ’ ಎಂದು ದೂರಿದರು.

‘ಕಂಪನಿಗೆ ಮರುಜೀವ ನೀಡಿ, ಖಾಸಗಿ ಮೊಬೈಲ್ ಕಂಪನಿಗಳೊಂದಿಗೆ ಸ್ಪರ್ಧಿಸುವಂತೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ, ನೌಕರರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.

ಸಿಗದ ಸಂಬಳ:ಬಿಎಸ್‌ಎನ್‌ಎಲ್‌ನ ಕರ್ನಾಟಕ ವೃತ್ತದಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮೂರು ಸಾವಿರಕ್ಕೂ ಹೆಚ್ಚು ಮಂದಿಗೆ ಆರು ತಿಂಗಳಿಂದ ಸಂಬಳ ಪಾವತಿಸದಿರುವುದರ ಬಗ್ಗೆಯೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಹಣಕಾಸಿನ ಮುಗ್ಗಟ್ಟಿನ ನೆಪ ಹೇಳಿ, ಕಾರ್ಮಿಕರಿಗೆ ಸಂಬಳ ಪಾವತಿಗೆ ವಿಳಂಬವಾಗುತ್ತಿದೆ ಎಂದು ಮೇಲಧಿಕಾರಿಗಳು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದು ಗುತ್ತಿಗೆ ಕಾರ್ಮಿಕ ಕಾಯ್ದೆ–1970ರ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.

‘ಇದರಿಂದಾಗಿ ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳುವ ಹಂತಕ್ಕೆ ಬಂದಿವೆ. ಹಾಗಾಗಿ, ಕೂಡಲೇ ಸಂಬಳ ಪಾವತಿಸಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬಳಿಕ, ಬಿಎಸ್‌ಎನ್‌ಎಲ್‌ ಹುಬ್ಬಳ್ಳಿ ವಲಯದ ಜನರಲ್ ಮ್ಯಾನೇಜರ್‌ ಜೆ.ಎಲ್. ಗೌತಮ್ ಅವರಿಗೆ ಮನವಿ ಸಲ್ಲಿಸಲಾಯಿತು. ಬಿಎಸ್‌ಎನ್‌ಎಲ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ದೊಡ್ಡಮನಿ, ಬಿ.ಎನ್. ಪೂಜಾರಿ, ಎನ್‌.ಡಿ. ಪಾಟೀಲ, ಶಿವಶಂಕರಪ್ಪ, ಗುರುಸಿದ್ಧಪ್ಪ ಅಂಬಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT