ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರತಿಭಟನೆ

ಶ್ರಮಿಕ ವರ್ಗದವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ
Last Updated 26 ಡಿಸೆಂಬರ್ 2019, 14:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ, ಪಂಕ್ಚರ್ ಹಾಕುವವರು ಸೇರಿದಂತೆ ಒಟ್ಟಾರೆ ಶ್ರಮಿಕ ವರ್ಗದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪೌರ ಕಾರ್ಮಿಕರು ಹಾಗೂ ನೌಕರರ ಸಂಘದ ವತಿಯಿಂದ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪೊರಕೆ ಹಾಗೂ ಟೈಯರ್ ಹಿಡಿದಿದ್ದ ಕಾರ್ಮಿಕರು, ತೇಜಸ್ವಿ ಸೂರ್ಯ ವಿರುದ್ಧ ಘೋಷಣೆ ಕೂಗಿದರು. ನಂತರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ‘ಅಸಂಘಟಿತರಾದ ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗ್ಯಾರೇಜ್ ಕೆಲಸಗಾರರು, ಆಟೊ ಡ್ರೈವರ್‌ಗಳು, ಬೀದಿ ವ್ಯಾಪಾರಿಗಳು, ರೈತರು ಸೇರಿದಂತೆ ನೂರಾರು ಬಗೆಯ ಕಾರ್ಮಿಕರು ದೇಶದ ಚಲನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅಂತಹವರ ಬಗ್ಗೆ ತೇಜಸ್ವಿ ಸೂರ್ಯ ಅವರು ಕೀಳಾಗಿ ಮಾತನಾಡಿರುವುದು ಖಂಡನೀಯ’ ಎಂದರು.

ಕಾಂಗ್ರೆಸ್ ಮುಖಂಡ ಮೋಹನ ಹಿರೇಮನಿ ಮಾತನಾಡಿ, ‘ಅನಕ್ಷರಸ್ಥರಾದರೂ ಶ್ರಮಿಕ ವರ್ಗದವರು ಯಾರಿಗೂ ಮೋಸ ಮಾಡದೆ, ಪ್ರಾಮಾಣಿಕವಾಗಿ ಜೀವನ ಸಾಗಿಸುತ್ತಿದ್ದಾರೆ. ದೇಶದ ಮೂಲ ನಿವಾಸಿಗಳಾದ ಅವರೇನಾದರೂ, ಒಂದು ದಿನ ತಮ್ಮ ಕೆಲಸ ನಿಲ್ಲಿಸಿದರೆ ಇಡೀ ದೇಶವೇ ಸ್ತಬ್ಧಗೊಳ್ಳುತ್ತದೆ. ಹಾಗಾಗಿ, ತೇಜಸ್ವಿ ಸೂರ್ಯ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಶ್ರಮಿಕ ವರ್ಗದ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

ಕಳಸಾ– ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ತೇಜಿ, ‘ಅಧಿಕಾರದ ಅಮಲಿನಲ್ಲಿ, ಯಾರದೋ ಓಲೈಕೆಗಾಗಿ ಶ್ರಮಿಕ ವರ್ಗವನ್ನು ಅವಮಾನಿಸುವ ಹೇಳಿಕೆಯನ್ನು ಯಾರೂ ನೀಡಬಾರದು. ದೇಶದ ಬೆಳವಣಿಗೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಾಬಾಜಾನ ಮುಧೋಳ, ನರಸಿಂಹ ಪಾಲವಾಯಿ, ಶೋಭಾ ಕಮತಾರ, ಕಸ್ತೂರೆವ್ವ ಬೆಳಗುಂದಿ, ಗಂಗಮ್ಮ ಸಿದ್ರಾಮಪುರ, ಶರೀಫ ಮಸ್ರಕಲ್ಲ, ಬಸವರಾಜ ದೊಡ್ಡಮನಿ, ಗಂಗಾಧರ ದೊಡ್ಡಮನಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT