‘ಸಮಸ್ಯೆ ಪರಿಹರಿಸಿ, ಹುಬ್ಬಳ್ಳಿಗೆ ಬರಲಿ’

7
ಪ್ರಧಾನಿಗೆ ಕಪ್ಪುಬಟ್ಟೆ ಧರಿಸಿ ಪ್ರತಿಭಟಿಸುವ ಎಚ್ಚರಿಕೆ

‘ಸಮಸ್ಯೆ ಪರಿಹರಿಸಿ, ಹುಬ್ಬಳ್ಳಿಗೆ ಬರಲಿ’

Published:
Updated:

ಹುಬ್ಬಳ್ಳಿ: ಮಹದಾಯಿ ಮತ್ತು ಕಳಸಾ ಬಂಡೂರಿ ವಿಷಯದಲ್ಲಿ ಕೇಂದ್ರ ಸರ್ಕಾರ ಹುಸಿ ಭರವಸೆ ನೀಡುತ್ತಿದೆ. ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿರುವ ಸಾಲ ಕೂಡ ಮನ್ನಾ ಮಾಡಿಲ್ಲ. ಈ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಬರಲಿ. ಇಲ್ಲವಾದರೆ ಕಪ್ಪು ಬಟ್ಟೆ ಧರಿಸಿ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಸಮಿತಿಯ ಅಧ್ಯಕ್ಷ ಸಿದ್ದು ತೇಜಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ’ಮಹದಾಯಿ ವಿಷಯದಲ್ಲಿ ನ್ಯಾಯ ಕೊಡಿಸುವುದಾಗಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸುಳ್ಳು ಹೇಳಿಕೆ ನೀಡಿ ರೈತರನ್ನು ಹಾದಿ ತಪ್ಪಿಸುತ್ತಿವೆ. ಸಮಸ್ಯೆ ಪರಿಹರಿಸಲು ಸಾಧ್ಯವಾಗದೇ ಹೋದರೆ ಈ ಮೂರು ಪಕ್ಷಗಳು ಮಹದಾಯಿ ಬಗ್ಗೆ ಮಾತನಾಡಬಾರದು’ ಎಂದರು.

‘ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ನರೇಂದ್ರ ಮೋದಿ ಸುಲಭವಾಗಿ ಸಮಸ್ಯೆ ಇತ್ಯರ್ಥ್ಯಗೊಳಿಸಬೇಕಿತ್ತು. ಈ ಕೆಲಸವನ್ನೂ ಮಾಡಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಎರಡು ಹೆಕ್ಟೇರ್‌ಗೆ ₹ 6,000 ನೀಡಲಾಗುವುದು ಎಂದು ಕೇಂದ್ರ ಹೇಳಿದೆ. ಆದರೆ, ಒಂದು ಎಕರೆ ಹೊಲದಲ್ಲಿ ಬಿತ್ತಲು ಕನಿಷ್ಠ ₹ 4,500ರಿಂದ ₹ 5,000 ಖರ್ಚಾಗುತ್ತದೆ. ಕೇಂದ್ರ ನೀಡುವ ಹಣ ಯಾವುದಕ್ಕೂ ಸಾಕಾಗುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಣವನ್ನು ಯಾವ ರೈತರೂ ತೆಗೆದುಕೊಳ್ಳಬಾರದು ಎಂದು ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುವುದು. ನಮಗೆ ಪೂರ್ಣ ಸಾಲ ಮನ್ನಾ ಆಗಬೇಕು ಎಂದರು.

ಸಮಿತಿಯ ಪ್ರಮುಖ ಪದಾಧಿಕಾರಿಗಳಾದ ಬಾಬಾಜಾನ್ ಮುಧೋಳ, ಎ.ಎನ್‌. ಖಾಜಿ, ರಮೇಶ ಭೋಸ್ಲೆ, ಸೈಯದ್‌ ಮುಲ್ಲಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !