ಸಂವಿಧಾನದ ಪ್ರತಿ ಸುಟ್ಟವರ ಬಂಧನಕ್ಕೆ ಆಗ್ರಹ

7
ವಿವಿಧ ಸಂಘಟನೆಗಳಿಂದ ಪ್ರತಿಭಟನಾ ರ‍್ಯಾಲಿ; ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಸಂವಿಧಾನದ ಪ್ರತಿ ಸುಟ್ಟವರ ಬಂಧನಕ್ಕೆ ಆಗ್ರಹ

Published:
Updated:
Deccan Herald

ಹುಬ್ಬಳ್ಳಿ: ದೆಹಲಿಯ ಜಂತರ್‌ಮಂತರ್‌ನಲ್ಲಿ ಸಂವಿಧಾನದ ಪ್ರತಿ ಸುಟ್ಟವರನ್ನು ದೇಶದ್ರೋಹ ಆರೋಪದಡಿ ಕೂಡಲೇ ಬಂಧಿಸಬೇಕು ಹಾಗೂ ಬೌದ್ಧ ವಿಹಾರ ಕೇಂದ್ರವಾಗಿದ್ದ ಅಯೋಧ್ಯೆಯನ್ನು ಬೌದ್ಧರಿಗೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿ ಸಮತಾ ಸೈನಿಕ ದಳ, ಭಾರತೀಯ ಮೂಲ ನಿವಾಸಿಗಳ ಒಕ್ಕೂಟ ಹಾಗೂ ಎಸ್‌ಡಿಪಿಐ ವತಿಯಿಂದ ಶನಿವಾರ ಹುಬ್ಬಳ್ಳಿಯಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಸ್ಟೇಷನ್ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ದಲಿತ ಮುಖಂಡ ಲಕ್ಷ್ಮಣ ಸಿ. ಬಕ್ಕಾಯಿ, ‘ಬಿಹಾರದ ರಣವೀರ್ ಸೇನೆ ಮತ್ತು ಭೂಮಿಹಾರ್ ಸಂಘಟನೆಯವರು ಮೀಸಲಾತಿ ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ, ಸಂವಿಧಾನದ ಪ್ರತಿಗಳನ್ನು ಸುಟ್ಟಿದ್ದಾರೆ. ಆ ಮೂಲಕ, ದೇಶದ ಪವಿತ್ರ ಗ್ರಂಥಕ್ಕೆ ಅಪಮಾನ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದ ರಾಜಧಾನಿಯಲ್ಲಿ ಇಂತಹದ್ದೊಂದು ಕೃತ್ಯ ನಡೆದಿದ್ದರೂ, ಅಲ್ಲಿನ ಸರ್ಕಾರ ಆರೋಪಿಗಳನ್ನು ಇದುವರೆಗೆ ಬಂಧಿಸಿಲ್ಲ. ದಲಿತ ಪರ ಎಂದು ತೋರಿಸಿಕೊಳ್ಳುವ ಪ್ರಧಾನಿ ಮೋದಿ, ತಾವು ಪ್ರಧಾನಿ ಹುದ್ದೆಗೇರಲು ಕಾರಣವಾದ ಸಂವಿಧಾನದ ಪ್ರತಿ ಸುಟ್ಟವರ ವಿರುದ್ಧ ಮೌನ ತಾಳಿದ್ದಾರೆ. ಆ ಮೂಲಕ, ತಮ್ಮ ದಲಿತ ವಿರೋಧಿ ನಿಲುವು ಪ್ರದರ್ಶಿಸಿದ್ದಾರೆ’ ಎಂದು ಟೀಕಿಸಿದರು.

ಸಮತಾ ಸೈನಿಕ ದಳದ ಪಿತಾಂಬ್ರಪ್ಪ ಬೀಳಾರ ಮಾತನಾಡಿ, ‘ಅಯೋಧ್ಯೆಯ ಬಾಬ್ರಿ ಮಸೀದಿ ಸ್ಥಳದಲ್ಲಿ, ಹಿಂದೆ ರಾಮನ ದೇವಾಲಯವಿತ್ತು ಎಂದು ಹಿಂದೂ ಮಹಾಸಭಾದವರು ಹೇಳುತ್ತಿದ್ದಾರೆ. ಆದರೆ, ದೇವಾಲಯ ಮತ್ತು ಮಸೀದಿಗೂ ಪೂರ್ವದಲ್ಲಿ ಅಲ್ಲಿ ಬೌದ್ಧ ವಿಹಾರವಿತ್ತು ಎಂದು ಅಧ್ಯಯನಗಳು ತಿಳಿಸಿವೆ’ ಎಂದು ಹೇಳಿದರು.

‘ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ಬಾವಾರಿ ಎಂಬ ಬೌದ್ಧ ಬಿಕ್ಕು ಅಯೋಧ್ಯೆಯಲ್ಲಿ ಇದ್ದ. ಆತನ ಸ್ಮರಣಾರ್ಥವಾಗಿ ಅಲ್ಲಿ ಬೌದ್ಧ ವಿಹಾರ ನಿರ್ಮಿಸಲಾಗಿತ್ತು. ಮೌರ್ಯ ಸಾಮ್ರಾಜ್ಯದ ಪತನದ ನಂತರ ಅಸ್ತಿತ್ವಕ್ಕೆ ಬಂದ ಹಿಂದೂ ಸಾಮ್ರಾಟರು ಅಲ್ಲಿ ರಾಮನ ದೇವಾಲಯ ನಿರ್ಮಿಸಿದರು. ನಂತರ ದಾಳಿ ನಡೆಸಿದ ಮುಸ್ಲಿಮರು ಅಲ್ಲಿ ಮಸೀದಿ ನಿರ್ಮಿಸಿದ್ದಾರೆ. ಹಾಗಾಗಿ, ಆ ಸ್ಥಳದ ಮೂಲ ಮಾಲೀಕರು ಬೌದ್ಧರಾಗಿದ್ದಾರೆ. ಹಾಗಾಗಿ, ಕೇಂದ್ರ ಸರ್ಕಾರ ಸ್ಥಳದಲ್ಲಿ ತಜ್ಞರಿಂದ ಉತ್ಖನನ ನಡೆಸಿ, ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಬಳಿಕ, ಮಿನಿ ವಿಧಾನಸೌಧಕ್ಕೆ ಬಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶಶಿಧರ ಮಾಡ್ಯಾಳ ಮೂಲಕ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !