ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರಿಂದ ಪ್ರತಿಭಟನೆ

ವೇತನ ಹೆಚ್ಚಳ ಸೇರಿ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
Last Updated 24 ಜನವರಿ 2023, 14:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾರಿಗೆ ನೌಕರರ ವೇತನ ಹೆಚ್ಚಳ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಗೋಕುಲ ರಸ್ತೆಯ ಸಾರಿಗೆ ಇಲಾಖೆಯ ಕೇಂದ್ರೀಯ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೌಕರರು, ನಾಲ್ಕು ಸಾರಿಗೆ ನಿಗಮಗಳಲ್ಲಿ 1.07 ಲಕ್ಷ ನೌಕರರಿದ್ದು, ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಬೇಕು ಎನ್ನುವ ಕೈಗಾರಿಕಾ ಒಪ್ಪಂದವಿದೆ. ಕಾರ್ಮಿಕ ಸಂಘಟನೆ ಮತ್ತು ಆಡಳಿತ ವರ್ಗ ಪರಸ್ಪರ ಚರ್ಚಿಸಿ ವೇತನ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳುತ್ತಿದ್ದವು. ಆದರೆ, ತಾಂತ್ರಿಕ ಕಾರಣ ನೀಡಿ ಕಳೆದ ವರ್ಷ ವೇತನ ಪರಿಷ್ಕರಣೆ ಮಾಡದೆ ಮುಂದೂಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೇತನ ಹೆಚ್ಚಳಕ್ಕಾಗಿ ಸಾಕಷ್ಟು ಬಾರಿ ಪ್ರತಿಭಟನೆ, ಧರಣಿ ನಡೆಸಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಇಂದು ರಾಜ್ಯದಾದ್ಯಂತ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ. ಬೇಡಿಕೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬೇಡಿಕೆಗಳೇನು? ಚಾಲಕ, ನಿರ್ವಾಹಕ, ತಾಂತ್ರಿಕ, ಆಡಳಿತ ಸಿಬ್ಬಂದಿ ಸೇರಿದಂತೆ ಎಲ್ಲ ವಿಭಾಗದಲ್ಲಿನ ನೌಕರರ ವೇತನ ಮತ್ತು ಪ್ರತ್ಯೇಕ ಭತ್ಯೆಯನ್ನು ಐದು ಪಟ್ಟು ಹೆಚ್ಚಿಸಬೇಕು. ಇಎಸ್‌ಐ ಮಾದರಿಯಲ್ಲಿ ನೌಕರರ ಮೂಲ ವೇತನದಿಂದ ವತಿಗೆ ಸಂಗ್ರಹಿಸಿ, ಪ್ರತ್ಯೇಕ ಟ್ರಸ್ಟ್‌ ಮೂಲಕ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕು. ನಾಲ್ಕು ಕೇಂದ್ರಗಳಲ್ಲಿ ಸಂಸ್ಥೆಯ ಆಸ್ಪತ್ರೆ ನಿರ್ಮಿಸಬೇಕು. ಪ್ರತಿ ತಿಂಗಳು ಸಿಬ್ಬಂದಿಗೆ ಹೊರರೋಗಿ ಚಿಕಿತ್ಸಾ ವೆಚ್ಚವೆಂದು ₹2 ಸಾವಿರ ನೀಡಬೇಕು. ಅಮಾನತು ಮಾಡಿದ ಸಿಬ್ಬಂದಿಯನ್ನು ಷರತ್ತುಗಳಿಲ್ಲದೆ ಮರು ನೇಮಕ ಮಾಡಿಕೊಳ್ಳಬೇಕು. ಎಲ್ಲ ಸಿಬ್ಬಂದಿಗೂ ಪಾಳಿ ವ್ಯವಸ್ಥೆ ಜಾರಿ ಮಾಡಿ, ಕ್ಯಾಂಟೀನ್‌ ಸವಲತ್ತು ಒದಗಿಸಬೇಕು. ಕೆಲವು ಮಾರ್ಗಗಳಲ್ಲಿ ಖಾಸಗಿಯವರಿಗೆ ಬಸ್‌ ಓಡಿಸಲು ಅನುಮತಿ ನೀಡುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಕೆಎಸ್‌ಆರ್‌ಟಿಸಿ ಫೆಡರೇಷನ್‌ ರಾಜ್ಯ ಕಾರ್ಯಧ್ಯಕ್ಷ ಆರ್‌.ಎಫ್‌. ಕವಳಿಕಾಯಿ, ಜಿ. ಪ್ರಕಾಶಮೂರ್ತಿ, ಎಸ್‌.ಆರ್‌. ಅದರಗುಂಚಿ, ಜಿ.ಸಿ. ಕಮಲದಿನ್ನಿ, ಎಂ.ವಿ. ಭಗವತಿ, ಸಾದಿಕ್‌ ದಳವಾಯಿ, ಡಿ.ಎಂ. ಮರಿಸಿದ್ದಣ್ಣವರ, ಟಿ.ಎನ್‌, ಹಿರೇಮಠ, ಬಿ.ಡಿ. ತಿಮ್ಮನಗೌಡರ. ಪ್ರಕಾಶ ಬಿ., ಜೆ. ರಾಜಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT