ಶನಿವಾರ, ಏಪ್ರಿಲ್ 4, 2020
19 °C

ಬಿಲ್ ಪಾವತಿಗೆ ರೈಲ್ವೆ ಗುತ್ತಿಗೆದಾರರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ, ಇಂಡಿಯನ್ ರೈಲ್ವೆ ಇನ್ಪಾಸ್ಟ್ರಕ್ಚರ್ ಪ್ರೊವೈಡರ್ಸ್‌ ಅಸೋಸಿಯೇಷನ್ ಸದಸ್ಯರು ಹುಬ್ಬಳ್ಳಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ರೈಲ್ವೆ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದ ಸದಸ್ಯರು, ನಗರದ ಕೇಶ್ವಾಪುರದಲ್ಲಿರುವ ಡಿಆರ್‌ಎಂ ಕಚೇರಿ ಮತ್ತು ಗದಗ ರಸ್ತೆಯಲ್ಲಿರುವ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಬಳಿಕ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ನೈರುತ್ಯ ರೈಲ್ವೆ ವಲಯದ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ.ಎಸ್.ವಿ ಪ್ರಸಾದ್, ‘ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ ನಡೆದಿರುವ ಕಾಮಗಾರಿಗಳ ಬಾಕಿ ಬಿಲ್ ₹50 ಸಾವಿರ ಕೋಟಿ ಇದೆ. ತಮ್ಮ ಸ್ವಂತ ಹಣದಿಂದ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿಲ್ ಪಾವತಿಯಾಗಿಲ್ಲ. ಇದರಿಂದಾಗಿ, ಅವರ ಕುಟುಂಬ ನಿರ್ವಹಣೆ ಸವಾಲಾಗಿದೆ’ ಎಂದರು.

‘ಬಾಕಿ ಬಿಲ್ ಬಗ್ಗೆ ಕೇಳಿದರೆ, ಅಧಿಕಾರಿಗಳು ಅನುದಾನ ಇಲ್ಲ ಎಂದು ಹೇಳುತ್ತಾರೆ. ಜತೆಗೆ, ಗುತ್ತಿಗೆದಾರರೊಂದಿಗೆ ಸರಿಯಾಗಿ ನಡೆದುಕೊಳ್ಳುವುದಿಲ್ಲ. ಬಿಲ್ ಪಾವತಿಗಾಗಿ ಇದುವರೆಗೆ ಆರೇಳು ಬಾರಿ ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ. ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಅಂತಿಮವಾಗಿ ಪ್ರತಿಭಟನೆಗೆ ಇಳಿದಿದ್ದೇವೆ’ ಎಂದು ಹೇಳಿದರು.

ನೈರುತ್ಯ ರೈಲ್ವೆಯ ಉಪ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಹಾಗೂ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ ಅವರಿಗೆ ಅಸೋಸಿಯೇಷನ್ ಸದಸ್ಯರು ಮನವಿ ಸಲ್ಲಿಸಿದರು. ರೈಲ್ವೆ ಗುತ್ತಿಗೆದಾರರಾದ ರಮಣ ಮೂರ್ತಿ, ಸತ್ಯನಾರಾಯಣ, ಸೂರಜ್ ಮುಂತಾದವರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)