ಸೋಮವಾರ, ನವೆಂಬರ್ 23, 2020
22 °C
ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ನಿವೇಶನ ಬೆಲೆ ಹೆಚ್ಚಳ

ಆಪ್‌ನಿಂದ 7ರಂದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ನಿವೇಶನಗಳ ಬೆಲೆ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷ (ಆಪ್‌), ಇದನ್ನು ವಿರೋಧಿಸಲು ನ. 7ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡದ ಕೆ.ಐ.ಎ.ಡಿ.ಬಿ. ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ದೊಡ್ಡ ಉದ್ಯಮಗಳನ್ನು ಆರಂಭಿಸುವವರಿಗೆ ಹೆಬ್ಬಾಗಿಲು ತೆರೆಯುತ್ತಿರುವ ಸರ್ಕಾರ ಸಣ್ಣ ಉದ್ಯಮಿಗಳ ಮೇಲೆ ಸವಾರಿ ಮಾಡುತ್ತಿದೆ. ಮೊದಲು ಒಂದು ಎಕರೆ ಕೈಗಾರಿಕಾ ಭೂಮಿಗೆ ₹40 ಲಕ್ಷ ಇದ್ದ ಬೆಲೆಯನ್ನು ₹70ಲಕ್ಷಕ್ಕೆ ಮತ್ತು ₹61ಲಕ್ಷದಷ್ಟಿದ್ದ ಬೆಲೆಯನ್ನು ₹98 ಲಕ್ಷಕ್ಕೆ ಹೆಚ್ಚಳ ಮಾಡಿ ಪರೋಕ್ಷವಾಗಿ ಸಣ್ಣ ಕೈಗಾರಿಕೆಗಳ ಆರಂಭ ನಿಲ್ಲಿಸಿ ಎಂದು ಹೇಳುತ್ತಿದೆ. ಯಾವ ಮಾನದಂಡದ ಆಧಾರದ ಮೇಲೆ ಇಷ್ಟೊಂದು ಬೆಲೆ ಏರಿಕೆ ಮಾಡಿದೆ’ ಎಂದು ಪ್ರಶ್ನಿಸಿದರು.

‘ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಕುಡಿಯುವ ನೀರು, ರಸ್ತೆ, ಉದ್ಯೋಗಿಗಳು ಹೋಗಿ ಬರಲು ಸಾರಿಗೆ ಸೌಲಭ್ಯ, ಕಸ ನಿರ್ವಹಣೆ ಸೇರಿದಂತೆ ಅನೇಕ ಮೂಲಸೌಲಭ್ಯಗಳ ಕೊರತೆಯಿವೆ. ಸಣ್ಣ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಏಕಗವಾಕ್ಷಿ ಪದ್ಧತಿ ಜಾರಿಗೆ ತರಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳುತ್ತಿದ್ದಾರೆ. ವಾಸ್ತವದಲ್ಲಿ ಇದು ಜಾರಿಯಾಗಿಲ್ಲ, ಕೈಗಾರಿಕಾ ಪ್ರದೇಶಗಳು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹಸ್ತಾಂತರವಾಗದ ಕಾರಣ ಅಭಿವೃದ್ಧಿಯೂ ಆಗಿಲ್ಲ’ ಎಂದರು.

ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ವಿಕಾಸ ಸೊಪ್ಪಿನ ಮಾತನಾಡಿ ‘ಭೂಮಿ ದರವನ್ನು ವಾರ್ಷಿಕವಾಗಿ ಶೇ 10ರಿಂದ 15ರಷ್ಟು ಮಾತ್ರ ಹೆಚ್ಚಿಸಲು ಅವಕಾಶವಿದೆ. ಇಲ್ಲಿ ಯಾವ ನೀತಿ, ನಿಯಮವೂ ಇಲ್ಲದೆ ಏಕಾಏಕಿ ಭೂಮಿ ಬೆಲೆ ಹೆಚ್ಚಳ ಮಾಡಿದ್ದು ಸರಿಯಲ್ಲ. ಇದರ ಹಿಂದೆ ಭೂ ಮಾಫಿಯಾ ಕೆಲಸ ಮಾಡುತ್ತಿದೆ. ಗಾಮನಗಟ್ಟಿಯಲ್ಲಿ ಭೂಮಿ ಬೆಲೆ ಹೆಚ್ಚಿಸಿ ಅಕ್ಕಪಕ್ಕದ ಪ್ರದೇಶಗಳ ಭೂಮಿಗೆ ‘ಬೆಲೆ’ ತಂದುಕೊಡುವ ಹುನ್ನಾರವೂ ಇದರಲ್ಲಿ ಅಡಗಿದೆ’ ಎಂದು ಆರೋಪಿಸಿದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿಕುಮಾರ್ ಸುಳ್ಳದ, ನವೀನ ಸಿಂಗ್‌ ರಜಪೂತ್‌, ಶಿವಕಿರಣ ಅಗಡಿ, ಅನಂತಕುಮಾರ ಭಾರತೀಯ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.