ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹ

ಮ್ಯಾದಾರ ಓಣಿ ನಾಗರಿಕರ ಹೋರಾಟ ಸಮಿತಿ ಪ್ರತಿಭಟನೆ
Last Updated 22 ಆಗಸ್ಟ್ 2019, 9:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇತ್ತೀಚೆಗೆ ನಗರದಲ್ಲಿ ಸುರಿದ ಭಾರೀ ಮಳೆಗೆ ಮ್ಯಾದಾರ ಓಣಿಯಲ್ಲಿ ನಾಲೆ ನೀರು ನುಗ್ಗಿ ಹಾನಿಗೊಂಡ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಮ್ಯಾದಾರ ಓಣಿ ನಾಗರಿಕರ ಹೋರಾಟ ಸಮಿತಿ ಸದಸ್ಯರು ಎಸ್‌ಯುಸಿಐ (ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್‌ ಇಂಡಿಯಾ) ನೇತೃತ್ವದಲ್ಲಿ ಗುರುವಾರ ಪಾಲಿಕೆಯ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಳೆಯಿಂದಾಗಿ ಓಣಿಯ ಎಲ್ಲಾ ಮನೆಗಳು ಹಾಗೂ ಒಳಗಿದ್ದ ಸಾಮಾನುಗಳು ಸಂಪೂರ್ಣ ಹಾನಿಗೊಂಡಿವೆ. ಆದರೂ, ಇದುವರೆಗೆ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಅಳಲು ಆಲಿಸಿಲ್ಲ. ಸಿಗಬೇಕಾದ ಸೂಕ್ತ ಪರಿಹಾರ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಓಣಿಯಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳೇ ಇದ್ದೇವೆ. ಮಳೆಯಿಂದ ತುಂಬಿ ಹರಿದ ನಾಲೆ ನೀರಿಗೆ ಮನೆಯಷ್ಟೇ ಅಲ್ಲ, ನಮ್ಮ ಬದುಕು ಸಹ ಕೊಚ್ಚಿ ಹೋಗಿದೆ. ಇದರಿಂದಾಗಿ, ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.

ಗಬ್ಬುನಾತ ಬೀರುವ ನಾಲೆ ನೀರಿನಿಂದಾಗಿ ಮಕ್ಕಳು ಸೇರಿದಂತೆ ಓಣಿಯಲ್ಲಿರುವ ಬಹುತೇಕ ಮಂದಿ ಜ್ವರ, ಕೆಮ್ಮಿನಂತಹ ರೋಗಗಳಿಂದ ಬಳಲುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಾಲಿಕೆ ಅಧಿಕಾರಿಗಳು ಹಾನಿಗೊಂಡ ಮನೆ ಮತ್ತು ಅಂಗಡಿಗಳಿಗೆ ಸೂಕ್ತ ಪರಿಹಾರ ನೀಡಬೇಕು. ನಾಲೆಯ ತಡೆಗೋಡೆಯನ್ನು ಎತ್ತರಿಸಿ, ಹೂಳು ತೆಗೆಯಬೇಕು. ನಾಲೆ ನೀರು ವಸತಿ ಪ್ರದೇಶಗಳಿಗೆ ನುಗ್ಗದಂತೆ ಶಾಶ್ವತ ಪರಿಹಾರ ಮಾಡಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಫಾಗಿಂಗ್ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಪಾಲಿಕೆಯ ಹಿರಿಯ ಅಧಿಕಾರಿಗಳು, ಮ್ಯಾದಾರ ಓಣಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಿ, ಅಗತ್ಯ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ, ಸಮಿತಿ ಸದಸ್ಯರು ಪ್ರತಿಭಟನೆ ನಿಲ್ಲಿಸಿದರು.

ಮ್ಯಾದಾರ ಓಣಿ ನಾಗರಿಕ ಹೋರಾಟ ಸಮಿತಿಯ ಫೈರೋಜ್ ಮದ್ದೀನ್, ನೂರ್ ಅಹ್ಮದ್, ಪಾರ್ವತಿ, ಹಸನಬಿ, ಹುಸೇನ್ ಸಾಬ್ ಮೊಮೀನ್, ಅಬ್ದುಲ್ ರೆಹಮಾನ್ ಸೌದಾಗರ್ ಹಾಗೂ ಎಸ್‌ಯುಸಿಐನ ಗಂಗಾಧರ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT