ಮೊದಲು ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲಿ: ಶೆಟ್ಟರ್

7

ಮೊದಲು ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲಿ: ಶೆಟ್ಟರ್

Published:
Updated:

ಹುಬ್ಬಳ್ಳಿ: ‘ರಾಜ್ಯ ಸರ್ಕಾರ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವ ಬದಲು, ಮೂಲಸೌಕರ್ಯ ಇಲ್ಲದ ಸರ್ಕಾರಿ ಶಾಲೆಗಳನ್ನು ಬಲಪಡಿಸಲಿ’ ಎಂದು ಶಾಸಕ ಜಗದೀಶ ಶೆಟ್ಟರ್ ಸಲಹೆ ನೀಡಿದರು.

ಹುಬ್ಬಳ್ಳಿಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂದಿನ ವ್ಯಾವಹಾರಿಕ ಜಗತ್ತಿಗೆ ಇಂಗ್ಲಿಷ್ ಅನಿವಾರ್ಯವಾಗಿದೆ. ಹಾಗೆಂದ ಮಾತ್ರಕ್ಕೆ ಕನ್ನಡ ಕಡೆಗಣಿಸಬಾರದು. ಕನ್ನಡದ ಜತೆಗೆ, ಇಂಗ್ಲಿಷ್ ಸಹ ಕಲಿಸಬೇಕು’ ಎಂದರು.

‘ಭಾಷೆ ಮತ್ತು ಶಿಕ್ಷಣ ಮಾಧ್ಯಮದ ವಿಷಯದ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭಾವಾವೇಶದಿಂದ ಮಾತನಾಡಿ, ಕ್ಷಣ ಮಾತ್ರಕ್ಕೆ ಹೀರೋ ಆಗಬಾರದು. ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಶಿಕ್ಷಕ ಹುದ್ದೆಗಳು ಖಾಲಿ ಇವೆ. ಕೊಠಡಿ ಮತ್ತು ಶೌಚಾಲಯಗಳಿಲ್ಲದ ಎಷ್ಟೊ ಶಾಲೆಗಳಿವೆ. ಮೊದಲು ಆ ಸಮಸ್ಯೆಗಳನ್ನು ಪರಿಹರಿಸಲಿ’ ಎಂದು ಹೇಳಿದರು.

ಸುಳ್ಳು ಹೇಳುತ್ತಿದ್ದಾರೆ:

‘ಮಹದಾಯಿ ತೀರ್ಪಿನ ಅನುಷ್ಠಾನಕ್ಕೆ ಮುಂದಾಗದ ಕುಮಾರಸ್ವಾಮಿ, ತೀರ್ಪಿನ ವಿರುದ್ಧ ಗೋವಾ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಗೋವಾ ಸಲ್ಲಿಸಿಯೇ ಇಲ್ಲ. ಬದಲಿಗೆ ಕರ್ನಾಟಕವೇ ಮೇಲ್ಮನವಿ ಸಲ್ಲಿಸಿದೆ. ಮಹದಾಯಿ ನೀರು ಬಳಸುವುದಕ್ಕೆ ಸಂಬಂಧಿಸಿದಂತೆ, ಕೂಡಲೇ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

ಸಿಐಡಿ ತನಿಖೆ ಮಾಡಲಿ:

‘ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರ ಕಚೇರಿ ಟೈಪಿಸ್ಟ್ ಮೋಹನ್ ಅವರ ಬಳಿ ₹25.76 ಲಕ್ಷ ಸಿಕ್ಕ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು.ಕಚೇರಿ ಸಿಬ್ಬಂದಿ ತಮಗೇ ಗೊತ್ತೇ ಇಲ್ಲ ಎಂಬ ಸಚಿವರ ಹೇಳಿಕೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆ ಅಕ್ರಮದಲ್ಲಿ ಅವರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ, ಆದ್ದರಿಂದ  ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಕರಣದ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ‘ಚಿಲ್ಲರೆ ಹಣ’ ಎಂದು ಹೇಳಿಕೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ನವರಿಗೆ ಲಕ್ಷಗಳು ಲೆಕ್ಕಕ್ಕಿಲ್ಲ. ಅವರದೇನಿದ್ದರೂ ಕೋಟಿಗಳ ಲೆಕ್ಕದ ಭ್ರಷ್ಟಾಚಾರ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !