ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಾಯ ಒಂದು ಉಪಯೋಗ ಹಲವು

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 11 ನವೆಂಬರ್ 2019, 10:01 IST
ಅಕ್ಷರ ಗಾತ್ರ

ಅವಳಿನಗರದ ಮಧ್ಯ ಪ್ರತಿ ದಿನ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪ್ರಯಾಣ ಮಾಡುತ್ತಾರೆ. ಸದ್ಯ ಹುಬ್ಬಳ್ಳಿ– ಧಾರವಾಡದ ಮಧ್ಯೆ ಚಿಗರಿ ಬಸ್‌ (ಬಿಆರ್‌ಟಿಎಸ್) ಸೌಲಭ್ಯವಿದೆ. ಪ್ರಾಯೋಗಿಕವಾಗಿಸೇವೆ ಲಭ್ಯವಿದ್ದರೂ ಒಂದು ಹಂತದಲ್ಲಿ ಈಗಾಗಲೇ ಜನರ ಮನ ಗೆಲ್ಲುವಲ್ಲಿ ಇದು ಯಶಸ್ವಿಯಾಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಅದನ್ನು ಹೊರತುಪಡಿಸಿ ಖಾಸಗಿ ಬಸ್‌ ಸೇವೆಯೂ ಲಭ್ಯವಿದೆ. ಎನ್‌ಡಬ್ಲ್ಯುಕೆಎಸ್‌ಆಟಿಸಿ ಬಸ್‌ನಲ್ಲಿಯೂ ಅವಳಿನಗರದ ಮಧ್ಯೆ ಸಂಚರಿಸಬಹುದು. ಇವಿಷ್ಟು ಅಧಿಕೃತ ಸಾರಿಗೆಯಾದರೆ ಅನಧಿಕೃತ ಸಾರಿಗೆಯೂ ಇದೆ. ಟೆಂಪೊ, ಕ್ರೂಸರ್‌ ಮುಂತಾದ ವಾಹನಗಳಲ್ಲಿ ಸಂಚರಿಸುವವರೂ ಇದ್ದಾರೆ.

ಅವಳಿನಗರದ ಮಧ್ಯೆ ಪ್ರತಿ ದಿನ ಸಂಚರಿಸುವವರು ಸಂಖ್ಯೆ ಸುಮಾರು ಎರಡೂವರೆ ಲಕ್ಷ ಇರಬಹುದು ಎಂಬುದು ಅಂದಾಜು. ಇವರಲ್ಲಿ ಮುಕ್ಕಾಲು ಭಾಗದಷ್ಟು ಜನರು ಸಾರ್ವಜನಿಕರ ಸಾರಿಗೆಯನ್ನೇ ಅವಲಂಬಿಸಿದ್ದಾರೆ ಎಂಬುದು ಸಮಾಧಾನದ ಸಂಗತಿ. ಸಾರ್ವಜನಿಕ ಸಾರಿಗೆ ಎಂಬ ಒಂದು ಉಪಾಯ ಮಾಡಿದರೆ ಹಲವಾರು ಉಪಯೋಗಗಳನ್ನು ಪಡೆದುಕೊಳ್ಳಬಹುದು.

ವೈಯಕ್ತಿಕ ಸಾರಿಗೆ ಬಳಸಿದರೆ ಹೆಚ್ಚಿನ ಮೊತ್ತ ಖರ್ಚು ಮಾಡಬೇಕಾಗುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಕಡಿಮೆ ದರಕ್ಕೆ ಪ್ರಯಾಣ ಮಾಡಬಹುದು. ಕಾರೊಂದರಲ್ಲಿ 20 ಕಿ.ಮೀ ಕ್ರಮಿಸಲು ಕನಿಷ್ಠ ₹100 ರೂಪಾಯಿಯ ಇಂಧನ ಬೇಕಾಗುತ್ತದೆ. ಅದೇ ಹಣಕ್ಕೆ ಮೂರು ಬಾರಿ ಅವಳಿನಗರದ ಮಧ್ಯೆ ಸಂಚರಿಸಬಹುದು.

ಜೇಬಿಗೆ ಕತ್ತರಿ ಹಾಕದ ಈ ಸಾರಿಗೆಯಿಂದ ಇನ್ನೂ ಹಲವಾರು ಪ್ರಯೋಜನಗಳಿವೆ. ಇದೊಂದು ಸುರಕ್ಷಿತ ಸಾರಿಗೆ ವಿಧಾನ ಎಂದು ಗುರುತಿಸಲಾಗುತ್ತದೆ. ಬಿಆರ್‌ಟಿಎಸ್ ಆರಂಭವಾದ ನಂತರ ಸುರಕ್ಷತೆ ಇನ್ನಷ್ಟು ಹೆಚ್ಚಾಗಿದೆ. ಪ್ರತ್ಯೇಕ ಲೇನ್‌ನಲ್ಲಿ ಬಸ್‌ಗಳು ಸಂಚರಿಸುವುದರಿಂದ ಅಪಘಾತವಾಗುವ ಸಾಧ್ಯತೆತೀರ ಕಡಿಮೆ ಇದೆ. ಆದ್ದರಿಂದ ನಿರಾತಂಕವಾಗಿ ಪ್ರಯಾಣ ಮಾಡಬಹುದು.

ಕಾರು, ದ್ವಿಚಕ್ರ ವಾಹನಗಳಲ್ಲಿ ಪ್ರಯಾಣ ಮಾಡುವಾಗ ಅಪಘಾತದ ಸಾಧ್ಯತೆ ಹೆಚ್ಚಿರುತ್ತದೆ. ರಸ್ತೆಗಳು ಸಹ ದುಸ್ಥಿತಿಯಲ್ಲಿರುವುದರಿಂದ ಗುರಿ ತಲುಪುವುದು ಸಾಹಸವೇ ಸರಿ. ಕಡಿಮೆ ಅವಧಿಯಲ್ಲಿ ದೂರವನ್ನು ಕ್ರಮಿಸಬಹುದು. ಬಿಆರ್ಟಿಎಸ್‌ ಬಸ್‌ಗಳು 30–35 ನಿಮಿಷಗಳಲ್ಲಿ ಹುಬ್ಬಳ್ಳಿಯಿಂದ ಧಾರವಾಡ ತಲುಪುತ್ತಿವೆ. ಬೆಳಿಗ್ಗೆ ಕೆಲಸ ಅವಧಿ ಹಾಗೂ ಸಂಜೆ ಪ್ರಯಾಣದ ಅವಧಿ ಕೊಂಚ ಜಾಸ್ತಿ. ಆದರೆ ಇತರ ಸಾರಿಗೆ ವಿಧಾನಗಳಿಗೆ ಹೋಲಿಸಿದರೆ ಸಮಯ ತೀರ ಕಡಿಮೆ ಎಂದು ಹೇಳಬಹುದು.

ಪರಿಸರಕ್ಕೂ ಕೊಡುಗೆ

ಮಾಲಿನ್ಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಹವಾಮಾನ ವೈಪರೀತ್ಯ ಜಾಗತಿಕ ಸವಾಲಾಗಿ ಎದುರು ನಿಂತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಶ್ವಮಟ್ಟದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ವಾಹನಗಳು ಉಗುಳುವ ಹೊಗೆ ಪರಿಸರ ಮಾಲಿನ್ಯದ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣ. ವೈಯಕ್ತಿಕ ಸಾರಿಗೆ ಬಳಸಿದರೆ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತದೆ. ಸಾರ್ವಜನಿಕರ ಸಾರಿಗೆಯಲ್ಲಿ ಇದನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಈ ಸಾರಿಗೆ ಬಳಸುವುದರಿಂದ ಪರಿಸರಕ್ಕೂ ತಮ್ಮ ಕೈಲಾದ ಕೊಡುಗೆ ಕೊಟ್ಟಿದ್ದೇವೆ ಎಂದು ಸಮಾಧಾನಪಟ್ಟುಕೊಳ್ಳಬಹುದು.

ವಾಹನದ ದಟ್ಟಣೆ ನಗರಗಳು ಎದುರಿಸುತ್ತಿರುವ ಇನ್ನೊಂದು ದೊಡ್ಡ ಸಮಸ್ಯೆಯಾಗಿದೆ. ಸ್ಥಿತಿವಂತರು ಎರಡು ಮೂರು ಕಾರುಗಳನ್ನು ಇಟ್ಟುಕೊಂಡು ಬಳಸುತ್ತಾರೆ. ಹೀಗೆ ಮಿತಿ ಮೀರಿದ ಸಂಖ್ಯೆಯಲ್ಲಿ ಕಾರು– ಬೈಕ್‌ಗಳು ರಸ್ತೆಗಿಳಿಯುತ್ತಿರುವುದೇ ಸಂಚಾರ ದಟ್ಟಣೆ ಹೆಚ್ಚಾಗಲು ಪ್ರಮುಖ ಕಾರಣ. ಬಸ್‌ ಸಂಚಾರ ವಾಹನ ದಟ್ಟಣೆ ತಗ್ಗಿಸಲು ಕಾರಣವಾಗುತ್ತದೆ.

ಸಮಸ್ಯೆಯೂ ಇದೆ

ಸಾರ್ವಜನಿಕರ ಸಾರಿಗೆ ಜನಪ್ರಿಯ, ಸುರಕ್ಷಿತ, ಕಡಿಮೆ ದರದ ಸಾರಿಗೆಯಾದರೂ ಹಲವಾರು ಸಮಸ್ಯೆಗಳನ್ನು ಪ್ರಯಾಣಿಕರು ಎದುರಿಸಬೇಕಾಗಿದೆ. ಈಗಾಗಲೇ ಭಾರಿ ಸದ್ದು ಮಾಡಿರುವ ಬಿಆರ್‌ಟಿಎಸ್‌ ಬಗ್ಗೆ ಮಾತನಾಡುವುದಾದರೆ, ಯಾವುದೇ ಪ್ರಯಾಣಿಕರನ್ನು ಕೇಳಿದರೂ ಇದೊಂದು ಉತ್ತಮ ಸಾರಿಗೆ ವ್ಯವಸ್ಥೆ ಎಂದು ಮೊದಲ ಅಭಿಪ್ರಾಯ ತಿಳಿಸುತ್ತಾರೆ. ಆದರೆ ಅಲ್ಲಿರುವ ಸಮಸ್ಯೆಗಳ ಬಗ್ಗೆಯೂ ಅವರು ಗಮನ ಸೆಳೆಯುತ್ತಾರೆ.

ಸಾಮಾನ್ಯವಾಗಿ ಕಚೇರಿ ಅವಧಿಯಲ್ಲಿ ಹಾಗೂ ಶಾಲಾ ಕಾಲೇಜುಗಳ ಅವಧಿಯಲ್ಲಿ ಭಾರಿ ಸಂಖ್ಯೆಯ ಪ್ರಯಾಣಿಕರು ಬಿಆರ್‌ಟಿಎಸ್‌ನಲ್ಲಿ ಸಂಚರಿಸುತ್ತಾರೆ. ಇದನ್ನು ಪೀಕ್ ಹವರ್ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಬಸ್‌ಗಳಲ್ಲಿ ದುಪ್ಪಟ್ಟು, ಮೂರುಪಟ್ಟು ಪ್ರಯಾಣಿಕರನ್ನು ತುಂಬುವುದರಿಂದ ಕಷ್ಟದ ಪ್ರಯಾಣ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳು, ಯುವಕರು ನಿಂತು ಪ್ರಯಾಣಿಸಬಹುದು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಬಹಳ ಕಿರಿಕಿರಿ ಅನುಭವಿಸಬೇಕಾಗುತ್ತದೆ.

ಪೀಕ್ ಹವರ್‌ನಲ್ಲಿ ಹೆಚ್ಚು ಬಸ್‌ಗಳನ್ನು ಓಡಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಪ್ರಯಾಣಿಕರು ಹೇಳುತ್ತಾರೆ. ಅಲ್ಲದೆ ಟಿಕೆಟ್‌ ಕೌಂಟರ್‌ನಲ್ಲಿ ನೂಕುನುಗ್ಗಲು ಸಹ ಕೆಲವೊಮ್ಮೆ ಆಗುತ್ತದೆ. ಪರಿಣಾಮ ಸಮಯ ಪೋಲಾಗುತ್ತದೆ. ಅರ್ಜೆಂಟಾಗಿ ಪ್ರಮಾಣಿಸಲು ಬಯಸುವವರು ಪೀಕ್ ಹವರ್‌ಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ.

ಪಾರ್ಕಿಂಗ್ ಇಲ್ಲ

ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗಲು ಬಯಸುವ ಪ್ರಯಾಣಿಕರೊಬ್ಬರು ಗೋಕುಲ ರಸ್ತೆಯ ಕೊನೆಯ ಬಡಾವಣೆಯಿಂದ ಬಿಆರ್‌ಟಿಎಸ್ ಹತ್ತಬೇಕೆಂದರೆ ತ್ರಾಸದಾಯಕ. ಸಿಟಿ ಬಸ್‌ನಲ್ಲಿ ಬಿಆರ್‌ಟಿಎಸ್‌ ಬಸ್‌ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಹೀಗೆ ಮಾಡುವುದಕ್ಕೆ ಬಹಳ ಸಮಯಬೇಕಾಗುತ್ತದೆ. ಸ್ವಂತ ವಾಹನದಲ್ಲಿ ಬಿಆರ್‌ಟಿಎಸ್ ನಿಲ್ದಾಣಕ್ಕೆ ಬಂದು ಬಸ್‌ ಹತ್ತಬೇಕು ಎಂದರೆ ಬಿಆರ್‌ಟಿಎಸ್ ನಿಲ್ದಾಣದ ಅಕ್ಕಪಕ್ಕ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ.

ಸಿಟಿ ಬಸ್ ಗೋಳು

ಸಿಟಿ ಬಸ್‌ ಪ್ರಯಾಣ ಬಹಳ ದುಸ್ತರವಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಕುಳಿತುಕೊಂಡು ಪ್ರಯಾಣಿಸುವುದು ಅಪರೂಪವೇ ಸರಿ. ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸುವುದನ್ನು ಸಹ ಕಾಣಬಹುದು. ಅವಘಡ ಪ್ರಾಣಕ್ಕೆ ಎರವಾಗಬಹುದು. ಸೂಕ್ತ ಬಸ್‌ ಶೆಲ್ಟರ್‌ ವ್ಯವಸ್ಥೆಯೇ ಇಲ್ಲದಿರುವುದರಿಂದ ಬಸ್‌ಗಾಗಿ ಬಿಸಿಲು– ಮಳೆಯಲ್ಲಿಯೇ ಕಾಯಬೇಕಾಗಿದೆ. ಸರಿಯಾದ ಫುಟ್‌ಪಾತ್ ವ್ಯವಸ್ಥೆಯೂ ಇಲ್ಲದಿರುವುದರಿಂದ ರಸ್ತೆಯಲ್ಲೇ ನಿಂತು ಬಸ್‌ ನಿರೀಕ್ಷೆ ಮಾಡಬೇಕು. ವೇಗವಾಗಿ ಬಸ್‌ಗಳು ಸಂಚರಿಸುವುದರಿಂದ ಅಪಘಾತದ ಅಪಾಯವೂ ಇರುತ್ತದೆ. ಹೊಗೆ– ದೂಳು ಕುಡಿಯಬೇಕಾಗುತ್ತದೆ.

ಎಲ್ಲ ಬಡಾವಣೆಗಳಿಗೂ ನಿಯಮಿತವಾಗಿ ಬಸ್‌ ಇಲ್ಲದಿರುವುದು ಪ್ರಮುಖ ಸಮಸ್ಯೆ. ಒಂದು ಬಸ್‌ ಹೋದ ನಂತರ ಅರ್ಧ ಮುಕ್ಕಾಲು ಗಂಟೆ ಕಾಯಬೇಕಾಗುತ್ತದೆ. ಆದ್ದರಿಂದ ಸ್ವಂತ ವಾಹನದಲ್ಲಿಯೇ ಪ್ರಯಾಣಿಸುವುದು ಸೂಕ್ತ ಎಂದು ಪ್ರಯಾಣಿಕರು ನಿರ್ಧಾರ ಮಾಡುತ್ತಾರೆ. ಕನಿಷ್ಠ 10 ನಿಮಿಷಕ್ಕೆ ಒಂದು ಬಸ್‌ ಇದ್ದಾಗ, ಪ್ರಯಾಣಿಕರ ಒಲವು ಸಹ ಹೆಚ್ಚಾಗುತ್ತದೆ.

ಹಳೇಯ ವಾಹನಗಳು ಇನ್ನೊಂದು ಸಮಸ್ಯೆಯಾಗಿದೆ. ಹೊಸ ಬಸ್‌ಗಳು ಸಂಚರಿಸುತ್ತಿವೆ, ಹಾಗೆಯೇ ಸೀಟು ವ್ಯವಸ್ಥೆ ಸರಿ ಇಲ್ಲದ ಹಳೆಯ ಬಸ್‌ಗಳು ಸಹ ಇವೆ. ಗುಂಡಿ ತುಂಬಿರುವ ಹುಬ್ಬಳ್ಳಿ– ಧಾರವಾಡದ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟದಾಯಕ ಎನಿಸುತ್ತದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ. ಇರುವ ಲೋಪಗಳನ್ನು ಸರಿಪಡಿಸಿ ಇನ್ನಷ್ಟು ಉತ್ತಮ ಸೇವೆ ನೀಡಿದರೆ ಇನ್ನಷ್ಟು ಜನರನ್ನು ಈ ವ್ಯವಸ್ಥೆಗೆ ಆಕರ್ಷಿಸಬಹುದು ಎನ್ನುತ್ತಾರೆ ಖಾಸಗಿ ಕಂಪನಿ ಉದ್ಯೋಗಿ ಶಂಕರ್.

ಬಸ್‌ ಡೇ ಮುಂದುವರಿಸಿ: ಡಂಗನವರ

ಹುಬ್ಬಳ್ಳಿ– ಧಾರವಾಡದಲ್ಲಿ 2017ರಲ್ಲಿ ಬಸ್‌ ಡೇ ಆರಭಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಈ ಬಸ್‌ ಡೇಗೆ ಚಾಲನೆ ನೀಡಿದ್ದರು. ಇದು ಬಹಳ ಜನಪ್ರಿಯವೂ ಆಗಿತ್ತು. ತಿಂಗಳಿಗೆ ಒಂದು ದಿನ ಬಸ್‌ನಲ್ಲಿಯೇ ಎಲ್ಲರೂ ಸಂಚರಿಸಬೇಕು ಎಂಬುದು ಇದರ ಪರಿಕಲ್ಪನೆಯಾಗಿತ್ತು ಎನ್ನುತ್ತಾರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಾಜಿ ಅಧ್ಯಕ್ಷ ಸದಾನಂದ ಡಂಗನವರ.

ಬಸ್‌ ಡೇ ಯಶಸ್ವಿಯಾದರೂ ಅದನ್ನು ಮುಂದುವರೆಸದಿರುವುದು ವಿಷಾದನೀಯ. ಈಗಲೂ ಬಸ್‌ ಡೇಯನ್ನು ಆರಂಭಿಸಿದರೆ ಅದು ಯಶಸ್ವಿಯಾಗುತ್ತದೆ. ಆ ಬಗ್ಗೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎನ್ನುತ್ತಾರೆ ಅವರು.

ಪ್ರಯಾಣಿಕರ ಸೆಳೆಯಲು ಇನ್ನಷ್ಟು ಪ್ರಯತ್ನ

ಬಿಆರ್‌ಟಿಎಸ್ ಅತ್ಯುತ್ತಮ ಸೇವೆಯನ್ನು ನೀಡುತ್ತಿದ್ದು, ಸಾವಿರಾರು ಪ್ರಯಾಣಿಕರು ನಿತ್ಯ ಸಂಚರಿಸುತ್ತಿದ್ದಾರೆ. ಬಹುತೇಕ ಪ್ರಯಾಣಿಕರು ಬಿಆರ್‌ಟಿಎಸ್‌ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಸಾರಿಗೆಗಿಂತ ಇದು ಅತ್ಯುತ್ತಮ ವಿಧಾನವಾಗಿದೆ. ಹಣ ಉಳಿಸಬಹುದು, ಸುರಕ್ಷಿತ ಪ್ರಯಾಣ ಮಾಡಬಹುದು ಹಾಗೂ ವಾಯು ಮಾಲಿನ್ಯದ ಪ್ರಮಾಣವನ್ನು ಸಹ ಕಡಿಮೆ ಮಾಡಬಹುದು ಎನ್ನುತ್ತಾರೆ ಬಿಆರ್‌ಟಿಎಸ್ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಕೇರಿ.

ಇನ್ನಷ್ಟು ಪ್ರಯಾಣಿಕರನ್ನು ಬಿಆರ್‌ಟಿಎಸ್‌ನತ್ತ ಸೆಳೆಯಲು ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ಹೇಳುತ್ತಾರೆ.

ಬಸ್‌ ಶೆಲ್ಟರ್ ನಿರ್ಮಾಣ

ಸೂಕ್ತ ಬಸ್‌ ಶೆಲ್ಟರ್‌ ಇಲ್ಲ ಎಂಬ ದೂರುಗಳು ಇದ್ದು, ಆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಶೆಲ್ಟರ್ ಒದಗಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನ ಸಾಗಿದೆ. ಗೋಕುಲ ರಸ್ತೆಯಲ್ಲಿ ಶೆಲ್ಟರ್ ನಿರ್ಮಾಣ ಮಾಡಲು ಸಮೀಕ್ಷೆ ಸಹ ಮಾಡಲಾಗುತ್ತಿದೆ ಎನ್ನುತ್ತಾರೆ ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಕ ವಿವೇಕಾನಂದ ವಿಶ್ವಜ್ಞ.

ಹೆಚ್ಚು ಬಸ್ ಓಡಿಸಿ

ಬಿಆರ್‌ಟಿಎಸ್ ಸೇವೆ ಆರಂಭವಾದ ಮೇಲೆ ಪ್ರಯಾಣ ಸುಖಕರವಾಗಿದೆ. ದರವೂ ನ್ಯಾಯಯುತವಾಗಿದ್ದು, ಸಾಮಾನ್ಯರೂ ಸಹ ಭರಿಸಬಹುದಾಗಿದೆ. ಪ್ರಯಾಣದ ಅವಧಿಯಂತೂ ಗಣನೀಯವಾಗಿ ಇಳಿದಿದೆ. ಆದರೆ ಪೀಕ್ ಅವರ್‌ಗಳಲ್ಲಿ ಬಸ್‌ನಲ್ಲಿ ನಿಲ್ಲಲು ಆಗದಷ್ಟು ಪ್ರಯಾಣಿಕರು ಇರುತ್ತಾರೆ. ಈ ಸಮಯದಲ್ಲಿ ಹೆಚ್ಚು ಬಸ್ ಓಡಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿ ಶ್ರೀನಿವಾಸ.

ಮಹಿಳಾ ಸುರಕ್ಷತೆಗೂ ಆದ್ಯತೆ ಬೇಕು

ಹೊಸ ವಾಹನಗಳನ್ನು ನಗರ ಸಂಚಾರಕ್ಕೆ ನೀಡಿದರೆ ಉತ್ತಮ. ಈಗ ತುಂಬ ಹಳೆಯದಾದ ಬಸ್‌ಗಳನ್ನು ಓಡಿಸಲಾಗುತ್ತಿದ್ದು, ಹತ್ತಲು, ಪ್ರಯಾಣಿಸಲು ಹಿಂದೇಟು ಹಾಕುವಂತಾಗುತ್ತದೆ. ಅಲ್ಲದೆ ಬಸ್‌ ಶೆಲ್ಟರ್‌ಗಳ ಸಂಖ್ಯೆಯನ್ನು ಸಹ ಹೆಚ್ಚಿಸಿದರೆ ಅನುಕೂಲವಾಗುತ್ತದೆ. ಮಹಿಳಾ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುತ್ತಾರೆ ಸುಮನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT