ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮಕ್ಕಳ ಓದಿಗಾಗಿ ‘ಪುಸ್ತಕ ಜೋಳಿಗೆ’

ಸಾಹಿತಿಗಳು, ಆಸಕ್ತರಿಂದ ಪುಸ್ತಕ ಸಂಗ್ರಹ
Last Updated 30 ಜನವರಿ 2021, 1:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳ ಓದಿಗಾಗಿ ಬಿಇಒ, ಶಿಕ್ಷಕರು ಜೊತೆಯಾಗಿ ಕೈಗೊಂಡ ‘ಪುಸ್ತಕ ಜೋಳಿಗೆ’ ಅಭಿಯಾನದಡಿ ಗ್ರಾಮೀಣ ಹಾಗೂ ತಾಲ್ಲೂಕು ಮಟ್ಟದಲ್ಲಿ 15,000 ಪುಸ್ತಕಗಳು ಸಂಗ್ರಹವಾಗಿವೆ.

‘ಗ್ರಾಮೀಣ ಭಾಗದ ಬಹುತೇಕ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಮಕ್ಕಳು ಓದಲು ಸಾಕಾಗುವಷ್ಟು ಪುಸ್ತಕಗಳಿರಲಿಲ್ಲ. ಪುಸ್ತಕಗಳ ಕೊರತೆ ಬಗ್ಗೆ ಮಕ್ಕಳು ತಿಳಿಸಿದಾಗ, ‘ನನ್ನ ಬಳಿ ಇದ್ದ 500 ಪುಸ್ತಕಗಳನ್ನು ಕೆಲವು ಪಂಚಾಯಿತಿಗಳಿಗೆ ನೀಡಿದೆ. ಮಕ್ಕಳು ಕಥೆ, ಕಾದಂಬರಿಯಂತಹ ಪುಸ್ತಕಗಳಿಗಾಗಿ ಬೇಡಿಕೆ ಇಟ್ಟಾಗ ಇತರರಿಂದ ಪುಸ್ತಕ ಸಂಗ್ರಹಿಸಲು ಮುಂದಾದೆ. ‘ಓದುವ ಬೆಳಕು’ ಯೋಜನೆಗೆ ಪೂರಕವಾಗಿ ಅಭಿಯಾನ ಕೈಗೊಂಡೆವು’ ಎಂದು ಧಾರವಾಡ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೊರೊನಾ ಕಾರಣದಿಂದ ಓದಿನಿಂದ ವಿಮುಖರಾದ ಮಕ್ಕಳನ್ನು ಓದಿನತ್ತ ಸೆಳೆಯಲು ಶಿಕ್ಷಣ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ ವಿವಿಧ ಯೋಜನೆಗಳನ್ನು ರೂಪಿಸಿದ್ದವು. ಅದರ ಭಾಗವಾಗಿ ‘ಓದುವ ಬೆಳಕು’ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಯೋಜನೆಯಡಿ ಗರಿಷ್ಠ ಮಕ್ಕಳನ್ನು ದಾಖಲಿಸಿ, ಅವರ ಹೆಸರನ್ನು ಉಚಿತವಾಗಿ ನೋಂದಣಿ ಮಾಡಿಕೊಂಡು, ಪುಸ್ತಕ ವಿತರಿಸಲು ಇಲಾಖೆ ಸೂಚಿಸಿತ್ತು.

‘ಜಿಲ್ಲೆಯ ಸಾಹಿತಿಗಳು, ವಿಜ್ಞಾನಿಗಳು, ನಿವೃತ್ತ ಅಧಿಕಾರಿಗಳು, ಲೇಖಕರಿಂದ ಪುಸ್ತಕಗಳನ್ನು ಸಂಗ್ರಹಿಸಲು ಯೋಜಿಸಿ, ಒಂದು ತಿಂಗಳಿನಿಂದ ಆ ಕಾರ್ಯದಲ್ಲಿ ನಿರತರಾಗಿದ್ದೇವೆ. ಈಗಾಗಲೇ ಮೂವತ್ತಕ್ಕೂ ಹೆಚ್ಚು ಜನರು ಪುಸ್ತಕಗಳನ್ನು ನೀಡಿದ್ದಾರೆ. ಅಂದಾಜು 8,500 ಪುಸ್ತಕಗಳು ಸಂಗ್ರಹವಾಗಿವೆ. ಧಾರವಾಡ ಗ್ರಾಮೀಣ ಭಾಗದ 16 ಕ್ಲಸ್ಟರ್‌ಗಳಲ್ಲಿ 39 ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಸಿಬ್ಬಂದಿ 6,500 ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ’ ಎಂದು ಉಮೇಶ ಬೊಮ್ಮಕ್ಕನವರ ತಿಳಿಸಿದರು.

‘ಬೆಂಗಳೂರಿನ ಜ್ಞಾನ–ವಿಜ್ಞಾನ ಸಮಿತಿಯವರು, ಸಾಹಿತಿಗಳು ಕೋರಿಯರ್‌ ಮೂಲಕ ಪುಸ್ತಕಗಳನ್ನು ಕಳುಹಿಸಿದ್ದಾರೆ. ಧಾರವಾಡದ ಶ್ರೀನಿವಾಸ ವಡಾಪೆ, ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಶಿವಶಂಕರಯ್ಯ ಹಿರೇಮಠ, ವೆಂಕಟೇಶ ಮಾಚಕನೂರ, ಡಾ. ಸಿ.ಡಿ.ಪಾಟೀಲ, ಕೆ.ಎಚ್‌.ನಾಯಕ, ಎಸ್‌.ಸಿ.ಸರದೇಶಪಾಂಡೆ, ದಿ. ಅಶೋಕ ದೊಡಮನಿ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳನ್ನು ನೀಡಿದ್ದಾರೆ’ ಎಂದರು.

ಆಸಕ್ತರು ಅಭಿಯಾನಕ್ಕೆ ಪುಸ್ತಕ ನೀಡಬಹುದು. ಸಂಪರ್ಕಕ್ಕೆ: ಕೀರ್ತಿವತಿ ವಿ.ಎನ್ ಮೊ:94486 21545, ರಾಘವೇಂದ್ರ ಬಡಿಗೇರ 97405 65105, ಅರುಣ ನವಲೂರ 81238 34886.

ಗ್ರಾಮೀಣ ಮಕ್ಕಳ ಓದಿಗೆ ಅನುಕೂಲವಾಗಲೆಂದು ಸಾರ್ವಜನಿಕರಿಂದ ಪುಸ್ತಕ ಸಂಗ್ರಹಿಸಿ, ಪಂಚಾಯಿತಿಗಳ ಗ್ರಂಥಾಲಯಗಳಿಗೆ ನೀಡುವ ‘ಪುಸ್ತಕ ಜೋಳಿಗೆ ಅಭಿಯಾನ’ ನಡೆಯುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು.
ಉಮೇಶ ಬೊಮ್ಮಕ್ಕನವರ, ಕ್ಷೇತ್ರ ಶಿಕ್ಷಣಾಧಿಕಾರಿ, ಗ್ರಾಮೀಣ ವಲಯ, ಧಾರವಾಡ

‘ಪ್ರತಿ ಶಾಲೆಯಲ್ಲಿ ಓದುಗರ ಕ್ಲಬ್’

‘ಪ್ರತಿ ಶಾಲೆಯಲ್ಲಿ ಶಾಲಾ ಗ್ರಂಥಾಲಯ ನಿರ್ವಹಣೆ, ಬಲವರ್ಧನೆ, ಓದಲು ಪ್ರೇರಣೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಪ್ರತಿ ಶಾಲೆಯಲ್ಲಿ ‘ಓದುಗರ ಕ್ಲಬ್‌’ ಆರಂಭಿಸಿ, ಸಮಗ್ರ ಶಿಕ್ಷಣ ಯೋಜನೆಯಡಿ ತರಗತಿಗಳ ಕೊಠಡಿಯಲ್ಲಿ ‘ಓದುವ ಮೂಲೆ’ (ರೀಡರ್ಸ್‌ ಕಾರ್ನರ್‌) ರಚಿಸಬೇಕು ಎಂದು ತಿಳಿಸಲಾಗಿದೆ’ ಎಂದು ಡಿಡಿಪಿಐ ಎಂ.ಎಲ್ ಹಂಚಾಟೆ ತಿಳಿಸಿದರು.

‘ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿಯೇ ಗ್ರಂಥಾಲಯ ವ್ಯವಸ್ಥೆ ಮಾಡಿ, ಮಕ್ಕಳಿಗೆ ಓದಲು ಅನುಕೂಲಕರ ವಾತಾವರಣ ನಿರ್ಮಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT