ಬುಧವಾರ, ಸೆಪ್ಟೆಂಬರ್ 18, 2019
28 °C
ರಾಘವೇಂದ್ರ ಸ್ವಾಮಿ ರಥೋತ್ಸವ ಎಳೆದು ಪುನೀತರಾದ ಭಕ್ತರು

ರಾಯರ ಉತ್ತರಾರಾಧನೆ ಸಂಭ್ರಮ

Published:
Updated:
Prajavani

ಹುಬ್ಬಳ್ಳಿ: ಗುರು ರಾಘವೇಂದ್ರ ಸ್ವಾಮಿಯ ಉತ್ತರಾರಾಧನೆ ನಗರದ ವಿವಿಧೆಡೆ ಭಾನುವಾರ ಭಕ್ತಿಪೂರ್ವಕವಾಗಿ ನಡೆಯಿತು. ಮೂರು ದಿನಗಳ ಆರಾಧನಾ ಮಹೋತ್ಸವದ ಕಡೆಯ ದಿನವಾದ ಇಂದು ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ, ಪೂಜೆ ಜತೆಗೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಭವಾನಿ ನಗರದಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಿಗ್ಗೆ ಮಹಾ ರಥೋತ್ಸವ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ರಥವನ್ನು ಎಳೆದು ಪುನೀತರಾಗುವ ಜತೆಗೆ, ನರ್ತಿಸಿ ಸಂಭ್ರಮಿಸಿದರು. ಸಂಜೆ ಪಂಡಿತ ಎಂ. ವೆಂಕಟೇಶಕುಮಾರ್ ಅವರು ದಾಸವಾಣಿ ಕಾರ್ಯಕ್ರಮ ಭಕ್ತರನ್ನು ಭಾವಪರವಶಗೊಳಿಸಿತು.

ಗೋಕುಲ ರಸ್ತೆಯ ರಾಮಕೃಷ್ಣನಗರದಲ್ಲಿರುವ ರಾಯರ ಮಠದಲ್ಲಿ ಬೆಳಿಗ್ಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ರಥೋತ್ಸವ, ಹಸ್ತೋದಕ, ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ, ಸಂಜೆ ಅಷ್ಟಾವಧಾನ, ತೊಟ್ಟಿಲು ಪೂಜೆ, ಮಹಾ ಮಂಗಳಾರತಿ ಹಾಗೂ ಫಲ ಮಂತ್ರಾಕ್ಷತೆ ವಿತರಣೆ ಜರುಗಿತು.

ನವನಗರದಲ್ಲಿ ಬೆಳಿಗ್ಗೆ ರಥಾಂಗ ಹೋಮ ಮತ್ತು ರಥೋತ್ಸವ ನೆರವೇರಿತು. ವಿದ್ಯಾನಗರದ ಪರಿಮಳ ಮಾರ್ಗದಲ್ಲಿ ಪಂಡಿತ್ ಡಾ. ಜಯತೀರ್ಥ ಮೆವುಂಡಿ ಅವರಿಂದ ದಾಸವಾಣಿ ನಡೆಯಿತು. ಕುಸುಗಲ್ಲ ರಸ್ತೆಯ ಕುಬೇರಪುರಂನಲ್ಲಿ ಬೆಳಿಗ್ಗೆ ರಥಾಂಗ ಹೋಮ, ಅಷ್ಟಾಕ್ಷರ ಹೋಮ ಹಾಗೂ ರಾಯರ ಹಾಡುಗಳ ಕುರಿತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ದೇಶಪಾಂಡೆನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದವರು ಪಂಡಿತ ಬಾಲಚಂದ್ರ ನಾಕೋಡ ಅವರ ದಾಸವಾಣಿ ಕಾರ್ಯಕ್ರಮ ಆಯೋಜಿಸಿದ್ದರು. ತೊರವಿಗಲ್ಲಿಯಲ್ಲಿ ಪಂಡಿತ ಶ್ರೀಪತಿ ಪಾಡಿಗಾರ್ ಮತ್ತು ಶಿಷ್ಯರಿಂದ ರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು.

Post Comments (+)