ಸೋಮವಾರ, ಸೆಪ್ಟೆಂಬರ್ 23, 2019
24 °C
ವಿವಿಧೆಡೆ ರಾಘವೇಂದ್ರ ಸ್ವಾಮಿ ಚಿತ್ರದ ಮೆರವಣಿಗೆ: ಇಂದು ಉತ್ತರಾರಾಧನೆ

ರಾಯರಿಗೆ ಭಕ್ತಿಪೂರ್ವಕ ಮಧ್ಯಾರಾಧನೆ

Published:
Updated:
Prajavani

ಹುಬ್ಬಳ್ಳಿ: ಪುಣ್ಯಕ್ಷೇತ್ರ ಮಂತ್ರಾಲಯದಲ್ಲಿ ಸಶರೀರವಾಗಿ ಬೃಂದಾವನ ಪ್ರವೇಶ ಮಾಡಿದ ಗುರು ರಾಘವೇಂದ್ರ ರಾಯರ 348ನೇ ಆರಾಧನಾ ಮಹೋತ್ಸವದ ಅಂಗವಾಗಿ, ನಗರದ ವಿವಿಧೆಡೆ ಗುರುವಾರ ಭಕ್ತಿಪೂರ್ವಕವಾಗಿ ರಾಯರ ಮಧ್ಯಾರಾಧನೆ ನಡೆಯಿತು.

ಶಕ್ತಿ ಕಾಲೊನಿ, ಮೃತ್ಯುಂಜಯನಗರ, ವಿದ್ಯಾನಗರ (ಪರಿಮಳ ಮಾರ್ಗ), ದೇಶಪಾಂಡೆ ನಗರ, ತೊರವಿ ಗಲ್ಲಿ, ಭವಾನಿ ನಗರ, ಕುಬೇರಪುರಂ ಹಾಗೂ ರಾಮಕೃಷ್ಣನಗರದಲ್ಲಿ ಆರಾಧನಾ ಮಹೋತ್ಸವವು ಜರುಗಿತು. ರಾಯರ ಬೃಂದಾವನಕ್ಕೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿತು. ಸಾಲುಗಟ್ಟಿ ನಿಂತು ರಾಯರ ದರ್ಶನ ಪಡೆದು ಪುನೀತರಾದ ಭಕ್ತರು, ಮಧ್ಯಾಹ್ನ ಪ್ರಸಾದ ಸೇವಿಸಿದರು.

ಭವಾನಿ ನಗರ:

ಇಲ್ಲಿನ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಿಗ್ಗೆ 7.30ಕ್ಕೆ ಅಷ್ಟೊತ್ತರ ಸಹಿತಿ ಫಲ ಪಂಚಾಮೃತ, 10.30ಕ್ಕೆ ಕನಕಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆದವು. ಸಂಜೆ 6ಕ್ಕೆ ಬೆಂಗಳೂರಿನ ಶ್ರೀವಾರಿ ಫೌಂಡೇಷನ್ ಸಹಯೋಗದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಜರುಗಿತು. ಬಳಿಕ 7ಕ್ಕೆ ಪ್ರಹ್ಲಾದರಾಜರ ಉತ್ಸವಾದಿ ಹಾಗೂ ಮಹಾ ಮಂಗಳಾರತಿ ನಡೆಯಿತು.

ಶಕ್ತಿ ಕಾಲೊನಿ (ಮೃತ್ಯುಂಜಯ ನಗರ):

ಬೆಳಿಗ್ಗೆ ಅಷ್ಟೋತ್ತರ, ಅಲಂಕಾರ ಸೇವೆ, ರಥೋತ್ಸವ ಹಾಗೂ ಭೀಮಸೇನಾಚಾರ್ಯ ಮಳಗಿ ಮತ್ತು ನಾರಾಯಣ ಧೂಳಖೇಡ ಅವರ ಪ್ರವಚನ ನಡೆಯಿತು.

ರಾಮಕೃಷ್ಣ ನಗರ:

ಗೋಕುಲ ರಸ್ತೆಯಯಲ್ಲಿರುವ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ಭಕ್ತಾಧಿಗಳ ರಾಯರ ಮಠದಲ್ಲಿ ಬೆಳಿಗ್ಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ರಥೋತ್ಸವ, ಬ್ರಾಹ್ಮಣರ ಪೂಜೆ, ಹಸ್ತೋದಕ, ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ, ಸಂಜೆ ಅಷ್ಟಾವಧಾನ, ತೊಟ್ಟಿಲು ಪೂಜೆ, ಮಹಾ ಮಂಗಳಾರತಿ, ಸೇವಾಕರ್ತರಿಗೆ ಸನ್ಮಾನ ಹಾಗೂ ಫಲ ಮಂತ್ರಾಕ್ಷತೆ ವಿತರಣೆ ನೆರವೇರಿತು.

ತೊರವಿ ಗಲ್ಲಿ:

ಸಿ.ಬಿ.ಟಿ ಸಮೀಪದ ತೊರವಿಗಲ್ಲಿಯ ಲಕ್ಷ್ಮಿ ವೆಂಕಟೇಶ್ವರ ಹಾಗೂ ಮುಖ್ಯಪ್ರಾಣ ದೇವಸ್ಥಾನ ಹಾಗೂ ರಾಘವೇಂದ್ರ ಸ್ವಾಮಿ ವಿಶ್ವಸ್ಥ ಮಂಡಳಿ ವತಿಯಿಂದ ನಡೆದ ಆರಾಧನೆಯಲ್ಲಿ ಬೆಳಿಗ್ಗೆ ವೆಂಕಟೇಶ ಸ್ತೋತ್ರ, ಹಾಗೂ ರಾಘವೇಂದ್ರ ಸ್ತೋತ್ರ ಅಷ್ಟೋತ್ತರಶತ ಪಾರಾಯಣ, ಪಂಚಾಮೃತ, ಸೇವಾಕರ್ತರಿಗೆ ಸಂಕಲ್ಪ ಹಾಗೂ ಮಧ್ಯಾಹ್ನ 12ಕ್ಕೆ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಪಲ್ಲಕ್ಕಿ ಉತ್ಸವ, ಪ್ರವಚನ ಹಾಗೂ ಮಹಾ ಮಂಗಳಾರತಿ ನಡೆಯಿತು.

ನವನಗರ (ಪರಿಮಳ ಮಾರ್ಗ):

ಇಲ್ಲಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಭಕ್ತ ಮಂಡಳಿ ವತಿಯಿಂದ ಬೆಳಿಗ್ಗೆ ಸುಪ್ರಭಾತ, ಅಷ್ಟೊತ್ತರ ಪಾರಾಯಣ, ಪಂಚಾಮೃಋತ, ಸೇವಾ ಸಂಕಲ್ಪ, ಅಲಂಕಾರ, ಹಸ್ತೋದಕ, ಮಧ್ಯಾಹ್ನ ಅಲಂಕಾರ ಬ್ರಾಹ್ಮಣರ ಸೇವೆ, ತೀರ್ಥ ಪ್ರಸಾದ, ಸಂಜೆ ಪಲ್ಲಕ್ಕಿ ಸೇವೆ, ಅಷ್ಟಾವಧಾನ, ತೊಟ್ಟಿಲು ಸೇವೆ, ವಿಶೇಷ ಸೇವೆ ಸಲ್ಲಿಸಿದವರಿಗೆ ಫಲ ಮಂತ್ರಾಕ್ಷತೆ ವಿತರಣೆ ಹಾಗೂ ಮಹತಿ ಧೂಳಖೇಡ ಅವರಿಂದ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದೇಶಪಾಂಡೆ ನಗರ:

ಇಲ್ಲಿನ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ನಡೆದ ಅಷ್ಟೋತ್ತರ ಪಾರಾಯಣದಲ್ಲಿ ಭಕ್ತರು ಮಡಿಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಮಹಾ ಪ್ರಸಾದ ವಿತರಣೆ ಹಾಗೂ ಸಂಜೆ ಬೆಂಗಳೂರಿನ ಭರತಾಂಜಲಿ ನಾಟ್ಯಶಾಲಾದ ಸೀತಾ ಗುರುಪ್ರಸಾದ ಅವರ ತಂಡದಿಂದ ನಾಟ್ಯ ವೈಭವಂ ನೃತ್ಯ ಕಾರ್ಯಕ್ರಮ ಜರುಗಿತು.

ಕುಬೇರಪುರಂ:

ಕುಸುಗಲ್ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಿಗ್ಗೆ 8ಕ್ಕೆ ರಾಯರಿಗೆ 108 ಕಲಶದಿಂದ ಕ್ಷೀರಾಭಿಷೇಕ ನಡೆಯಿತು. ಬಳಿಕ, ಮಕ್ಕಳಿಗೆ ಹಾಗೂ ವಯಸ್ಕರಿಗೆ ರಾಯರ ಹಾಡುಗಳ ಸ್ಪರ್ಧೆ ಆಯೋಜಿಸಲಾಗಿತ್ತು.

ಉತ್ತರಾರಾಧನೆಯ ಇಂದಿನ ಕಾರ್ಯಕ್ರಮಗಳು

* ಭವಾನಿನಗರ: ಉತ್ತರಾರಾಧನೆ, ಬೆಳಿಗ್ಗೆ 10ಕ್ಕೆ ಮಹಾ ರಥೋತ್ಸವ, ಸಂಜೆ 6.30ಕ್ಕೆ ಪಂಡಿತ ಎಂ. ವೆಂಕಟೇಶಕುಮಾರ ಅವರಿಂದ ದಾಸವಾಣಿ ಕಾರ್ಯಕ್ರಮ

* ಕುಬೇರಪುರಂ: ಬೆಳಿಗ್ಗೆ 8ಕ್ಕೆ ರಥಾಂಗ ಹೋಮ, ಅಷ್ಟಾಕ್ಷರ ಹೋಮ, 11ಕ್ಕೆ ರಥೋತ್ಸವ

* ದೇಶಪಾಂಡೆ ನಗರ: ಬೆಳಿಗ್ಗೆ 6.30ಕ್ಕೆ ಅಷ್ಟೋತ್ತರ ಪಾರಾಯಣ, ಸಂಜೆ 6.30ರಿಂದ ಸಂಗೀತ ಕಾರ್ಯಕ್ರಮ, ಪಂಡಿತ ಬಾಲಚಂದ್ರ ನಾಕೋಡ ಮತ್ತು ಸಂಗಡಿಗರಿಂದ ದಾಸವಾಣಿ

* ನವನಗರ (ಪರಿಮಾಳ ಮಾರ್ಗ): ಬೆಳಿಗ್ಗೆ 8.30ಕ್ಕೆ ರಥಾಂಗ ಹೋಮ, 10.30ಕ್ಕೆ ರಥೋತ್ಸವ, ಸಂಜೆ. 7.30ಕ್ಕೆ ಶೋಭಾ ದೇಶಪಾಂಡೆ ಅವರಿಂದ ದಾಸವಾಣಿ.

* ತೊರವಿ ಗಲ್ಲಿ: ಬೆಳಿಗ್ಗೆ 6ಕ್ಕೆ ಪಾರಾಯಣ, 8ಕ್ಕೆ ಸೇವಾಕರ್ತರಿಗೆ ಸಂಕಲ್ಪ, 12ಕ್ಕೆ ಪ್ರಸಾದ ವಿತರಣೆ, ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ, ರಾತ್ರಿ 9.30ಕ್ಕೆ ಶ್ರೀಪತಿ ಪಾಡಿಗಾರ್ ಶಿಷ್ಯ ವೃಂದದಿಂದ ಸಂಗೀತ ಕಾರ್ಯಕ್ರಮ

* ರಾಮಕೃಷ್ಣ ನಗರ: ಬೆಳಿಗ್ಗೆ 6ಕ್ಕೆ ಸುಪ್ರಭಾತ, ಪಾರಾಯಣ, 10.30ಕ್ಕೆ ರಥೋತ್ಸವ, ಮಧ್ಯಾಹ್ನ 12ಕ್ಕೆ ತೀರ್ಥ ಪ್ರಸಾದ ವಿತರಣೆ, ಸಂಜೆ 7ಕ್ಕೆ ತೊಟ್ಟಿಲು ಪೂಜೆ, ಫಲ ಮಂತ್ರಾಕ್ಷತೆ ವಿತರಣೆ

Post Comments (+)