ಶನಿವಾರ, ಏಪ್ರಿಲ್ 17, 2021
32 °C
ನೈರುತ್ಯ ರೈಲ್ವೆ ಸಜ್ಜಾದರೂ, ಮುಂದಾಗದ ಜಿಲ್ಲಾಡಳಿತ

ಆರಂಭವಾಗದ ರೈಲ್ವೆ ಕೆಳಸೇತುವೆ ಕಾಮಗಾರಿ

ಪ್ರಮೋದ ಜಿ.ಕೆ. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣ ಮತ್ತು ಆ ಭಾಗದ ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ಉಣಕಲ್‌ ರೈಲ್ವೆ ನಿಲ್ದಾಣ ಯಾರ್ಡ್‌ ವ್ಯಾಪ್ತಿಯಲ್ಲಿ ಕೆಳಸೇತುವೆ ನಿರ್ಮಿಸಬೇಕು ಎನ್ನುವ ಟಿಂಬರ್‌ ಯಾರ್ಡ್‌, ಶಿರಡಿ ನಗರದ ಜನರ ಬಹುದಿನಗಳ ಬೇಡಿಕೆ ಇನ್ನೂ ಈಡೇರಿಲ್ಲ.

ಶಾಸಕ ಜಗದೀಶ ಶೆಟ್ಟರ್‌ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಉಣಕಲ್‌ ರೈಲ್ವೆ ನಿಲ್ದಾಣ ಯಾರ್ಡ್‌ ವ್ಯಾಪ್ತಿಯಲ್ಲಿ ಕೆಳಸೇತುವೆ ನಿರ್ಮಿಸಿದರೆ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದರು. ಆದ್ದರಿಂದ ರೈಲ್ವೆ ಅಧಿಕಾರಿಗಳು 2018ರ ಅಕ್ಟೋಬರ್‌ 4ರಂದು ಜಿಲ್ಲಾಧಿಕಾರಿಗೆ ‍ಪತ್ರ ಬರೆದು, ಕೆಳಸೇತುವೆ ನಿರ್ಮಿಸಲು ಜಾಗ ಗುರುತಿಸಲಾಗಿದೆ. ಸಂಪರ್ಕ ರಸ್ತೆಗೆ ಗುರುತಿಸಲಾಗಿರುವ ಜಾಗಕ್ಕೆ ಅನುಮೋದನೆ ಕೊಡಬೇಕು ಎಂದು ಕೋರಿದ್ದರು.

ಆದ್ದರಿಂದ ಈ ಕುರಿತು ವರದಿ ನೀಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ, ಹುಬ್ಬಳ್ಳಿ ತಹಶೀಲ್ದಾರ್‌ಗೆ 2018ರ ನವೆಂಬರ್‌ 15ರಂದು ಪತ್ರ ಬರೆದಿದ್ದರು. ಇದೇ ವರ್ಷದ ಏಪ್ರಿಲ್‌ನಲ್ಲಿ ಇದಕ್ಕೆ ಉತ್ತರ ನೀಡಿರುವ ಹುಬ್ಬಳ್ಳಿ ತಹಶೀಲ್ದಾರ್‌ ‘ರೈಲ್ವೆ ಕೆಳಸೇತುವೆ ನಿರ್ಮಿಸುವುದರಿಂದ ಶಿರಡಿ ಮತ್ತು ಟಿಂಬರ್ ಯಾರ್ಡ್‌ ಜನರಿಗೆ ಸೂಕ್ತ ರೈಲ್ವೆ ಸಂಪರ್ಕ ಏರ್ಪಟ್ಟು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಕಂದಾಯ ನಿರೀಕ್ಷಕರು ವರದಿ ಕೊಟ್ಟಿದ್ದಾರೆ’ ಎಂದಿದ್ದಾರೆ. ಆದರೆ, ಜಿಲ್ಲಾಡಳಿತ ಭೂಮಿ ಹಸ್ತಾಂತರಿಸುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಆದ್ದರಿಂದ ರೈಲ್ವೆ ಇಲಾಖೆ ಕಾಮಗಾರಿ ಆರಂಭಿಸಿಲ್ಲ. ಜಿಲ್ಲಾಧಿಕಾರಿಗಳು ಈ ಕುರಿತು ಇದೇ ಜೂನ್‌ 27ರಂದು ಮತ್ತೆ ಮಹಾನಗರ ಪಾಲಿಕೆ ಮತ್ತು ತಹಶೀಲ್ದಾರ್‌ಗೆ ಪತ್ರ ಬರೆದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗೆ ಫೋನ್‌ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.

ಕೆಳಸೇತುವೆ ನಿರ್ಮಾಣವಾದರೆ ಉಣಕಲ್‌, ಶಿರಡಿ, ದೇವಪ್ರಿಯನಗರ, ಟಿಂಬರ್‌ ಯಾರ್ಡ್‌, ಸಿದ್ಧಗಂಗಾ ನಗರದ ಜನರು ರಾಜನಗರ, ವಿಶ್ವೇಶ್ವರ ನಗರ, ಅಶೋಕ ನಗರ, ಶಕ್ತಿನಗರ, ಪತ್ರಕರ್ತರ ಕಾಲೊನಿಗೆ ಸುಲಭವಾಗಿ ಹೋಗಲು ಸಾಧ್ಯವಾಗುತ್ತದೆ. ಈ ಬಡಾವಣೆಗಳ ಅನೇಕ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಸಾಯಿನಗರಕ್ಕೆ ಹೋಗುತ್ತಾರೆ. ಕೆಳಸೇತುವೆ ಇಲ್ಲದ ಕಾರಣ ಕಾಲೇಜು ವಿದ್ಯಾರ್ಥಿಗಳು ರೈಲಿನ ಕೆಳಗಡೆಯಿಂದ ಹಳಿ ದಾಟುತ್ತಾರೆ.

ವಾಣಿಜ್ಯ ನಗರಿಯಲ್ಲಿ ಹೆಚ್ಚು ಕ್ರೀಡಾಚಟುವಟಿಕೆಗಳು ನಡೆಯುತ್ತಿವೆ. ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಮತ್ತು ಅನೇಕ ರಣಜಿ ಪಂದ್ಯಗಳು ಇಲ್ಲಿ ಆಯೋಜನೆಯಾಗುತ್ತವೆ. ವಿಮಾನಯಾನ ಸಂಪರ್ಕ ಇರುವ ಕಾರಣ ಭವಿಷ್ಯದಲ್ಲಿ ಐಪಿಎಲ್‌ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯಿದೆ. ಒಳಸೇತುವೆ ನಿರ್ಮಿಸಿದರೆ ಈ ಭಾಗದ ಜನರು ಸುಲಭವಾಗಿ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಹೋಗಲು ಅನುಕೂಲ ಕೂಡ ಆಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.