ಹುಬ್ಬಳ್ಳಿ: ‘ಕೇಂದ್ರ ಸರ್ಕಾರವು ಅನುಮೋದನೆ ನೀಡಿದ ಏಕೀಕೃತ ಪಿಂಚಣಿ ಯೋಜನೆಯಿಂದ (ಯುಪಿಎಸ್) ನೈರುತ್ಯ ರೈಲ್ವೆ ವ್ಯಾಪ್ತಿಯ ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್) 31,230 ನೌಕರರು ಹಾಗೂ ಹಳೇ ಪಿಂಚಣಿ ಯೋಜನೆಯ 7,712 ನೌಕರರು ಸೇರಿ ಒಟ್ಟು 38,942 ನೌಕರರಿಗೆ ಪ್ರಯೋಜನ ದೊರೆಯಲಿದೆ’ ಎಂದು ನೈರುತ್ಯ ರೈಲ್ವೆಯ ಆರ್ಥಿಕ ಸಲಹೆಗಾರ್ತಿ ಮತ್ತು ಮುಖ್ಯ ಲೆಕ್ಕಾಧಿಕಾರಿ ಕುಸುಮಾ ಹರಿಪ್ರಸಾದ ತಿಳಿಸಿದರು.
‘ರಾಷ್ಟ್ರೀಯ ಪಿಂಚಣಿ ಯೋಜನೆಗಿಂತ ಈ ಯೋಜನೆಯಲ್ಲಿ ನೌಕರರಿಗೆ ಹೆಚ್ಚಿನ ಪ್ರಯೋಜನಗಳಿವೆ. ತಮಗೆ ಯಾವುದು ಸೂಕ್ತ ಎಂಬುದನ್ನು ನೋಡಿಕೊಂಡು ನೌಕರರು ಯುಪಿಎಸ್ ಅಥವಾ ಎನ್‌ಪಿಎಸ್ ಆಯ್ಕೆ ಮಾಡಿಕೊಳ್ಳಬೇಕು. ಎನ್‌ಪಿಎಸ್‌ನಲ್ಲಿ ಖಚಿತ ಪಿಂಚಣಿ ಸೌಲಭ್ಯ ಇರಲಿಲ್ಲ. ಖಚಿತ ಪಿಂಚಣಿ ನೀಡಬೇಕೆಂದು ಬಹು ದಿನಗಳ ಬೇಡಿಕೆಯಾಗಿತ್ತು. ಇದನ್ನು ಯಪಿಎಸ್ ಯೋಜನೆಯಲ್ಲಿ ಈಡೇರಿಸಲಾಗಿದೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಯುಪಿಎಸ್ ಯೋಜನೆಯಲ್ಲಿ ‘ಖಚಿತ ಪಿಂಚಣಿ’ಯಡಿ ಕನಿಷ್ಠ 25 ವರ್ಷ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ನಿವೃತ್ತಿ ಆಗುವುದಕ್ಕಿಂತ ಮುಂಚೆ 12 ತಿಂಗಳ ಸರಾಸರಿ ಮೂಲವೇತನದ ಶೇ 50ರಷ್ಟು ಹಣ ಪಿಂಚಣಿ ರೂಪದಲ್ಲಿ ದೊರೆಯಲಿದೆ. ಇದಕ್ಕಿಂತ ಕಡಿಮೆ ಅವಧಿ ಕಾರ್ಯನಿರ್ವಹಿಸಿದ್ದರೆ ಅವರ ಸೇವಾವಧಿಗೆ ಅನುಗುಣವಾಗಿ ಪಿಂಚಣಿ ದೊರೆಯಲಿದೆ. ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ‘ಖಚಿತ ಕುಟುಂಬ ಪಿಂಚಣಿ’ಯಡಿ ನಿವೃತ್ತ ನೌಕರ ಮೃತಪಟ್ಟಾಗ ಅವರು ಪಡೆಯುತ್ತಿದ್ದ ಪಿಂಚಣಿಯ ಶೇ 60ರಷ್ಟು ಹಣವು ಸಂಗಾತಿಗೆ ದೊರಕಲಿದೆ’ ಎಂದು ಹೇಳಿದರು.
‘ನೌಕರನೊಬ್ಬ ಕನಿಷ್ಠ 10 ವರ್ಷ ಕಾರ್ಯನಿರ್ವಹಿಸಿದ್ದರೆ ಅಂತಹವರಿಗೆ ನಿವೃತ್ತಿಯ ನಂತರ ಪ್ರತಿ ತಿಂಗಳು ಕನಿಷ್ಠ ₹ 10 ಸಾವಿರ ಪಿಂಚಣಿ ಸಿಗಲಿದೆ. ಹಣದುಬ್ಬರ ಏರಿಳಿತಕ್ಕೆ ಅನುಗುಣವಾಗಿ ಪಿಂಚಣಿ ಹೊಂದಾಣಿಕೆ ಮಾಡಲಾಗುತ್ತದೆ. ಇದರಿಂದ ಅಗತ್ಯವಸ್ತುಗಳ ಬೆಲೆ ಏರಿಕೆಯನ್ನು ಸರಿದೂಗಿಸಬಹುದು’ ಎಂದರು.
‘ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಂತೆಯೇ, ಯುಪಿಎಸ್ ಅಡಿಯಲ್ಲಿ ನಿವೃತ್ತರಾದವರು ಆಲ್ ಇಂಡಿಯಾ ಕನ್ಸೂಮರ್ ಪ್ರೈಸ್ ಇಂಡೆಕ್ಸ್ ಫಾರ್ ಇಂಡಸ್ಟ್ರಿಯಲ್ ವರ್ಕರ್ಸ್ ಬೆಲೆ ಸೂಚ್ಯಂಕವನ್ನು ಆಧರಿಸಿ ಡಿಯರ್ನೆಸ್ ರಿಲೀಫ್ (ತುಟ್ಟಿ ಭತ್ಯೆ) ಪಡೆಯುತ್ತಾರೆ’ ಎಂದು ಮುಖ್ಯ ಆಡಳಿತ ಅಧಿಕಾರಿ ಶುಜಾ ಮಹ್ಮದ್ ಹೇಳಿದರು.
ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.