ಗುರುವಾರ , ಆಗಸ್ಟ್ 22, 2019
27 °C

ಮಳೆ: ವಿದ್ಯಾರ್ಥಿಗಳ ಸಂಕಟ, ಸಂಭ್ರಮ

Published:
Updated:
Prajavani

ಹುಬ್ಬಳ್ಳಿ: ಮೂರ್ನಾಲ್ಕು ದಿನ ಬಿಡುವು ನೀಡಿದ್ದ ಮಳೆ ಬುಧವಾರ ಸಂಜೆ ದಿಢೀರನೆ ಸುರಿದ ಪರಿಣಾಮ ನಗರದಲ್ಲಿ ವಿದ್ಯಾರ್ಥಿಗಳು ಮನೆಗೆ ತೆರಳಲು ಆಗದೇ ಪರದಾಡಿದರು. ಇನ್ನೂ ಕೆಲ ವಿದ್ಯಾರ್ಥಿಗಳು ಮಳೆಯಲ್ಲಿಯೇ ಮಿಂದು ಸಂಭ್ರಮಿಸಿದರು.

ಸಂಜೆ 4ರಿಂದ 5.30ರ ತನಕ ಸುರಿದ ಜೋರು ಮಳೆಗೆ ಹೊಸೂರು ವೃತ್ತ, ಕೋಯಿನ್‌ ರಸ್ತೆ, ದಾಜಿಬಾನ್‌ ಪೇಟೆ ಮುಖ್ಯ ರಸ್ತೆಯಲ್ಲಿ ನೀರು ನಿಂತಿತ್ತು. ವಿದ್ಯಾನಗರ, ಉಣಕಲ್‌, ಜೆಸಿ ನಗರ ಹಾಗೂ ಇತರೆಡೆ ಮಕ್ಕಳು ಮಳೆಯಲ್ಲಿ ನೆನೆದು ಸಂಭ್ರಮ ಪಟ್ಟರು. ಕಿಮ್ಸ್‌ ಎದುರಿನ ಬಿಆರ್‌ಟಿಎಸ್‌ ನಿಲ್ದಾಣದ ಸಮೀಪ ಬಸ್ಸು ವೇಗವಾಗಿ ಹೋಗಿದ್ದರಿಂದ ಸಿಡಿದ ನೀರಿಗೆ ಮಕ್ಕಳು ಖುಷಿ ಪಟ್ಟರು.

ಲ್ಯಾಮಿಂಗ್ಟನ್‌ ಶಾಲೆಯ ಹತ್ತಿರ ನೂರಾರು ವಿದ್ಯಾರ್ಥಿಗಳು ಮನೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದರು. ಅಬ್ಬರಿಸಿದ ಮಳೆಯಿಂದ ಅವರಿಗೆ ಬಸ್‌ ನಿಲ್ದಾಣದಿಂದ ಹೊರಬರಲು ಕೂಡ ಆಗಲಿಲ್ಲ. ತೆಗ್ಗು ಬಿದ್ದ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುತ್ತಿರುವ ದೃಶ್ಯ ಕಂಡು ಬಂದಿತು. 

ಗೋಕುಲ ರಸ್ತೆಯ ಭಾಪಣಾ ಬಡಾವಣೆ, ಹಳೇ ಹುಬ್ಬಳ್ಳಿ ಸದಾಶಿವ ನಗರ ಬಡಾವಣೆ, ಮಂಟೂರು ರೋಡ್‌, ಗುಂಜಾಳ ಪ್ಲಾಟ್‌ಗಳ ಮನೆಗಳಿಗೆ ನೀರು ನುಗ್ಗಿವೆ. ವಿಷಯ ತಿಳಿದ ವಲಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸಿದರು.

ಇಂದಿರಾನಗರದ ಹೆಗಡೆ ಫ್ಯಾಕ್ಟರಿ ಒಳಗೆ ನೀರು ನುಗ್ಗಿದ್ದು, ಸಾಮಗ್ರಿಗಳು ಹಾನಿಯಾಗಿವೆ. ಅರವಿಂದ ನಗರದಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿದ ಕಾರಣ ಜನ ಪರದಾಡಿದ್ದು ಸಾಮಾನ್ಯವಾಗಿತ್ತು.

Post Comments (+)