ಹುಬ್ಬಳ್ಳಿ: ನಗರದಲ್ಲಿ ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆ ಬುಧವಾರ ಮಧ್ಯಾಹ್ನದಿಂದ ಸಂಜೆವರೆಗೆ ಬಿಡುವು ನೀಡಿತ್ತು. ರಾತ್ರಿ ಮತ್ತೆ ಆರಂಭವಾಗಿ ತಡರಾತ್ರಿವರೆಗೂ ಜಿಟಿಜಿಟಿಯಾಗಿ ಸುರಿಯಿತು. ಗ್ರಾಮೀಣ ಪ್ರದೇಶದಲ್ಲಿಯೂ ಮಳೆ ಸುರಿಯಿತು.
ನಗರದ ಕಿಮ್ಸ್ ಎದುರಿನ ಬಿಆರ್‌ಟಿಎಸ್ ಬಸ್ ನಿಲ್ದಾಣದ ಕಾರಿಡಾರ್‌ನಲ್ಲಿ ನೀರು ನಿಂತ ಪರಿಣಾಮ, ಮಿಶ್ರಪಥದಲ್ಲಿ ಸಂಚರಿಸುವ ವಾಹನ ಸವಾರರು ಪರದಾಡಿದರು. ದಾಜಿಬಾನ ಪೇಟೆ ಸುತ್ತಲಿನ ಕೆಲ ವಾಣಿಜ್ಯ ಮಹಡಿಯ ಪಾರ್ಕಿಂಗ್ ಸ್ಥಳಕ್ಕೆ ಅಲ್ಪ ಪ್ರಮಾಣದಲ್ಲಿ ನೀರು ನುಗ್ಗಿತ್ತು. ಗಣೇಶನಗರ, ಆನಂದನಗರ, ಉಣಕಲ್‌ನ ಶಕ್ತಿನಗರ, ಗೋಪನಕಪ್ಪದ ಮಹಾಲಕ್ಷ್ಮಿ ಬಡಾವಣೆಯ ಕಚ್ಚಾ ರಸ್ತೆಗಳೆಲ್ಲ ಕೊಳಚೆಮಯವಾಗಿತ್ತು.
ಮಳೆಯ ತೀವ್ರತೆಗೆ ಗ್ರಾಮೀಣ ಭಾಗದ ಮಣ್ಣಿನ ಮನೆಯ ಗೋಡೆಗಳೆಲ್ಲ ಹಿಗ್ಗುತ್ತಿವೆ. ದಿನದಿಂದ ದಿನಕ್ಕೆ ಮನೆಗಳ ಗೋಡೆ ಕುಸಿತದ ಸಂಖ್ಯೆ ಹೆಚ್ಚಾಗುತ್ತಿದೆ. ಮುಂಜಾಗ್ರತೆಯಾಗಿ ತಾಲ್ಲೂಕಾಡಳಿತ ಹಾಗೂ ಸ್ಥಳೀಯ ಪಂಚಾಯ್ತಿ ಅಧಿಕಾರಿಗಳು, ಕುಸಿಯುವ ಹಂತದಲ್ಲಿರುವ ಮನೆಗಳ ಕುಟುಂಬದವರಿಗೆ ಎಚ್ಚರಿಕೆ ನೀಡಿ, ಸ್ಥಳಾಂತರಕ್ಕೆ ಸೂಚಿಸುತ್ತಿದ್ದಾರೆ.
ನಿರಂತರವಾಗಿ ಸುರಿದ ವರ್ಷಧಾರೆಗೆ ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ಭಾಗದಲ್ಲಿ ಈವರೆಗೆ ಒಟ್ಟು 99 ಮನೆಗಳು ಹಾನಿಯಾಗಿವೆ. ಅವುಗಳಲ್ಲಿ ಐದು ಮನೆಗಳು ಸಂಪೂರ್ಣ ಕುಸಿದಿವೆ.
ಬುಧವಾರ ಶಹರದಲ್ಲಿ ನಾಲ್ಕು, ಗ್ರಾಮೀಣ ಭಾಗದಲ್ಲಿ 24 ಮನೆಗಳ ಗೋಡೆಗಳು ಕುಸಿದಿವೆ. ಶಿರಗುಪ್ಪಿಯಲ್ಲಿ ಅತಿಹೆಚ್ಚು ಏಳು ಮನೆಗಳ ಗೋಡೆಗಳು ಕುಸಿದಿವೆ. ಕುರುಡಿಕೇರಿಯಲ್ಲಿ 5, ಬು. ಅರಳಿಕಟ್ಟಿಯಲ್ಲಿ 3, ಅದರಗುಂಚಿ, ಇನಾಮ್‌ವೀರಾಪುರದಲ್ಲಿ 2, ಗಿರಿಯಾಲ, ವರೂರು, ಮಂಟೂರು, ಕುಸಗಲ್ ಮತ್ತು ಚವರಗುಡ್ಡದಲ್ಲಿ ತಲಾ ಒಂದೊಂದು ಮನೆಗಳು ಹಾನಿಯಾಗಿವೆ. ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಯಡಿ ₹9.50 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಸಿ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿನ ಮಣ್ಣಿನ ಮನೆಗಳು ಸಹ ಕುಸಿಯುತ್ತಿವೆ. ಬುಧವಾರ ವಲಯಾಧಿಕಾರಿಗಳ ಜೊತೆ ಪಾಲಿಕೆ ಆಯುಕ್ತರು ಸಭೆ ನಡೆಸಿ, ಶಿಥಿಲಾವಸ್ಥೆಯಲ್ಲಿರುವ ಮನೆಗಳ ಮಾಹಿತಿ ಪಡೆದರು. ಕುಸಿದು ಬೀಳುವ ಮನೆಗಳ ಮಾಲೀಕರಿಗೆ ಸೂಚನೆ ನೀಡಿ, ತುರ್ತಾಗಿ ಸ್ಥಳಾಂತರವಾಗಲು ನೋಟಿಸ್ ನೀಡಬೇಕು. ಸಂಭವನೀಯ ಅನಾಹುತ ತಪ್ಪಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಶಿಥಿಲಗೊಂಡ ಹಾಗೂ ಸೋರುತ್ತಿರುವ ಶಾಲೆಗಳ ಕೊಠಡಿಗಳನ್ನು ಪರಿಶೀಲಿಸುವಂತೆ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಒತ್ತಾಯಿಸಿದ್ದಾರೆ.
ಶಾಸಕ ಭೇಟಿ ಪರಿಶೀಲನೆ
ಹುಬ್ಬಳ್ಳಿ: ಹು–ಧಾ ವಿಧಾನ ಸಭಾ ಕ್ಷೇತ್ರದ ವಿವಿಧೆಡೆ ಕುಸಿದ ಮನೆಗಳಿಗೆ ಮಂಗಳವಾರ ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ಮಸ್ತಾನ ಸೋಫಾ ಅಕ್ಕಿಪೇಟೆ ಬಾಗಾರಪೇಟೆ ಸೇರಿದಂತೆ ವಿವಿಧೆಡೆ ಭೇಟಿ ನೀಡಿದ ಅವರು ‘ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಬೇಕು’ ಎಂದು ಸೂಚಿಸಿದರು. ತಹಶೀಲ್ದಾರ್ ಆರ್.ಕೆ.ಪಾಟೀಲ ವಲಯ ಆಯುಕ್ತ ಬಸವರಾಜ ಲಮಾಣಿ ಕಂದಾಯ ಅಧಿಕಾರಿ ರವಿ ಬೆಣ್ಣೂರು ಮುನ್ನಾ ಮಾರ್ಕರ್ ಬಸವರಾಜ ಮೆಣಸಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.