ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಮಳೆ; 7 ಮನೆಗಳಿಗೆ ಹಾನಿ

Last Updated 5 ಆಗಸ್ಟ್ 2020, 15:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಂದು ವಾರದಿಂದ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಬುಧವಾರ ಬೆಳಿಗಿನ ಜಾವದಿಂದಲೇ ಆರಂಭವಾಯಿತು. ಬಿಟ್ಟೂಬಿಡದೆ ದಿನಪೂರ್ತಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಯಿತು. ಒಂದೇ ದಿನ ಏಳು ಮನೆಗಳಿಗೆ ಹಾನಿಯಾಗಿದೆ.

ಹಳೇ ಹುಬ್ಬಳ್ಳಿ ಭಾಗದಲ್ಲಿ ಆರು ಮತ್ತು ಸುತಗಟ್ಟಿಯಲ್ಲಿ ಒಂದು ಮನೆಗೆ ಹಾನಿಯಾಗಿದೆ. ಮಳೆ ಹೀಗೆ ಮುಂದುವರಿದರೆ ಹಾನಿಯ ಪ್ರಮಾಣ ಹೆಚ್ಚಾಗಬಹುದು ಎಂದು ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ ತಿಳಿಸಿದ್ದಾರೆ.

ಬುಧವಾರ ಸಂಜೆ ಉಣಕಲ್‌ ಕೆರೆ ಕೋಡಿ ಬಿದ್ದ ಕಾರಣ ಜನ ಕೋಡಿ ಬಿದ್ದ ಕಟ್ಟೆಯ ಮೇಲೆ ನಿಂತು ಫೋಟೊ ತೆಗೆದುಕೊಳ್ಳುತ್ತಿದ್ದ ಚಿತ್ರಣ ಕಂಡುಬಂತು. ಈ ಕೆರೆ ಹೋದ ವರ್ಷವೂ ಕೋಡಿ ಬಿದ್ದಿದ್ದರಿಂದ ಲಿಂಗರಾಜ ನಗರ, ದೇವಿ ನಗರ, ಬನಶಂಕರಿ ಬಡಾವಣೆಯ ಮನೆಗಳಿಗೆ ನೀರು ನುಗ್ಗಿತ್ತು. ಈ ಬಾರಿ ಅನಾಹುತ ಮರುಕಳಿಸಬಾರದೆಂದು ಪಾಲಿಕೆ ಒಂದೂವರೆ ತಿಂಗಳ ಮೊದಲೇ ನಾಲಾಗಳನ್ನು ಸ್ವಚ್ಛಗೊಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಮಳೆಗಾಲ ದೃಷ್ಟಿಯಲ್ಲಿಟ್ಟುಕೊಂಡು ಕೋಡಿ ಬಿದ್ದ ಕೆರೆಯ ನೀರು ಹರಿಯುವ ಮಾರ್ಗದ ನಾಲಾ ಸ್ವಚ್ಛಗೊಳಿಸಲಾಗಿದೆ. ಹೀಗಾಗಿ ನೀರು ಸರಾಗವಾಗಿ ಹರಿದು ಹೋಗುತ್ತದೆ. ಅಂತರ ಗಂಗೆಯ ಕಸ ಬಂದರೆ ತಕ್ಷಣವೇ ಸ್ವಚ್ಛಗೊಳಿಸಲು ಕೆರೆ ಸಮೀಪ ಜೆಸಿಬಿ ಯಂತ್ರ ಸಿದ್ಧವಾಗಿದೆ’ ಎಂದರು.

ಪರದಾಟ: ದುರ್ಗದ ಬೈಲ್‌, ಜನತಾ ಬಜಾರ್‌ ಮಾರುಕಟ್ಟೆ ಮತ್ತು ತುಳಜಾಭವಾನಿ ವೃತ್ತದ ಸಮೀಪಗಳು ನೀರು ತುಂಬಿ, ಚರಂಡಿ ನೀರು ಸೇರಿಕೊಂಡು ರಸ್ತೆ ಮೇಲೆ ಹರಿದಾಡಿದ್ದರಿಂದ ಜನ ಪರದಾಡುವಂತಾಯಿತು.

ವಾಹನ ಸವಾರರು ಕೂಡ ಚಲಿಸಲಾಗದೆ ಪ್ರಯಾಸ ಪಟ್ಟರು. ಹೊತ್ತು ಉರುಳಿದ್ದಂತೆ ಮಳೆಯ ವೇಗ ಹೆಚ್ಚುತ್ತಿದ್ದ ಕಾರಣ ಕೆಲ ಅಂಗಡಿಗಳ ಹೊಸ್ತಿಲ ಸಮೀಪ ನೀರು ಬಂದವು. ಆದ್ದರಿಂದ ಅಂಗಡಿಯ ಮುಂಭಾಗದಲ್ಲಿ ಸಂಗ್ರಹಿಸಿಟ್ಟಿದ್ದ ಕೆಲ ಸಾಮಗ್ರಿಗಳು ತೋಯ್ದು ಹೋದವು. ಬಹಳಷ್ಟು ಮಾಲೀಕರು ಅಂಗಡಿಯನ್ನೇ ತೆರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT