ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆನೀರು ಹಿಡಿಯುವುದೇ ನೀರಾವರಿ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 20 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನಾನು ನನ್ನ ಕೆಲಸದ ಕಾರಣಕ್ಕೇ ಹಲವು ಜನರನ್ನು ಗುಂಪುಗಳಲ್ಲಿ ಭೇಟಿಯಾಗುತ್ತಿರುತ್ತೇನೆ. ಹಲವು ಬಾರಿ ಅವರೊಡನೆ ನೀರಿನ ಕುರಿತು ಮಾತನಾಡುತ್ತೇನೆ. ಆಗೆಲ್ಲಾ ನಾನು ಕೇಳುವ ಮೊದಲ ಪ್ರಶ್ನೆ ನಿಮ್ಮೂರಲ್ಲಿ ಮಳೆ ಎಷ್ಟು?

ಇಲ್ಲಿಯವರೆಗಿನ ಅನುಭವದಂತೆ ಸರಿಯಾದ ಉತ್ತರ ಇಲ್ಲವೇ ಇಲ್ಲ ಎಂಬಷ್ಟು ಅಪರೂಪ. ಆ ಗುಂಪು ಮಕ್ಕಳದಿರಲಿ, ಶಿಕ್ಷಕರದಿರಲಿ, ರೈತರದಿರಲಿ, ರೈತ ಮಹಿಳೆಯದಿರಲಿ, ಪಂಚಾಯತ್ ಅಧಿಕಾರಿಗಳದಿರಲಿ, ಎಲ್ಲರೂ ಈ ಕುರಿತು ಅನಕ್ಷರಸ್ಥರು. ಅಂದರೆ ನಮ್ಮ ಶಿಕ್ಷಣವಿರಲಿ, ತರಬೇತಿಗಳಿರಲಿ, ಸಂಸ್ಕಾರಗಳಲ್ಲಿರಲಿ ನೀರಿನ ಲಭ್ಯತೆಯ ಪ್ರಮಾಣ ಖರ್ಚಿನ ಪ್ರಮಾಣದ ಕುರಿತು ತಿಳಿಸಲು ವ್ಯವಸ್ಥೆಯಿಲ್ಲ. ಅಂದರೆ ಜಲಸಾಕ್ಷರತೆ ನಮ್ಮಲ್ಲಿ ಕನಿಷ್ಠ ಪ್ರಮಾಣದಲ್ಲೂ ಇಲ್ಲ. ಅಷ್ಟೇ ಅಲ್ಲ ಆ ಕುರಿತು ನಮಗೆ ಕುತೂಹಲವೂ ಇಲ್ಲ.

ನಮ್ಮ ರೈತರು ನೀರಾವರಿಗಾಗಿ ಹೋರಾಟ ನಡೆಸಿಯಾರು, ತಮ್ಮ ಹೊಲದಲ್ಲಿ ಬೀಳುವ ನೀರನ್ನು ಹಿಡಿಯುವ ಕುರಿತು ಏನೂ ಮಾಡಲಾರರು. ಕಾರಣವಿಷ್ಟೆ, ತಮ್ಮ ಹೊಲದಲ್ಲಿ ಎಷ್ಟು ನೀರು ಬೀಳುತ್ತದೆ. ಅದರಲ್ಲಿ ಎಷ್ಟನ್ನು ಹಿಡಿದುಕೊಳ್ಳಬಹುದು ಎಂಬುದು ಗೊತ್ತಿಲ್ಲದಾಗ ನೀರು ಹಿಡಿಯಲು ಬೇಕಾದ ಪ್ರೇರಣೆಯೇ ಸಿಗಲಾರದು. ನಾನು ಹಳ್ಳಿಗಳಲ್ಲಿ ವಾರ್ಡ್‌ಸಭೆ, ಗ್ರಾಮಸಭೆಗಳಲ್ಲಿ, ಭಾಗವಹಿಸಿ ಗಮನಿಸಿದ್ದೇನೆ. ನೀರನ್ನು ಹಿಡಿಯುವ ಕುರಿತು, ಕೆರೆ ತೊರೆಗಳ ರಕ್ಷಣೆಯ ಕುರಿತು ಚರ್ಚೆಯಾಗುವುದಿಲ್ಲ. ಪ್ಲಾನ್‌ಗಳಲ್ಲಿ ಅವುಗಳು ಬರುವುದೂ ಇಲ್ಲ. ಇವೆಲ್ಲಕ್ಕೂ ಕಾರಣ ನೀರಿನ ಕುರಿತ ತಿಳಿವಳಿಕೆಯ ಕೊರತೆ.

ಮಳೆ ನೀರಿನ ಲಭ್ಯತೆ ಹಾಗೂ ಸಂರಕ್ಷಣೆಯ ಕುರಿತು ನಮ್ಮಲ್ಲಿ ಈಗ ಬಹುದೊಡ್ಡ ಪ್ರಮಾಣದ ಕೆಲಸವಾಗಬೇಕಿದೆ. ನೀರಾವರಿಯನ್ನು ಬಿಟ್ಟು, ಬೋರ್‌ವೆಲ್‌ಗಳನ್ನುಳಿದು ಮಳೆ ನೀರಿನ ಸಂರಕ್ಷಣೆ ನಮ್ಮ ಮುಖ್ಯ ಕಾರ್ಯಸೂಚಿಯಾಗದಿದ್ದಲ್ಲಿ ನೀರಿನ ವಿಷಯದಲ್ಲಿ ನಾವು ಇನ್ನೂ ಹೆಚ್ಚಿನ ಕಷ್ಟಕ್ಕೆ ಸಿಲುಕುವುದು ನಿಶ್ಚಿತ. ಈಗ ಎಲ್ಲಿ ಹೋದರೂ ಅಲಕ್ಷಿತ ಕೆರೆಗಳು ಕಾಣುತ್ತವೆ. ಈ ಕೆರೆಗಳ ಬಗ್ಗೆ ಸಮುದಾಯದೊಡನೆ ಚರ್ಚಿಸಿದಾಗಲೆಲ್ಲ ಕೆರೆ ನಿಷ್ಪ್ರಯೋಜಕವಾಗಿದೆ. ಮುಚ್ಚಿ ಬಿಡೋಣ ಎಂಬಂತಹ ಮಾತುಗಳೇ ಕೇಳುವುದು.

ಕೆರೆಗಳ ಪುನರುಜ್ಜೀವನ ಯಾರಿಗೂ ಬೇಕಿಲ್ಲ. ಧಾರವಾಡದ ಸಮೀಪದ ಒಂದು ಊರು. ಸಣ್ಣ ಕೆರೆಯೊಂದು ಹಲವು ದಶಕಗಳಿಂದ, ಬಹುಶಃ ಶತಮಾನಗಳಿಂದ ಆ ಊರಿಗೆ ನೀರು ಕೊಟ್ಟಿತ್ತು. ಊರಿಗೆ ಬೋರ್‌ವೆಲ್ ಬಂದಿದ್ದೇ ತಡ ಕೆರೆ ಯಾರಿಗೂ ಬೇಡವಾಯಿತು, ಕೆರೆಯ ಒತ್ತುವರಿಯಾಯಿತು. ಕಾಲುವೆಗಳು ಬಂದಾದವು. ಮತ್ತೆ ಜನರಿಂದ ಬೇಡಿಕೆ, ಕೆರೆ ಮುಚ್ಚೋಣ ಸಮುದಾಯ ಭವನಕಟ್ಟೋಣ. ಇದು ನಾವೆಲ್ಲಾ ಈಗ ಯೋಚಿಸುತ್ತಿರುವ ಟ್ರೆಂಡ್.

ಭಾರತದಂತಹ ದೇಶದಲ್ಲಿ ವಾರ್ಷಿಕ ಸರಾಸರಿ ಮಳೆ 1,000 ಮಿ.ಮೀ.ಗೂ ಹೆಚ್ಚಿರುವಲ್ಲಿ ನೀರಾವರಿಯ ಜಪವನ್ನೇ ಮಾಡುತ್ತಿರುವುದು ಒಂದೋ ಮೌಢ್ಯ ಅಥವಾ ದುರುದ್ದೇಶ. ಕರ್ನಾಟಕದಲ್ಲಿ, ಬಯಲು ಸೀಮೆಯಲ್ಲೂ ಪ್ರತಿಯೊಂದು ಎಕರೆಗೆ 24 ಲಕ್ಷ ಲೀಟರ್ ಮಳೆ ನೀರು ಬೀಳುತ್ತದೆ. ಅದರಲ್ಲಿ ಶೇ 80ವರೆಗೆ ನೀರನ್ನು ಹಿಡಿದುಕೊಳ್ಳಬಹುದು. ರೈತನಿಗೆ ತನ್ನ ಹೊಲದಿಂದ, ಹಳ್ಳಿಗರಿಗೆ ತಮ್ಮೂರಿನಿಂದ ನೀರು ಹರಿದು ಹೊರಗೆ ಹೋದರೆ ಸಿಟ್ಟು ಬರಬೇಕು, ಮಹದಾಯಿ ಹರಿದು ಹೋದರಲ್ಲ. ಆಗ ಹೊಲ-ಹೊಲದಲ್ಲಿ, ಊರೂರಲ್ಲಿ ನೀರು ಹಿಡಿಯುವ ಚಳವಳಿ ಆಗುತ್ತದೆ. ಆಗ ಸುಸ್ಥಿರವಾದ ಕೆಲಸವಾಗಬಲ್ಲುದು.

ನೀರು ನಮ್ಮ ಕೃಷಿಯ ಮಿತಿ ಎಂದು ಎಂದು ಒಪ್ಪಿಕೊಂಡರೂ ನೀರಾವರಿ ಅದಕ್ಕೆ ಉತ್ತರ ಎಂದಾಗಿದ್ದು ಮಾತ್ರ ವಿಪರ್‍ಯಾಸ. ಸಮಯಕ್ಕೆ ಮುಗಿಯದ ಯೋಜನೆಗಳು, ನೀರಾವರಿಯಲ್ಲಿ ಪ್ರಾದೇಶಿಕ ಅಸಮಾನತೆ, ಅಂತರ್‌ರಾಜ್ಯ ನೀರಿನ ಜಗಳಗಳು, ನೀರಾವರಿಯಿಂದ ಹುಟ್ಟುವ ಸೌಳು ಜಮೀನಿನ ಸಮಸ್ಯೆ, ಹೆಚ್ಚುತ್ತಿರುವ ಯೋಜನೆಗಳ ವೆಚ್ಚ, ರಿಪೇರಿ ಕಾಣದ ಕಾಲುವೆಗಳು, ಕುಸಿಯುತ್ತಿರುವ ನೀರಿನ ಮಟ್ಟ ಇವೆಲ್ಲವೂ ಸಮಸ್ಯೆಗೇ ಕಾರಣವಾಗುವಂಥವು.

ನೀರಾವರಿಯ ಸಮಸ್ಯೆ ಒಂದೆರಡಲ್ಲ; ಬೆಳೆ ವೈವಿಧ್ಯನಾಶ, ಸವಳು-ಜವಳು, ಏರುತ್ತಿರುವ ಯೋಜನಾ ವೆಚ್ಚ, ಮುಗಿಯದ ಯೋಜನೆಗಳು, ಕಾಲುವೆಗಳಲ್ಲಿ ಹರಿಯದ ನೀರು, ಹಾಗಾಗಿ ನೀರು ಹಿಡಿಯುವುದಕ್ಕಿಂತ ದೊಡ್ಡ, ದಕ್ಷ ನೀರಾವರಿ ಯೋಚನೆಯಲ್ಲಿಲ್ಲಮತ್ತು ಈ ಕುರಿತು ಸರ್ಕಾರ, ಕೃಷಿ ವಿಶ್ವವಿದ್ಯಾಲಯ, ಇಲಾಖೆಗಳು, ಪಂಚಾಯತ್ ರಾಜ್ಯ ಸಂಸ್ಥೆಗಳು ಸೇರಿ ಕೆಲಸ ಮಾಡಲು ಪಣ ತೊಡಬೇಕಿದೆ. ನೀರು ಹಿಡಿದ ರೈತರು, ಗಿಡಗಳನ್ನು ನೆಟ್ಟು ಸಮಗ್ರ ಕೃಷಿ ಮಾಡಿದ ರೈತರು ಬರಗಾಲಕ್ಕೂ ಹೆದರದ ಧೈರ್ಯ ಗಳಿಸಿದ್ದಾರೆ. ಅವರು ಅಪರೂಪದ ಉದಾಹರಣೆಯಾಗಿದ್ದಾರೆ. ಉತ್ಕೃಷ್ಟತೆಯ ದ್ವೀಪವಾಗಿದೆಯಷ್ಟೇ ಉಳಿದಿದೆ. ಧಾರವಾಡ ಜಿಲ್ಲೆಯ ಸೂರಶೆಟ್ಟಿಕೊಪ್ಪದ ಸುತ್ತಲಿನ ಹಳ್ಳಿಗಳು ಅಂತಹದ್ದೊಂದು ಮಾದರಿ ಸೃಷ್ಟಿಸಿವೆ.

ಇನ್ನು ಮುಂದೆ ಎರಡು ವರ್ಷಗಳಿಗೊಮ್ಮೆ ಬರ ಬರಬಹುದು. ಜಾಗತಿಕ ತಾಪಮಾನ- ಹವಾಮಾನ ವೈಪರೀತ್ಯ ಎಂಬ ಅವಳಿ ಭೂತಗಳು ನಮ್ಮೆದುರು ನಿಂತಿವೆ. ಹೊಸ ಹೊಸ ರೋಗಗಳು ನಮ್ಮನ್ನು ಕಾಡುತ್ತಿವೆ. ಭೂಮಿಯ ಮೇಲಿನ ಜೀವಸಂಕುಲದ ಭವಿಷ್ಯವೇ ಅತಂತ್ರವಾಗಿದೆ.. ಸಮಸ್ಯೆಗಳಿಗೆ ಜನಪ್ರಿಯ ಪರಿಹಾರಗಳನ್ನಷ್ಟೇ ಯೋಜಿಸುತ್ತ ಕುಳಿತುಕೊಳ್ಳದೆ ದೀರ್ಘಕಾಲೀನ ಪರಿಹಾರಗಳ ಕುರಿತು ಯೋಚಿಸಲೇಬೇಕಾದ ಸಂದರ್ಭ. ಈಗ ನಮ್ಮ ಹೀರೋಗಳು ಯಾರು? ಕಾಲುವೆ ನೀರಾವರಿ, ಕೊಳವೆ ಬಾವಿಗಳು. ಅವುಗಳನ್ನು ಕಡಿಮೆ ಮಾಡಿ ಅವುಗಳ ಸ್ಥಾನಗಳಲ್ಲಿ ಮಳೆನೀರ ಸಂಗ್ರಹ, ಕೆರೆ, ಬಾವಿ ತೊರೆಗಳ ಪುನರುಜ್ಜೀವನ, ವೃಕ್ಷಾರೋಪಣಗಳನ್ನು ಸ್ಥಾಪಿಸದಿದ್ದಲ್ಲಿ ಬರುವ ದಿನಗಳಲ್ಲಿ ನಮ್ಮ ಜೀವನ ಕಷ್ಟಕರವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT