ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹಕ್ಕೆ ಒತ್ತು ಕೊಡಿ

ಉದ್ಯಮಿಗಳಿಗೆ ಜಾಗೃತಿ ಮೂಡಿಸಲು ವಿಚಾರ ಸಂಕಿರಣ: ಭರತ್‌ ಅನಿಸಿಕೆ
Last Updated 26 ಜೂನ್ 2019, 16:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: 2020ರ ವೇಳೆಗೆ ದೇಶದ 21 ಮಹಾನಗರಗಳಲ್ಲಿ ನೀರಿನ ಬರ ತೀವ್ರವಾಗಲಿದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಆದ್ದರಿಂದ ಕೈಗಾರಿಕೋದ್ಯಮಿಗಳು ಕೂಡ ಮಳೆ ನೀರು ಸಂಗ್ರಹಕ್ಕೆ ಒತ್ತು ಕೊಡಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಭರತ್‌ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಬ್ಯಾಂಕ್‌ ಆಫ್‌ ಬರೋಡಾ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಿಮೆಗಳ ಮಂತ್ರಾಲಯ (ಎಂಎಸ್‌ಎಂಇ) ಸಹಯೋಗದಲ್ಲಿ ಬುಧವಾರ ನಡೆದ ಮಳೆ ನೀರು ಸಂಗ್ರಹ, ಸೌರಶಕ್ತಿಯ ಮಹತ್ವ ಮತ್ತು ಕೈಗಾರಿಕೆಗಳಲ್ಲಿ ಇ ತ್ಯಾಜ್ಯ ನಿರ್ವಹಣೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಪ್ರತಿ ಉದ್ಯಿಮೆದಾರರಿಗೆ ಸಾಮಾಜಿಕ ಜವಾಬ್ದಾರಿ ಮುಖ್ಯ. ಕೈಗಾರಿಕಾ ಘಟಕಗಳಲ್ಲಿ ಮಳೆ ನೀರು ಸಂಗ್ರಹ ಮಾಡಲು ಬಳಸುವ ಉಪಕರಣಗಳಿಗೆ ಸರ್ಕಾರ ಶೇ 75ರಷ್ಟು ಸಬ್ಸಿಡಿ ನೀಡುತ್ತದೆ. ಇದರ ಸೌಲಭ್ಯ ಪಡೆದುಕೊಳ್ಳಬೇಕು’ ಎಂದರು.

ಒಆರ್‌ಬಿ ಸೌರಶಕ್ತಿ ಕಂಪನಿಯ ಪ್ರತಿನಿಧಿ ಎಂ.ಪಿ. ರಮೇಶ ‘ಮನೆಗೆ ಸೌರಶಕ್ತಿ ಸೌಲಭ್ಯ ಕಲ್ಪಿಸಿ ಅಗತ್ಯ ಇರುವಷ್ಟು ಬಳಸಿಕೊಂಡು ಉಳಿದದ್ದನ್ನು ಗ್ರಿಡ್‌ ಮೂಲಕ ಸಂಗ್ರಹಿಸಿಡಬಹುದು. ಸೌರಶಕ್ತಿಯಿಂದ ಉತ್ಪಾದಿಸಿದ ವಿದ್ಯುತ್‌ ರಾತ್ರಿ ವೇಳೆ ಕೂಡ ಬಳಸಿಕೊಳ್ಳಲು ಅವಕಾಶವಿದೆ. ಇದರಿಂದ ವಿದ್ಯುತ್‌ ಬಿಲ್‌ ಕಡಿಮೆ ಮಾಡಬಹುದು. ಭವಿಷ್ಯದಲ್ಲಿ ವಿದ್ಯುತ್‌ ಸಮಸ್ಯೆ ಕೂಡ ಕಡಿಮೆಯಾಗುತ್ತದೆ’ ಎಂದು ಅಭಿ‍ಪ್ರಾಯ ಪಟ್ಟರು.

ಸಂಪನ್ಮೂಲ ವ್ಯಕ್ತಿ ವಾಣಿಶ್ರೀ ಎಸ್‌. ಹಡಗಲಿ ಇ ತ್ಯಾಜ್ಯದ ಬಗ್ಗೆ ಮಾತನಾಡಿ ‘ಎಲೆಕ್ಟ್ರಾನಿಕ್‌ ಉಪಕರಣಗಳಿಂದ ಇ ತ್ಯಾಜ್ಯದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದನ್ನು ಮರುಬಳಕೆ ಮತ್ತು ಮರುಮಾರಾಟಕ್ಕೆ ಅವಕಾಶವಿದ್ದರೂ ನಾವು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಭಾರತದಲ್ಲಿ ವರ್ಷಕ್ಕೆ ಶೇ 27ರಷ್ಟು ಮಾತ್ರ ಮರುಪೂರಣ ಮಾಡುತ್ತಿದ್ದೇವೆ. ಇದರ ಪರಿಣಾಮ ಮನುಷ್ಯರ ಆರೋಗ್ಯದ ಮೇಲಾಗುತ್ತಿದೆ. ಕಿಡ್ನಿ, ಮೆದುಳಿಗೆ ಪೆಟ್ಟು ಬೀಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಎಂಎಸ್‌ಎಂಇ ನಿರ್ದೇಶಕ ಮಿಲಿಂದ ಪಿ. ಬಾರಪತ್ರಿ, ಸಹಾಯಕ ನಿರ್ದೇಶಕ ಆರ್‌.ಬಿ. ಅರ್ಕಸಾಲಿ, ಬ್ಯಾಂಕ್‌ ಆಫ್‌ ಬರೋಡಾದ ವಿಭಾಗೀಯ ಕಚೇರಿಯ ಪ್ರಧಾನ ವ್ಯವಸ್ಥಾಪಕ ರಾಮಕೃಷ್ಣ ನಾಯರ್‌, ಅಕ್ಷಯ ಪಾರ್ಕ್‌ ಶಾಖೆಯ ಮುಖ್ಯಸ್ಥ ಡಿ. ಶ್ರೀನಿವಾಸ, ಹಿರಿಯ ವ್ಯವಸ್ಥಾಪಕ ಡಿ. ಸುದರ್ಶನ್‌, ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷರಾದ ಮಹೇಂದ್ರ ಲಡ್ಡದ, ಅಶೋಕ ತೋಳಣ್ಣನವರ, ಗೌರವ ಕಾರ್ಯದರ್ಶಿ ವಿನಯ ಜವಳಿ, ಜಂಟಿ ಕಾರ್ಯದರ್ಶಿ ಅಶೋಕ ಗಡಾದ, ಮಹಿಳಾ ವಿಭಾಗದ ಅಧ್ಯಕ್ಷೆ ರತಿ ಶ್ರೀನಿವಾಸನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT